ಪಂ.ಪಂಚಾಕ್ಷರಿ ಗವಾಯಿಗಳ 135ನೆಯ ಜಯಂತ್ಯೋತ್ಸವ ಹಾಗೂ ಸಂಗೀತೋತ್ಸವ
135th Anniversary and Music Festival of Panchakshari Gawais
ಲೋಕದರ್ಶನ ವರದಿ
ಪಂ.ಪಂಚಾಕ್ಷರಿ ಗವಾಯಿಗಳ 135ನೆಯ ಜಯಂತ್ಯೋತ್ಸವ ಹಾಗೂ ಸಂಗೀತೋತ್ಸವ
ಧಾರವಾಡ 03: ಉಭಯ ಗಾಯನ ವಿಶಾರದರಾದ ಪಂ.ಪಂಚಾಕ್ಷರಿ ಗವಾಯಿಗಳು ಮಾನವೀಯ ಅಂತಃಕರಣ, ಕಠಿಣ ತಪಸ್ಸಿನ ಮೂಲಕ ಸಾವಿರಾರು ಸಂಖ್ಯೆಯ ಸಂಗೀತ ಕಲಾವಿದರ ಜೀವನದ ದಾರೀದೀಪವಾಗಿದ್ದುದಲ್ಲದೇ, ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿ, ದೀನ, ದುರ್ಬಲರ ಆಶಾಕಿರಣವಾಗಿ, ಸಂಗೀತ ಕಲಿಯಲು ಬರುವವರಿಗೆ ಜ್ಞಾನದ ಬೆಳಕನ್ನು ನೀಡಿ, ಹಿಂದೂಸ್ಥಾನಿ ಗಾಯನ ಹಾಗೂ ವಾದ್ಯ ಸಂಗೀತ ಕ್ಷೇತ್ರಕ್ಕೆ ಭದ್ರ ಬುನಾದಿಯನ್ನು ಹಾಕಿಕೊಡುವ ಮಹತ್ಕಾರ್ಯ ಮಾಡಿದ ಪ್ರಾತಃಸ್ಮರಣೀಯರು ಎಂದು ಹುಬ್ಬಳ್ಳಿ ನವನಗರದ ಕ್ಯಾನ್ಸರ್ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಉಮೇಶ ಹಳ್ಳಿಕೇರಿ ಅಭಿಪ್ರಾಯಪಟ್ಟರು.
ಧಾರವಾಡದ ಡಾ.ಪುಟ್ಟರಾಜ ಗವಾಯಿ ಪ್ರತಿಷ್ಠಾನವು ದಿನಾಂಕ: 02-02-2026 ರಂದು ಸಂಜೆ ನಗರದ ಕವಿವ ಸಂಘದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಪಂ.ಪಂಚಾಕ್ಷರಿ ಗವಾಯಿಗಳ 135ನೇ ಜಯಂತ್ಯೋತ್ಸವ ಪ್ರಯುಕ್ತ ಏರಿ್ಡಸಿದ್ದ ಸಂಗೀತೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ಉಮೇಶ ಹಳ್ಳಿಕೇರಿ ಅವರು ಮಾತನಾಡುತ್ತ ಪಂ.ಪಂಚಾಕ್ಷರಿ ಗವಾಯಿಗಳು ಇಂದಿಗೂ ಎಲ್ಲ ಸಂಗೀತಗಾರರಿಗೆ ಪ್ರೇರಕರಾಗಿ ಮಾರ್ಗದರ್ಶಿಸುತ್ತಿರುವ ಚೈತನ್ಯ ಸ್ವರೂಪಿಯಾಗಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧಾರವಾಡದ ಖ್ಯಾತ ಹಿಂದೂಸ್ತಾನಿ ಕಲಾವಿದ ಡಾ.ಹನುಮಂತ ಬುರ್ಲಿ ಅವರು ಮಾತನಾಡುತ್ತ ಹುಟ್ಟಿನಿಂದ ಅಂಧತ್ವ ಅನುಭವಿಸುತ್ತಲೇ ಅನೇಕ ಕಷ್ಟಗಳನ್ನು ಅನುಭವಿಸಿ, ಜೋಳಿಗೆ ಹಾಕಿ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಂಗೀತವನ್ನು ಧಾರೆಯೆರೆದ ಅವರಿಗೆ ಜೀವನವನ್ನು ಕಟ್ಟಿಕೊಟ್ಟಂಥ ಮಹಾನುಭಾವರು ಪಂ.ಪಂಚಾಕ್ಷರ ಗವಾಯಿಗಳು.
ಸಂಗೀತದ ಅಗಾದ ಹಸಿವನ್ನು ಹೊಂದಿದ್ದ ಗವಾಯಿಗಳು ಜ್ಞಾನದ ಪಿಪಾಸುವಿನಂತೆ ನಿರಂತರ ಸಂಗೀತ ಮತ್ತು ವಾದ್ಯ ಸಂಗೀತ ಕಲಿಕೆಯೊಂದಿಗೆ ಕಲಾವಿದರ ಬಾಳಿಗೆ ಜ್ಞಾನದೀವಿಗೆಯಾದರು. ಎಂಥಹದೇ ಆರ್ಥಿಕ ಮುಗ್ಗಟ್ಟು ಬಂದರೂ ಸಹ ಎದೆಗುಂದದೆ ಶ್ರೀ ಕುಮಾರೇಶ್ವರ ಕೃಪಾಪೋಷಿತ ನಾಟಕ ಮಂಡಳಿಯೊಂದನ್ನು ಸ್ಥಾಪಿಸಿ, ನಾಡಿನಾದ್ಯಂತ ಸಂಚರಿಸಿ, ನಾಟಕ ಪ್ರದರ್ಶಿಸಿ, ಅದರಿಂದ ಬಂದ ಆದಾಯವನ್ನು ಸಂಗೀತಕ್ಕೆ ಮುಡುಪಾಗಿಟ್ಟವರು ಗವಾಯಿಗಳು. ವಚನ ಸಾಹಿತ್ಯವನ್ನು ಗಾಯನದ ಮೂಲಕ ಪ್ರಚುರ ಪಡಿಸುವ ಮೂಲಕ ವಚನ ಗಾಯನ ಪಿತಾಮಹರಾದರು ಎಂದರು.
ನಂತರ ಜರುಗಿದ ಸಂಗೀತೋತ್ಸವದಲ್ಲಿ ಧಾರವಾಡದ ಗಾಯಕಿ ಡಾ. ಶಕ್ತಿ ಪಾಟೀಲ ಅವರು ಗಾಯನದಲ್ಲಿ ರಾಗ ಜೋಗಕೌಂಸ್ ಹಾಗೂ ಭೈರವಿಯಲ್ಲಿ ಭಜನ್ ಪ್ರಸ್ತುತ ಪಡಿಸಿದರು. ತಬಲಾದಲ್ಲಿ ಶ್ರೀಧರ ಮಂಡ್ರೆ ಹಾಗೂ ಹಾರ್ಮೊನಿಯಂದಲ್ಲಿ ಬಸವರಾಜ ಹಿರೇಮಠ ಸಾಥ್ ಸಂಗತ ನೀಡಿದರು.
ಧಾರವಾಡದ ಪ್ರತಿಭಾನ್ವಿತ ತಬಲಾ ವಾದಕ ಹೇಮಂತ ಜೋಶಿ ಅವರು ತಬಲಾ ಸೋಲೋದಲ್ಲಿ ತಾಳ ತೀನತಾಲ್‌ದಲ್ಲಿ ಪೇಶಕಾರ್, ಕಾಯ್ದಾ, ತುಕಡಾ-ಮುಕಡಾ, ರೇಲಾ ಪ್ರಸ್ತುತ ಪಡಿಸಿದರು. ಹಾರ್ಮೊನಿಯಂ ಲೆಹರಾದಲ್ಲಿ ಪುಣೆಯ ಸ್ವಾನಂದ ರಾಜೋಪಾಧ್ಯೆ ಸಾಥ್ ಸಂಗತ ನೀಡಿದರು.
ರವಿ ಕುಲಕರ್ಣಿ ನಿರೂಪಿಸಿದರು. ಐಶ್ವರ್ಯ ದೇಸಾಯಿ ಪ್ರಾರ್ಥಿಸಿದರು. ಉಪಾಧ್ಯಕ್ಷರಾದ ಶಂಕರ ಕುಂಬಿ ಸ್ವಾಗತಿಸಿದರು. ಪಿ.ಎಂ.ಪಾಟೀಲ ವಂದಿಸಿದರು. ಡಾ.ಪುಟ್ಟರಾಜ ಗವಾಯಿ ಪ್ರತಿಷ್ಠಾನದ ಕಾರ್ಯದರ್ಶಿ ಪದ್ಮಶ್ರೀ ಪಂ.ಎಂ.ವೆಂಕಟೇಶಕುಮಾರ, ಸದಸ್ಯರಾದ ಡಾ.ಉದಯಕುಮಾರ ದೇಸಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಪಂ.ಬಿ.ಎಸ್.ಮಠ, ಮಲ್ಲಿಕಾರ್ಜುನ ಚಿಕ್ಕಮಠ, ಅಕ್ಕಮಹಾದೇವಿ ಮಠ, ಡಾ.ಮಲ್ಲಿಕಾರ್ಜುನ ತರ್ಲಗಟ್ಟಿ, ಡಾ. ಸುಮಿತ್ರಾ ಕಾಡದೇವರಮಠ, ಡಾ. ಮೃತ್ಯುಂಜಯ ಶೆಟ್ಟರ, ಪ್ರೊ.ಶಶಿಧರ ತೋಡಕರ, ಡಾ.ಶಾರದಾ ಭಟ್ಟ, ರವೀಂದ್ರ ಕಾವಟೇಕರ, ನಂದಿಕೇಶ್ವರ ಗುರವ, ಡಾ.ಅರ್ಜುನ ವಠಾರ, ಬಸಯ್ಯಸ್ವಾಮಿ ಹಿರೇಮಠ, ಅಯ್ಯಪ್ಪಯ್ಯ ಹಲಗಲಿಮಠ, ಪ್ರಕಾಶ ಬಾಳಿಕಾಯಿ, ಶಿವಯೋಗಿ ಪುರಾಣಿಕಮಠ, ಶ್ರೀಧರ ಕುಲಕರ್ಣಿ, ವೀರಣ್ಣ ಪತ್ತಾರ, ವೇಣು ಜೋಶಿ, ಡಾ. ಎ.ಎಲ್.ದೇಸಾಯಿ, ಡಾ.ಗುರುಬಸವ ಮಹಾಮನೆ, ಸುರಭಿ, ಸೃಷ್ಠಿ ಸುರೇಶ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 