1993ರ ಮುಂಬೈ ಸರಣಿ ಸ್ಫೋಟ ಪ್ರಕರಣ: ಮತ್ತೋರ್ವ ಆರೋಪಿ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧನ

ಮುಂಬೈ, ಫೆ.10 :    1993 ಮುಂಬೈ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಗುಜರಾತ್ ಭಯೋತ್ಪಾದನಾ ವಿರೋಧಿ ಪಡೆ (ಎಟಿಎಸ್‌) ಸೋಮವಾರ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಟಾಡಾ ನ್ಯಾಯಾಲಯದಿಂದ ಘೋಷಿತ ಅಪರಾಧಿ ಮುನಾಫ್ ಹಲಾರಿ ಮೂಸಾ ಎಂಬಾತನನ್ನು ಇಂದು ಬೆಳಗ್ಗೆ ಆತ ವಿದೇಶದಿಂದ ಬಂದಿಳಿದಾಗ ಬಂಧಿಸಲಾಗಿದೆ. ಆತ ಪಾಕಿಸ್ತಾನದ ಪಾಸ್‌ಪೋರ್ಟ್ ಮೂಲಕ ಪ್ರಯಾಣಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.

1993ರ ಮಾರ್ಚ್ 12ರಂದು ಮುಂಬೈಯಲ್ಲಿ ನಡೆದ ಸರಣಿ ಸ್ಫೋಟದಲ್ಲಿ 260 ಮಂದಿ ಸಾವನ್ನಪ್ಪಿ, 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿದ್ದ ಮೂಸಾ ದಕ್ಷಿಣ ಆಫ್ರಿಕಾಕ್ಕೆ ಪರಾರಿಯಾಗಿದ್ದ.