ಶ್ರೀನಗರ, ಫೆ 12 : ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿ, ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ (ಯುಟಿ) ವಿಂಗಡಿಸಿದ ಆಗಸ್ಟ್ 5ರ ನಂತರ ಕಾಶ್ಮೀರ ಕಣಿವೆಯಲ್ಲಿ ಉಂಟಾಗಿರುವ ಒಟ್ಟಾರೆ ಪರಿಸ್ಥಿತಿಯನ್ನು ಪರಿಶೀಲಿಸಲು 25 ಸದಸ್ಯರ ಮತ್ತೊಂದು ವಿದೇಶಿ ನಿಯೋಗ ಬುಧವಾರ ಇಲ್ಲಿಗೆ ಆಗಮಿಸಿದೆ.
ಆಗಸ್ಟ್ 5 ರ ನಂತರ ಕಾಶ್ಮೀರ ಕಣಿವೆಗೆ ಭೇಟಿ ನೀಡುತ್ತಿರುವ ವಿವಿಧ ಯುರೋಪಿಯನ್ ರಾಷ್ಟ್ರಗಳ ರಾಯಭಾರಿಗಳು ಮತ್ತು ಸಂಸತ್ ಸದಸ್ಯರ ಮೂರನೇ ನಿಯೋಗ ಇದಾಗಿದೆ. ಆದಾಗ್ಯೂ, ದೇಶದ ಸಂಸದರು ಮತ್ತು ರಾಜಕೀಯ ಮುಖಂಡರಿಗೆ ಕಾಶ್ಮೀರಕ್ಕೆ ಭೇಟಿ ನೀಡಲು ಅವಕಾಶ ನಿರಾಕರಿಸಿರುವಾಗ, ವಿದೇಶಿ ನಿಯೋಗಗಳಿಗೆ ಅವಕಾಶ ನೀಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧ ಪಕ್ಷಗಳು ಪ್ರಶ್ನಿಸಿವೆ.
ನಿಯೋಗ ಬೇಸಿಗೆ ರಾಜಧಾನಿ ಶ್ರೀನಗರಕ್ಕೆ ಆಗಮಿಸಿದ ಕೂಡಲೇ ಅವರನ್ನು ಪ್ರಸಿದ್ಧ ದಾಲ್ ಸರೋವರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಅವರು ಚಳಿಯ ವಾತಾವರಣದ ನಡುವೆಯೂ ಶಿಕರ ರೈಡಿಂಗ್ ಮಾಡಿ ಸಂಭ್ರಮಪಟ್ಟರು.
ಅಫ್ಘಾನಿಸ್ತಾನ, ಜರ್ಮನಿ, ಕೆನಡಾ ಮತ್ತು ಫ್ರಾನ್ಸ್ ಸೇರಿದಂತೆ ವಿವಿಧ ಯುರೋಪಿಯನ್ ರಾಷ್ಟ್ರಗಳ 25 ಸದಸ್ಯರ ನಿಯೋಗವು ಎರಡು ದಿನಗಳ ಕಾಶ್ಮೀರ ಪ್ರವಾಸಕ್ಕೆ ಇಲ್ಲಿಗೆ ಬಂದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಉಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಮತ್ತು ಇತರ ಹಲವಾರು ನಾಯಕರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್ಎ) ಅಡಿಯಲ್ಲಿ ದಾಖಲಿಸಿದ ಒಂದು ವಾರದ ನಂತರ ಈ ನಿಯೋಗ ಇಲ್ಲಿಗೆ ಭೇಟಿ ನೀಡಿದೆ.
ಭದ್ರತಾ ಪರಿಸ್ಥಿತಿಯ ಬಗ್ಗೆ ನಿಯೋಗಕ್ಕೆ ಸೇನೆಯ ಉನ್ನತ ಅಧಿಕಾರಿಗಳು ಮತ್ತು ಇತರ ಭದ್ರತಾ ಸಂಸ್ಥೆಗಳ ಅಧಿಕಾರಿಗಳು ವಿವರಿಸಲಿದ್ದಾರೆ. ವಿಶೇಷವಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಿಂದ ಹೆಚ್ಚಿನ ಉಗ್ರರನ್ನು ಈ ಭಾಗಕ್ಕೆ ಕಳುಹಿಸುವ ಪ್ರಯತ್ನಗಳು ಮತ್ತು ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಸೈನಿಕರು ಆಗಾಗ್ಗೆ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವುದರ ಬಗ್ಗೆ ವಿವರಿಸಲಿದ್ದಾರೆ. ಕಣಿವೆಯಲ್ಲಿ ಕೈಗೊಳ್ಳುತ್ತಿರುವ ಅಭಿವೃದ್ಧಿ ಮತ್ತು ಇತರ ಕಾರ್ಯಗಳ ಬಗ್ಗೆಯೂ ಅವರಿಗೆ ತಿಳಿಸಲಾಗುತ್ತದೆ.
ನಾಗರಿಕ ಸಮಾಜದ ಹಲವು ಸದಸ್ಯರು ಮತ್ತು ವ್ಯಾಪಾರಿಗಳು ನಿಯೋಗವನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
ನವದೆಹಲಿಗೆ ಹಿಂದಿರುಗುವ ಮೊದಲು ನಿಯೋಗದ ಸದಸ್ಯರು ನಾಳೆ ಉತ್ತರ ಕಾಶ್ಮೀರದ ಕುಪ್ವಾರ ಮತ್ತು ಬಾರಾಮುಲ್ಲಾಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಗಸ್ಟ್ 5 ರಿಂದ ವಿವಿಧ ವಿದೇಶಗಳ ಎರಡು ನಿಯೋಗಗಳು ಕಾಶ್ಮೀರ ಕಣಿವೆಗೆ ಭೇಟಿ ನೀಡಿವೆ. ಆದಾಗ್ಯೂ, ನಿಯೋಗಗಳು ನಾಗರಿಕ ಸಮಾಜದ ಆಯ್ದ ಸದಸ್ಯರು, ಸೇನೆ ಮತ್ತು ನಾಗರಿಕ ಅಧಿಕಾರಿಗಳನ್ನು ಭೇಟಿಯಾಗಿವೆ. ಹೌಸ್ ಬೋಟ್ ಮಾಲೀಕರು, ಶಿಕಾರ ವಲ್ಲಾಸ್ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಇತರರು ಸೇರಿದಂತೆ ಹಲವು ಗಣ್ಯರ ನಿಯೋಗಗಳನ್ನು ಭೇಟಿಯಾಗಿದ್ದವು.
ವ್ಯಾಪಾರಿಗಳ ಸಂಘಗಳು ಮತ್ತು ಇತರ ಪ್ರಮುಖ ಒಕ್ಕೂಟದ ಸದಸ್ಯರು ಈ ನಿಯೋಗಗಳನ್ನು ಭೇಟಿ ಮಾಡಿರಲಿಲ್ಲ.
ಆದಾಗ್ಯೂ, ಮಾಜಿ ಮಂತ್ರಿಗಳು ಮತ್ತು ವಿವಿಧ ರಾಜಕೀಯ ಪಕ್ಷಗಳ ಮಾಜಿ ಶಾಸಕರಿಗೆ, ರಾಜ್ಯದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ವಿಷಯವನ್ನು ಪ್ರಸ್ತಾಪಿಸಬಾರದು ಎಂಬ ಷರತ್ತು ವಿಧಿಸಿದ ನಂತರ ಅವರನ್ನು ಬಂಧನದಿಂದ ಬಿಡುಗಡೆಗೊಳಿಸಿ ಈ ನಿಯೋಗಗಳನ್ನು ಭೇಟಿಯಾಗಲು ಅವಕಾಶ ಕಲ್ಪಿಸಲಾಗಿತ್ತು. ಈ ರೀತಿ ಭೇಟಿಯಾದ ನಾಯಕರನ್ನು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ತಮ್ಮ ಪಕ್ಷದಿಂದ ಉಚ್ಚಾಟಿಸಿತ್ತು.