ನವದೆಹಲಿ, ಏ. 6, ಜಾಗತಿಕ ಪಿಡುಗು ಕೊರೊನಾ ವೈರಸ್ ಸೋಂಕಿನ ವಿರುದ್ಧದ ದೇಶದ ಹೋರಾಟಕ್ಕೆ ಕ್ರೀಡಾ ತಾರೆಗಳ ನೆರವಿನ ಹಸ್ತ ಮುಂದುವರಿದಿದೆ. ಭಾರತದ ಮುಖ್ಯ ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ಹಾಗೂ ಖ್ಯಾತ ಸ್ನೂಕರ್ ಹಾಗೂ ಬಿಲಿಯರ್ಡ್ಸ್ ಆಟಗಾರ ಪಂಕಜ್ ಆಡ್ವಾಣಿ ಕೊರೊನಾ ವಿರುದ್ಧದ ಹೋರಾಟಕ್ಕೆ ನೆರವು ನೀಡಿದವರ ಸಾಲಿಗೆ ಇದೀಗ ಹೊಸ ಸೇರ್ಪಡೆಯಾಗಿದ್ದಾರೆ.ಮಾಜಿ ಆಲ್ ಇಂಗ್ಲೆಂಡ್ ಚಾಂಪಿಯನ್ ಗೋಪಿಚಂದ್ 26 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಈ ಕುರಿತು ಟೈಮ್ಸ್ ಆಫ್ ಇಂಡಿಯಾಗೆ ಮಾಹಿತಿ ನೀಡಿರುವ ಅವರು, "ಕೋವಿಡ್ -19 ವಿರುದ್ಧ ಹೋರಾಟ ನಡೆಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸಹಾಯ ಮಾಡಲು ನಾನು ನನ್ನ ಸಣ್ಣ ಕೊಡುಗೆ ನೀಡುತ್ತಿದ್ದೇನೆ," ಎಂದಿದ್ದಾರೆ. ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ ಮತ್ತು ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಗೋಪಿಚಂದ್, ಪಿಎಂ-ಕೇರ್ಸ್ ನಿಧಿಗೆ 11 ಲಕ್ಷ ರೂ., ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ರೂ. ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಲಕ್ಷ ರೂ. ಕೊಡುಗೆ ನೀಡಿದ್ದಾರೆ. "ನಮ್ಮ ದೇಶವು ತುಂಬಾ ವೈವಿಧ್ಯಮಯವಾಗಿದೆ ಮತ್ತು ಎಲ್ಲ ಸವಾಲುಗಳ ಮಧ್ಯೆಯೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಉತ್ತಮ ಕೆಲಸ ಮಾಡುತ್ತಿವೆ. ನಮ್ಮಗಳ ಅಲ್ಪ ಕಾಣಿಕೆಯೊಂದಿಗೆ ಅದರಲ್ಲೂ ವಿಶೇಷವಾಗಿ ಸೂಚನೆಗಳನ್ನು ಅನುಸರಿಸಿ ಮತ್ತು ಮನೆಯಲ್ಲಿಯೇ ಇರುವುದರಿಂದ ಅವರಿಗೆ ಸಹಾಯ ಮಾಡೋಣ," ಎಂದು ಗೋಪಿಚಂದ್ ಹೇಳಿದ್ದಾರೆ.