ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 11,367 ಕೋಟಿ ರೂ. ಹೂಡಿಕೆ ಮಾಡಲಿರುವ ಕೆಕೆಆರ್

ಮುಂಬಯಿ,  ಮೇ 22, ಕೆಕೆಆರ್ ಸಂಸ್ಥೆಯು ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 11,367 ಕೋಟಿ ರೂ.ಗಳ ಹೂಡಿಕೆ ಮಾಡಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ("ರಿಲಯನ್ಸ್ ಇಂಡಸ್ಟ್ರೀಸ್") ಹಾಗೂ ಭಾರತದ ಮುಂಚೂಣಿ ಡಿಜಿಟಲ್ ಸೇವೆಗಳ ವೇದಿಕೆ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ("ಜಿಯೋ ಪ್ಲಾಟ್‌ಫಾರ್ಮ್ಸ್") ಇಂದು ಘೋಷಿಸಿವೆ. ಈ ವಹಿವಾಟು ಜಿಯೋ ಪ್ಲಾಟ್‌ಫಾರ್ಮ್ಸ್‌ನ ಈಕ್ವಿಟಿ ಮೌಲ್ಯವನ್ನು 4.91 ಲಕ್ಷ ಕೋಟಿ ರೂ.ಗಳಿಗೆ ಹಾಗೂ ಎಂಟರ್‌ಪ್ರೈಸ್ ಮೌಲ್ಯವನ್ನು 5.16 ಲಕ್ಷ ಕೋಟಿ ರೂ.ಗಳಿಗೆ ಕೊಂಡೊಯ್ಯಲಿದೆ. ಇದು ಏಷ್ಯಾದಲ್ಲಿ ಕೆಕೆಆರ್‌ನ ಅತಿದೊಡ್ಡ ಹೂಡಿಕೆಯಾಗಿದ್ದು, ಫುಲ್ಲಿ ಡೈಲ್ಯೂಟೆಡ್ ಬೇಸಿಸ್‌ನಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್‌ನ ಶೇಕಡಾ2.32ರಷ್ಟು ಈಕ್ವಿಟಿ ಪಾಲುದಾರಿಕೆಗೆ ಸಮಾನವಾಗಿರಲಿದೆ. ಕಳೆದ ಒಂದು ತಿಂಗಳಿನಲ್ಲಿ, ಫೇಸ್‌ಬುಕ್, ಸಿಲ್ವರ್ ಲೇಕ್, ವಿಸ್ತಾ ಈಕ್ವಿಟಿ ಪಾರ್ಟ್‌ನರ್ಸ್, ಜನರಲ್ ಅಟ್ಲಾಂಟಿಕ್ ಹಾಗೂ ಕೆಕೆಆರ್‌ನಂತಹ ಮುಂಚೂಣಿ ತಂತ್ರಜ್ಞಾನ ಹೂಡಿಕೆದಾರ ಸಂಸ್ಥೆಗಳು ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 78,562 ಕೋಟಿ ರೂ.ಗಳ ಒಟ್ಟಾರೆ ಹೂಡಿಕೆಯನ್ನು ಘೋಷಿಸಿವೆ.  ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್ಸ್, ಭಾರತದಾದ್ಯಂತ ಉನ್ನತ ಗುಣಮಟ್ಟದ ಹಾಗೂ ಕೈಗೆಟುಕುವ ದರದ ಡಿಜಿಟಲ್ ಸೇವೆಗಳನ್ನು ಒದಗಿಸುವತ್ತ ತನ್ನ ಗಮನವನ್ನು ಕೇಂದ್ರೀಕರಿಸಿರುವ ಮುಂದಿನ ತಲೆಮಾರಿನ ತಂತ್ರಜ್ಞಾನ ವೇದಿಕೆಯಾಗಿದ್ದು ಅದಕ್ಕೆ 388 ದಶಲಕ್ಷಕ್ಕೂ ಹೆಚ್ಚಿನ ಚಂದಾದಾರರಿದ್ದಾರೆ.
ಬ್ರಾಡ್‌ಬ್ಯಾಂಡ್ ಸಂಪರ್ಕ, ಸ್ಮಾರ್ಟ್ ಸಾಧನಗಳು, ಕ್ಲೌಡ್ ಮತ್ತು ಎಡ್ಜ್ ಕಂಪ್ಯೂಟಿಂಗ್, ಬಿಗ್ ಡೇಟಾ ಅನಲಿಟಿಕ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಇಂಟರ್‌ನೆಟ್ ಆಫ್ ಥಿಂಗ್ಸ್, ಆಗ್ಮೆಂಟೆಡ್ ಮತ್ತು ಮಿಕ್ಸೆಡ್ ರಿಯಾಲಿಟಿ ಹಾಗೂ ಬ್ಲಾಕ್‌ಚೈನ್‌ನಂತಹ ಮುಂಚೂಣಿ ತಂತ್ರಜ್ಞಾನಗಳಿಂದ ಚಾಲಿತವಾಗಿರುವ ತನ್ನ ಡಿಜಿಟಲ್ ಇಕೋಸಿಸ್ಟಂನಾದ್ಯಂತ ಜಿಯೋ ಪ್ಲಾಟ್‌ಫಾರ್ಮ್ಸ್ ಗಮನಾರ್ಹ ಹೂಡಿಕೆಗಳನ್ನು ಮಾಡಿದೆ. ಒಳಗೊಳ್ಳುವ ಬೆಳವಣಿಗೆಯ ಫಲಗಳನ್ನು ಎಲ್ಲರೂ ಆನಂದಿಸುವಂತೆ ಮಾಡಲು, ಸಣ್ಣ ವರ್ತಕರು, ಅತಿಸಣ್ಣ ಉದ್ಯಮಗಳು ಹಾಗೂ ರೈತರೂ ಸೇರಿದಂತೆ ಭಾರತದಾದ್ಯಂತ 1.3 ಶತಕೋಟಿ ಜನರು ಹಾಗೂ ಉದ್ಯಮಗಳಿಗೆ ಡಿಜಿಟಲ್ ಇಂಡಿಯಾವನ್ನು ಸಾಧ್ಯವಾಗಿಸುವುದು ಜಿಯೋದ ದೂರದೃಷ್ಟಿಯಾಗಿದೆ.
1976ರಲ್ಲಿ ಸ್ಥಾಪನೆಯಾದ ಕೆಕೆಆರ್, ತನ್ನ ಪ್ರೈವೇಟ್ ಈಕ್ವಿಟಿ ಹಾಗೂ ಟೆಕ್ನಾಲಜಿ ಗ್ರೋತ್ ಫಂಡ್‌ಗಳ ಮೂಲಕ ಬಿಎಂಸಿ ಸಾಫ್ಟ್‌ವೇರ್, ಬೈಟ್‌ಡ್ಯಾನ್ಸ್ ಮತ್ತು ಗೊಜೆಕ್ ಸೇರಿದಂತೆ ಪ್ರಮುಖ ಜಾಗತಿಕ ಉದ್ಯಮಗಳನ್ನು ನಿರ್ಮಿಸುವ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಯಶಸ್ವಿ ಹೂಡಿಕೆಗಳನ್ನು ಮಾಡುವ ಸುದೀರ್ಘ ಇತಿಹಾಸ ಹೊಂದಿದೆ. ಪ್ರಾರಂಭದಿಂದಲೂ, ಇದು ತಂತ್ರಜ್ಞಾನ ಸಂಸ್ಥೆಗಳಲ್ಲಿ ಮೂವತ್ತು ಶತಕೋಟಿ ಡಾಲರುಗಳಿಗೂ ಹೆಚ್ಚು (ಒಟ್ಟು ಉದ್ಯಮ ಮೌಲ್ಯ) ಹೂಡಿಕೆ ಮಾಡಿದೆ, ಮತ್ತು ತಂತ್ರಜ್ಞಾನ, ಮಾಧ್ಯಮ ಮತ್ತು ಟೆಲಿಕಾಂ ಕ್ಷೇತ್ರಗಳ 20ಕ್ಕೂ ಹೆಚ್ಚು ಸಂಸ್ಥೆಗಳು ಕೆಕೆಆರ್‌ನ ತಂತ್ರಜ್ಞಾನದ ಬಂಡವಾಳ ಪಟ್ಟಿಯಲ್ಲಿವೆ. ಇದರ ಜೊತೆಯಲ್ಲಿ, 2006ರಿಂದಲೇ ನಮ್ಮ ದೇಶದಲ್ಲಿ ಹೂಡಿಕೆ ಮಾಡಿರುವ ಇತಿಹಾಸವುಳ್ಳ ಕೆಕೆಆರ್‌ಗೆ ಭಾರತವು ಪ್ರಮುಖ ಕಾರ್ಯತಂತ್ರದ ಮಾರುಕಟ್ಟೆಯಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಈ ಸಂದರ್ಭದಲ್ಲಿ ಮಾತನಾಡಿ, "ಭಾರತೀಯರೆಲ್ಲರ ಪ್ರಯೋಜನಕ್ಕಾಗಿ ಭಾರತದ ಡಿಜಿಟಲ್ ಇಕೋಸಿಸ್ಟಂ‌ನ ಬೆಳವಣಿಗೆ ಹಾಗೂ ರೂಪಾಂತರವನ್ನು ಮುಂದುವರೆಸುವ ನಮ್ಮ ಪಯಣದಲ್ಲಿ ಮೌಲ್ಯಯುತ ಪಾಲುದಾರರಾಗಿ ಪ್ರಪಂಚದ ಅತ್ಯಂತ ಗೌರವಾನ್ವಿತ ಹಣಕಾಸು ಹೂಡಿಕೆದಾರರಾದ ಕೆಕೆಆರ್ ಅನ್ನು ಸ್ವಾಗತಿಸುತ್ತಿರುವುದು ನನಗೆ ಸಂತೋಷದಾಯಕವಾಗಿದೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಉನ್ನತ ಮಟ್ಟದ ಡಿಜಿಟಲ್ ಸಮಾಜವನ್ನು ನಿರ್ಮಿಸುವ ಮಹತ್ವಾಕಾಂಕ್ಷಿ ಉದ್ದೇಶವನ್ನು ಕೆಕೆಆರ್ ನಮ್ಮೊಡನೆ ಹಂಚಿಕೊಳ್ಳುತ್ತದೆ.  ಉದ್ಯಮದ ಪ್ರಮುಖ ಫ್ರಾಂಚೈಸ್‌ಗಳಿಗೆ ಅಮೂಲ್ಯವಾದ ಪಾಲುದಾರನೆಂಬ ಪ್ರಮಾಣೀಕೃತ ದಾಖಲೆ ಕೆಕೆಆರ್‌ನದಾಗಿದ್ದು, ಅದು ಹಲವು ವರ್ಷಗಳಿಂದ ಭಾರತಕ್ಕೆ ಬದ್ಧವಾಗಿದೆ. ಜಿಯೋವನ್ನು ಇನ್ನಷ್ಟು ಬೆಳೆಸಲು ಕೆಕೆಆರ್‌ನ ಜಾಗತಿಕ ವೇದಿಕೆ, ಉದ್ಯಮದ ಜ್ಞಾನ ಮತ್ತು ಕಾರ್ಯಾಚರಣೆಯ ಪರಿಣತಿಯ ನೆರವು ಪಡೆದುಕೊಳ್ಳುವುದನ್ನು ನಾವು ಎದುರುನೋಡುತ್ತೇವೆ ಎಂದು ಹೇಳಿದ್ದಾರೆ.
ಕೆಕೆಆರ್‌ನ ಸಹಸಂಸ್ಥಾಪಕ ಹಾಗೂ ಜಂಟಿ ಸಿಇಓ ಹೆನ್ರಿ ಕ್ರಾವಿಸ್ ಮಾತನಾಡಿ, "ಭಾರತದಲ್ಲಿ, ಹಾಗೂ ಸಂಭಾವ್ಯವಾಗಿ ವಿಶ್ವದೆಲ್ಲೆಡೆಯೂ, ಜಿಯೋ ಪ್ಲಾಟ್‌ಫಾರ್ಮ್ಸ್‌ ಮಾಡುತ್ತಿರುವಂತೆ ಇಡೀ ದೇಶದ ಡಿಜಿಟಲ್ ಇಕೋಸಿಸ್ಟಂ ಅನ್ನು ಪರಿವರ್ತಿಸುವ ಸಾಮರ್ಥ್ಯವಿರುವುದು ಕೆಲವು ಸಂಸ್ಥೆಗಳಿಗೆ ಮಾತ್ರ. ನಿಜ ಅರ್ಥದ ಸ್ವದೇಶಿಯಾದ ಜಿಯೋ ಪ್ಲಾಟ್‌ಫಾರ್ಮ್ಸ್ ಭಾರತದಲ್ಲಿ  ಮುಂದಿನ ತಲೆಮಾರಿನ ತಂತ್ರಜ್ಞಾನ ನಾಯಕನಾಗಿದ್ದು, ಡಿಜಿಟಲ್ ಕ್ರಾಂತಿಯ ಅನುಭವ ಪಡೆದುಕೊಳ್ಳುತ್ತಿರುವ ದೇಶಕ್ಕೆ ತಂತ್ರಜ್ಞಾನ ಪರಿಹಾರಗಳನ್ನು ಹಾಗೂ ಸೇವೆಗಳನ್ನು ಒದಗಿಸುವಲ್ಲಿ ಸಾಟಿಯಿಲ್ಲದ ಸಾಮರ್ಥ್ಯ ಹೊಂದಿದೆ. ನಾವು ಜಿಯೋ ಪ್ಲಾಟ್‌ಫಾರ್ಮ್ಸ್‌ನ ಪ್ರಭಾವಶಾಲಿ ಆವೇಗ, ವಿಶ್ವದರ್ಜೆಯ ನಾವೀನ್ಯತೆ ಮತ್ತು ಸದೃಢ ನಾಯಕತ್ವ ತಂಡದ ಹಿಂದೆ ಹೂಡಿಕೆ ಮಾಡುತ್ತಿದ್ದೇವೆ ಮತ್ತು ಈ ಚಾರಿತ್ರಿಕ ಹೂಡಿಕೆಯನ್ನು ಭಾರತ ಮತ್ತು ಏಷ್ಯಾ ಪೆಸಿಫಿಕ್‌ನ ಪ್ರಮುಖ ತಂತ್ರಜ್ಞಾನ ಕಂಪನಿಗಳಿಗೆ ಬೆಂಬಲ ನೀಡುವ ಕೆಕೆಆರ್ ಬದ್ಧತೆಯ ಬಲವಾದ ಸೂಚಕವಾಗಿ ನೋಡುತ್ತೇವೆ. ಎಂದು ಹೇಳಿದ್ದಾರೆ.ಕೆಕೆಆರ್ ಈ ಹೂಡಿಕೆಯನ್ನು ತನ್ನ ಏಷ್ಯಾ ಪ್ರೈವೇಟ್ ಈಕ್ವಿಟಿ ಹಾಗೂ ಗ್ರೋತ್ ಟೆಕ್ನಾಲಜಿ ಫಂಡ್‌ಗಳ ಮೂಲಕ ಮಾಡುತ್ತಿದೆ.  ಈ ವಹಿವಾಟು, ನಿಯಂತ್ರಕರ ಹಾಗೂ ಮತ್ತಿತರ ಅಗತ್ಯ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.