ಪ್ರತಿ ಕ್ವಿಂಟಲ್ ತೊಗರಿಗೆ 12000 ಬೆಂಬಲ ಬೆಲೆ ನೀಡುವಂತೆ ಆಗ್ರಹ
ವಿಜಯಪುರ 06: ರೈತರು ಬೆಳೆದಿರುವ ತೊಗರಿ ಬೆಳೆಗೆ 12000 ಇದ್ದ ದರ ಏಕಾಏಕಿ 7550 ರೂ ಗೆ ಕಡಿಮೆ ಮಾಡಿ ಖರೀಧಿಸುವಂತೆ ಕೇಂದ್ರ ಸರಕಾರ ಆದೇಶ ಮಾಡಿರುವುದು ಖಂಡನೀಯ, ಕೂಡಲೇ ತೊಗರಿಗೆ 12000 ಘೋಷಣೆ ಮಾಡಿ ಖರೀದಿಸಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದ ಅಂಬೇಡ್ಕರ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಜಿಲ್ಲಾಧಿಕಾರಿಗಳ ಕಚೇರಿಯ ಮುಂದುಗಡೆ ತೊಗರಿಯನ್ನು ನೆಲದ ಮೇಲೆ ಸುರಿದು ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳಾದ ಟಿ.ಬೂಬಾಲನ್ ಅವರ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರು
ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ ಅರವಿಂದ ಕುಲಕರ್ಣಿಯವರು ಮಾತನಾಡುತ್ತಾ ರೈತರ ಮತದಾನದಿಂದ ಆರಿಸಿ ಬಂದಿರುವ ಜನ ಪ್ರತಿನಿಧಿಗಳು ರೈತಪರ ಎಂದು ಬೋಗಳೆ ಬೀಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರನ್ನು ಗಡೆಗಣಿಸಿ ಬೀದಿಗೆ ತಳ್ಳುತ್ತಿದ್ದು, ‘ಸಬ್ ಕೆ ಸಾತ್, ಸಬ್ ಕೆ ವಿಕಾಸ್” ಎಂದು “ ಅಚ್ಚೆ ದಿನ ಆಯೇಗೆ” ಎಂದು ಬೋಗಳೆ ಬೀಡುತ್ತಿದ್ದು, ಇವರಿಗೆ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ, ರೈತರಿಗೆ ಒಳ್ಳೆಯ ದಿನ ಬರಲೇ ಇಲ್ಲ, ರೈತರು ತಮ್ಮ ಜಮೀನುಗಳಿಗೆ ಮಾಡಿರುವ ಖರ್ಚಿನಷ್ಟು ಆದಾಯವಾಗದಿದ್ದರೆ ಆತ್ಮಹತೈ ಒಂದೇ ದಾರಿ ಆಗುತ್ತದೆ, ಇದಕ್ಕೆ ನೇರ ಹೋಣೆಗಾರರು ಕೇಂದ್ರ ಸರಕಾರವಾಗುತ್ತದೆ, ಕೂಡಲೇ ಸರಕಾರ 12000 ಕೊಟ್ಟು ತೊಗರಿ ಖರೀಧಿಸಬೇಕು ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಮಾತನಾಡುತ್ತಾ ಕಳೆದ 3-4 ವರ್ಷಗಳಿಂದ ಸರಿಯಾದ ಮಳೆಯಾಗದೇ ಅತೀವೃಷ್ಠಿ ಅನಾವೃಷ್ಠಿ ಸೇರಿದಂತೆ ಕಳಪೆ ಬೀಜ , ಹವಾಮಾನದ ವೈಫರೀತ್ಯದಿಂದ ಸಾಕಷ್ಟು ನಷ್ಟ ಹೊಂದಿ, ಅಲ್ಪಸ್ವಲ್ಪ ತೊಗರಿ ಬೆಳೆದಿರುವ ರೈತರಿಗೆ ಬೆಲೆ ಸಿಗದೇ ನಷ್ಟ ಅನುಭವಿಸುವಂತಾಗಿದೆ, ಸ್ವಲ್ಪ ದಿನಗಳ ಹಿಂದೆ 200 ಕಿಲೋ ಲೆಕ್ಕದಲ್ಲಿ ತೊಗರಿ ಬೇಳೆ ಮಾರಾ ಮಾಡಿರುವುದು ನಾವೂ ನೋಡಿದ್ದೇವೆ, ಈಗ ರೈತರ ಬೆಳೆ ಬಂದಾಗ 75 ರೂ ಗೆ 1 ಕಿಲೋ ತೊಗರಿ ಮಾಡಿರುವುದು ಖಂಡನೀಯ, ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತ ವಿರೋಧಿ ಎಂದು ಇದರಿಂದ ಸ್ಪಷ್ಠವಾಗಿ ಕಾಣುತ್ತದೆ, ಈ ಕಳ್ಳಾಟ ಬಿಟ್ಟು ತೊಗರಿಗೆ ಪ್ರತಿ ಕ್ವಿಂಟಲ್‌ಗೆ 12000 ಕೊಟ್ಟು ಖರೀಧಿಸಬೇಕು ಇಲ್ಲವಾದಲ್ಲಿ ರಾಜ್ಯಧ್ಯಂತ ಹೋರಾಟ ಮಾಡಲಾಗುವುದು ಎಂಧರು.
ಈ ವೇಳೆ ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸಿ ಈ ಮನವಿಯನ್ನು ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಕಳುಹಿಸುತ್ತೆವೆ ಎಂದರು.
ಈ ವೇಳೆ ಜಿಲ್ಲಾ ಸಂಚಾಲಕರಾದ ಪಾಂಡು ಹ್ಯಾಟಿ, ಬಾಲಪ್ಪಗೌಡ ಲಿಂಗದಳ್ಳಿ, ಈರಣ್ಣ ದೇವರಗುಡಿ, ರಾಮನಗೌಡ ಪಾಟೀಲ, ಮಹಾದೇವಪ್ಪ ತೇಲಿ, ವೀರಣ್ಣ ಸಜ್ಜನ, ಜಕರಾಯ ಪೂಜಾರಿ, ಗಿರಿಮಲ್ಲಪ್ಪ ದೊಡಮನಿ, ನಾಗಪ್ಪ ಬೂದಗೋಲಿ, ಶಿವಪ್ಪ ಸುಯ್ಯಾಳ, ರಾಜೇಸಾ ವಾಲಿಕಾರ, ಹಣಮಂತ ಮುರಾಳ, ಬಸಯ್ಯ ಮಠ, ಲಾಲಸಾಬ ಹಳ್ಳೂರ, ಶ್ರೀನಿವಾಸ ಗೊಟಗುಣಕಿ, ಪ್ರಭುಗೌಡ ಬಿರಾದಾರ, ಬಂದಗಿಸಾಬ ಹಳ್ಳೂರ, ಶೇಖು ಮುರಡಿ, ರಮೇಶ ಹಂದ್ರಾಳ, ಬಸು ಬಡಗೇರ, ಹಣಮೇಶ ಹಂದ್ರಾಳ, ಭೀಮಣ್ಣ ಮಾದರ, ಆಸೀಫ ಹಳ್ಳೂರ, ಆಕಾಶ ಬಿರಾದಾರ, ಮಹದೇವಪ್ಪ ಬಿರಾದಾರ, ಸಾಹೇಬಗೌಡ ಪಾಟೀಲ, ಬಾಬು ಹಡಪದ ಸೇರಿದಂತೆ ಅನೇಕರು ಇದ್ದರು.