ಧಾರವಾಡ 10: ಇಂದು ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನ ಧಾರವಾಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರ ಸಹಯೋಗದಲ್ಲಿ ಗಾನಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿಗಳ 134 ನೇ ಜಯಂತೋತ್ಸವ ಹಾಗೂ ಸಂಗೀತೋತ್ಸವ ಜರುಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗದಗದ ಪಂಡಿತ ಪಂಚಾಕ್ಷರಿ ಗವಾಯಿ ಸಂಗೀತ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯರಾದ ಸುಮಿತ್ರ ಕಾಡದೇವರಮಠ ಮಾತನಾಡಿ ಗವಾಯಿಗಳು ಸಂಗೀತ ಕ್ಷೇತ್ರದ ಅನರ್ಘ್ಯ ರತ್ನದಂತಿದ್ದಾರೆ ಅವರು ಆಧ್ಯಾತ್ಮಿಕ ಸಾಮಾಜಿಕ ಮತ್ತು ಸಂಗೀತ ಕ್ಷೇತ್ರದಲ್ಲಿ ಉತ್ತುಂಗವನ್ನು ಕಂಡವರಾಗಿದ್ದಾರೆ ಎಂದು ಹೇಳಿದರು. ನಾವುಗಳು ನಮ್ಮ ಪರಿಧಿಯಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸೇವೆ ಮಾಡುವತ್ತ ಪ್ರಯತ್ನಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯದ ಬಸವ ಪೀಠದ ಸಂಯೋಜಕರಾದ ಶ್ರೀ ಸಿ.ಎಂ.ಕುಂದಗೋಳ ಮಾತನಾಡಿ ಪಂಚಾಕ್ಷರಿ ಗವಾಯಿಗಳು ಸಮಾಜದ ಶ್ರೇಯೋಭಿವೃದ್ಧಿಗಾಗಿ ತಮ್ಮ ಇಡೀ ಬದುಕನ್ನು ಮುಡುಪಾಗಿಟ್ಟಿದ್ದರು, ಅಂಗ ವೈಫಲ್ಯ ಎನ್ನುವುದು ಶಾಪವಲ್ಲ ಎನ್ನುವುದನ್ನು ಮಾನವ ಸಮಾಜಕ್ಕೆ ತಿಳಿಸಿದ ದಯವಿಟ್ಟು ಎಂದರು. ಹಾಗೆ ವಚನ ಸಾಹಿತ್ಯವನ್ನು ಸಂಗೀತಕ್ಷೇತ್ರಕ್ಕೆ ಪರಿಚಯಿಸಿದ ಮೊದಲಿಗರೆಂದರೆ ಪಂಡಿತ್ ಪಂಚಾಕ್ಷರಿ ಗವಾಯಿಗಳು ಎಂದು ಹೇಳಿದರು.
ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಜಯಂತೋತ್ಸವ ನಿಮಿತ್ತ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಬಾನ್ಸುರಿ ವಾದಕಷಡ್ಜಗೋಡ್ಕಿಂಡಿ, ತಬಲಾವಾದಕರಾದ ಹೇಮಂತ್ ಜೋಶಿ, ಮಂಗಳೂರು ಆಕಾಶವಾಣಿ ಕೇಂದ್ರದ ಗಾಯಕರಾದ ಮೌನೇಶಕುಮಾರ್ ಛಾವಣಿ, ತಬಲವಾದಕರಾದ ನಿಸಾರ್‌ಅಹಮದ್ ಮತ್ತು ಸಂವಾದಿನಿಕಾರರಾದ ಬಸವರಾಜ್ ಹಿರೇಮಠ ಅಮೋಘವಾದ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಅಯ್ಯಪ್ಪಯ್ಯ ಹಡಗಲಿ ಪ್ರಾರ್ಥಿಸಿದರು. ಡಾ.ಪುಟ್ಟರಾಜ ಗವಾಯಿ ಪ್ರತಿಷ್ಠಾನದ ಉಪಾಧ್ಯಕ್ಷರಾದ ಶಂಕರಕುಂಬಿ ಸ್ವಾಗತಿಸಿದರು, ರವಿ ಕುಲಕರ್ಣಿ ನಿರೂಪಿಸಿದರು, ಡಾ.ಅರ್ಜುನ ವಠಾರ ವಂದಿಸಿದರು.
ಕಾರ್ಯಕ್ರಮದಲ್ಲಿ ಪಂ.ಎಂ.ವೆಂಕಟೇಶಕುಮಾರ, ಡಾ.ಬಿ.ಎಸ್. ಮಠ, ಭಾರತಿದೇವಿ ರಾಜಗುರು, ಶ್ರೀಮತಿ ರೇಣುಕಾ ನಾಕೋಡ, ಅಕ್ಕಮಹಾದೇವಿ ಮಠ, ಪಂ.ರಘುನಾಥ ನಾಕೋಡ, ಪಂ. ಮೃತ್ಯುಂಜಯ ಶೆಟ್ಟರ, ಡಾ.ಜೆ.ಎಂ. ಚಂದೂನವರ, ಡಾ. ಸದಾಶಿವ ಮರ್ಜಿ, ಬಸವರಾಜ ಹಿರೇಮಠ, ಡಾ.ಮಲ್ಲಿಕಾರ್ಜುನ ತರ್ಲಘಟ್ಟ ಮುಂತಾದವರು ಇದ್ದರು.