ವಿಶ್ರೀಕೃ ವಿಶ್ವವಿದ್ಯಾಲಯದ 16ನೇ ಸಂಸ್ಥಾಪನಾ ದಿನಾಚರಣೆ

ವಿಶ್ರೀಕೃ ವಿಶ್ವವಿದ್ಯಾಲಯದ 16ನೇ ಸಂಸ್ಥಾಪನಾ ದಿನಾಚರಣೆ 16th Foundation Day of Vishreekru University

ವಿಶ್ರೀಕೃ ವಿಶ್ವವಿದ್ಯಾಲಯದ 16ನೇ ಸಂಸ್ಥಾಪನಾ ದಿನಾಚರಣೆ 

ಬಳ್ಳಾರಿ 30: ಶೈಕ್ಷಣಿಕ ಕ್ರಾಂತಿಯಲ್ಲಿ ವಿಶ್ವವಿದ್ಯಾನಿಲಯಗಳ ಪಾತ್ರ ಪ್ರಮುಖವಾಗಿದ್ದು, ಪತ್ರಿಯೊಬ್ಬರು ಉನ್ನತ ಶಿಕ್ಷಣ ಪಡೆಯುವುದರ ಮೂಲಕ ತಮ್ಮ ಜೀವನದಲ್ಲಿ ಯಶಸ್ಸು ಕಾಣಬೇಕು ಎಂದು ಆಂಧ್ರ​‍್ರದೇಶದ ಕೇಂದ್ರೀಯ ಗಿರಿಜನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ.ತೇಜಸ್ವಿ ವಿ.ಕಟ್ಟಿಮನಿ ಅವರು ಹೇಳಿದರು. 

ನಗರದ ವಿಜಯನಗರ ಶ್ರೀ ಕೃಷ್ಣದೇವರಾಯ  ವಿಶ್ವವಿದ್ಯಾನಿಲಯದ ಬಯಲು ರಂಗಮಂದಿರ ಮುಖ್ಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ 16ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ನಮ್ಮ ಜೀವನದಲ್ಲಿ ಶಿಕ್ಷಣ ವ್ಯವಸ್ಥೆ ಅತೀ ಮುಖ್ಯವಾದ ಭಾಗ. ಕಾಲಕ್ಕೆ ತಕ್ಕಂತೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಆಗುತ್ತಿರುವ ಬದಲಾವಣೆಗಳು ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಇಡೀ ವಿಶ್ವದ ಗಮನ ಸೆಳೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು. 

ನಮ್ಮ ರಾಷ್ಟ್ರದಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಬಂದು ಉನ್ನತ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ ಎಂದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ ಸಾಕಷ್ಟು ಬದಲಾವಣೆಗಳು ಹೊಸ-ಹೊಸ ಆವಿಷ್ಕಾರಗಳು ಕೂಡ ಇದಕ್ಕೆ ಕಾರಣವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಒಂದು ವಿಶ್ವವಿದ್ಯಾಲಯ ಉನ್ನತ ಸ್ಥಾನಕ್ಕೆ ಬರಲು ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯವಾಗುತ್ತದೆ. ಶಿಕ್ಷಕರಿಗೆ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮತ್ತು ಬದಲಾಯಿಸುವ ಶಕ್ತಿ ಇದೆ. ಇಂದಿನ ಯುವ ಪೀಳಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿಯಬೇಕಿದೆ. ಕೇವಲ ಅಂಕಗಳಿಗಾಗಿ ಮಾತ್ರ ಶಿಕ್ಷಣ ಸೀಮಿತವಾಗಿರದೇ ನಿಮ್ಮದೇ ಆದ ಕೌಶಲ್ಯಗಳನ್ನು ಬೆಳೆಸಿಕೊಂಡು ಮುಂದೆ ಬರಬೇಕು. ಜಗತ್ತಿನಲ್ಲಿ ಹಲವಾರು ಭಾಷೆಗಳಿವೆ. ಹೆಚ್ಚಿನ ಭಾಷೆ ಮತ್ತು ಕೌಶಲ್ಯಗಳನ್ನು ಕಲಿತುಕೊಂಡು ನಿಮ್ಮ ಜೀವನವನ್ನು ಉನ್ನತವಾಗಿ ರೂಪಿಸಿಕೊಂಡು ಗುರಿ ತಲುಪಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

ಧಾರವಾಡದ ಕರ್ನಾಟಕ ನೀರಾವರಿ ನಿಗಮ ನಿಯಮಿತ ಮುಖ್ಯ ಆಡಳಿತಾಧಿಕಾರಿ ಎಸ್‌.ಎನ್‌.ರುದ್ರೇಶ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಈ ಹಿಂದೆ ನಾನು ವಿಶ್ವವಿದ್ಯಾಲಯದಲ್ಲಿ ಕುಲಸಚಿವನಾಗಿದ್ದು, ನನ್ನ ಆಡಳಿತ ಅವಧಿಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಬಹಳ ಶಿಸ್ತಿನಿಂದ ನಡೆದುಕೊಳ್ಳುತ್ತಿದ್ದರು. 18 ವರ್ಷದ ನನ್ನ ಕೆಲಸದ ಸೇವೆಯಲ್ಲಿ ಯಾವ ಕೆಲಸವು ಇಂತಹ ಸಂತೋಷ ನೀಡಿರಲಿಲ್ಲ, ಇಂದಿಗೂ ಸಹ ವಿವಿಯಲ್ಲಿ ಮಾಡಿದ ಕೆಲಸದ ದಿನಗಳನ್ನು ನೆನಪಿಸಿಕೊಳ್ಳುತ್ತೇನೆ ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು. 

ಶಿಕ್ಷಣದ ಅಭಿವೃದ್ಧಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅದನ್ನು ಮುಂದಿನ ದಿನಗಳಲ್ಲಿ ಹೇಗೆ ಮುನ್ನಡೆಸಬೇಕು ಎಂಬುದು ಸವಾಲಾಗಿದೆ. ಹಾಗಾಗಿ ವಿವಿಯು ಉನ್ನತ ಸ್ಥಾನಕ್ಕೆ ಬರಲು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಮನ್ವಯತೆ ಹೊಂದಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು. 

ಜ್ಞಾನವು ವಿಶಾಲವಾದದ್ದು, ಆಳವಾದ ಅಧ್ಯಯನ ಮಾಡಿದಾಗ ಅದರ ಮಹತ್ವ ತಿಳಿಯುತ್ತದೆ. ವಿದ್ಯಾರ್ಥಿಗಳು ನಿಮ್ಮಲ್ಲಿರುವ ಕಲೆ ಮತ್ತು ಕೌಶಲ್ಯವನ್ನು ಉಪಯೋಗಿಸಿ ನಿಮ್ಮ ಗುರಿ ತಲುಪಬೇಕು ಎಂದು ಆಶಿಸಿದರು. 

ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯ ಕುಲಪತಿ ಪ್ರೊ.ಎಂ.ಮುನಿರಾಜು ಅವರು  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಕಷ್ಟು ವಿಶ್ವವಿದ್ಯಾನಿಲಯಗಳ ಜೊತೆ ಪೈಪೋಟಿ ನೀಡಬೇಕಾದರೆ ಗುಣಮಟ್ಟದ ಶಿಕ್ಷಣ ಅವಶ್ಯಕ ಮತ್ತು ವಿದ್ಯಾರ್ಥಿಗಳ ಓಚಿತ್ಯಪೂರ್ಣ ಶಿಕ್ಷಣ ನೀಡುವ ಜವಾಬ್ದಾರಿ ವಿಶ್ವವಿದ್ಯಾನಿಲಯದ್ದಾಗಿರುತ್ತದೆ. ಡಿಜಿಟಲ್ ತಂತ್ರಜ್ಞಾನದ ಮೂಲಕ ನಮ್ಮ ಶಿಕ್ಷಣ ಮುಂದುವರಿಸಿಕೊಂಡು ವಿದ್ಯಾರ್ಥಿಗಳ ಅರ್ಹತೆಗೆ ಅನುಗುಣವಾಗಿ ಶಿಕ್ಷಣ ನೀಡುವುದು ವಿಶ್ವವಿದ್ಯಾನಿಲಯಗಳ ಜವಾಬ್ದಾರಿಗಳಾಗಿವೆ. ಹೊಸ ರೀತಿಯ ಆವಿಷ್ಕಾರಗಳಿಗೆ ಅವಕಾಶಗಳನ್ನು ಕಲ್ಪಿಸಿಕೊಡುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ತಾವು ಸಾಗುವ ದಾರಿಯನ್ನು ಸ್ಮರಿಸಿಕೊಳ್ಳುತ್ತಾ ಸುಸ್ಥಿರ ಸಮಾಜ ಕಟ್ಟುವಲ್ಲಿ ಭಾಗಿಯಾಗಿ ಎಂದು ಸಲಹೆ ನೀಡಿದರು. 

ನಮ್ಮ ವಿಶ್ವವಿದ್ಯಾಲಯವು ಸ್ಥಾಪನೆಗೊಂಡು 16ನೇ ವರ್ಷಕ್ಕೆ ಕಾಲಿಟ್ಟಿರುವುದು ಸಂತಸದ ವಿಷಯವಾಗಿದ್ದು, ವಿಜಯನಗರ ಸಾಮ್ರಾಜ್ಯದ ಶ್ರೀ ಕೃಷ್ಣದೇವರಾಯರ ಸ್ಮರಣೀಯವಾಗಿ ಈ ವಿವಿ ಯನ್ನು ಸ್ಥಾಪಿಸಲಾಯಿತು. ಮುಂದಿನ ದಿನಗಳಲ್ಲಿ ಈ ವಿಶ್ವವಿದ್ಯಾಲಯವು ಅತ್ಯುತ್ತಮ ಸ್ಥಾನ ಪಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು. 

ವಿಶ್ವವಿದ್ಯಾಲಯವು ಉನ್ನತ ಶಿಕ್ಷಣದ ಜೊತೆಗೆ ಉತ್ತಮ ಶಿಕ್ಷಕರು ಹಾಗೂ ಬೋಧಕರನ್ನು ಹೊಂದಿದೆ. ಪ್ರಸ್ತುತ ವಿವಿಯಲ್ಲಿ 29 ವಿಭಾಗಗಳಿದ್ದು, ಮುಂದಿನ ದಿನಗಳಲ್ಲಿ 45 ವಿಭಾಗಗಳನ್ನು ಮಾಡುವ ಗುರಿ ಹಾಗೂ ಕೌಶಲ್ಯಧಾರಿತ ಪಠ್ಯಕ್ರಮವನ್ನು ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು. 

ಕಾರ್ಯಕ್ರಮಕ್ಕೂ ಮುನ್ನ ವಿವಿಧ ಸಾಂಸ್ಕೃತಿಕ ಕಲಾ ತಂಡಗಳಿಂದ ನೃತ್ಯ ಮತ್ತು ಕಲೆ ಪ್ರದರ್ಶಿಸಿದರು. 

ಈ ಸಂದರ್ಭದಲ್ಲಿ ವಿಶ್ರೀಕೃ ವಿಶ್ವವಿದ್ಯಾಲಯದ ಕುಲಸಚಿವ ನಾಗರಾಜು.ಸಿ., ಕುಲಸಚಿವ(ಮೌಲ್ಯಮಾಪನ) ಪ್ರೊ.ಎನ್‌.ಎಂ.ಸಾಲಿ, ಹಣಕಾಸು ಅಧಿಕಾರಿ ನಾಗರಾಜ, ಕಾರ್ಯಕ್ರಮ ಸಂಯೋಜಕ ಪ್ರೊ.ಎನ್‌.ಶಾಂತನಾಯ್ಕ್‌ ಸೇರಿದಂತೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ ಸದಸ್ಯರು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.