ಇಂದಿರಾಗಾಂಧಿಯ 102ನೇ ಜಯಂತಿ; ನಾಯಕರಿಂದ ಶ್ರದ್ಧಾಂಜಲಿ

ನವದೆಹಲಿ, ನ 19 :        ಇಂದು ಮಾಜಿ ಪ್ರಧಾನಿ ಇಂದಿರಾಗಾಂದಿ ಅವರ 102ನೇ ಜನ್ಮದಿನ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಇಂದಿರಾ ಗಾಂಧಿ ಅವರಿಗೆ ಮಂಗಳವಾರ ಶ್ರದ್ಧಾಂಜಲಿ ಸಲ್ಲಿಸಿದರು.     ಕಾಂಗ್ರೆಸ್ ನಾಯಕರು ಇಂದಿರಾ ಗಾಂಧಿ ಅವರ ಸಮಾದಿಯಿರುವ 'ಶಕ್ತಿ ಸ್ಥಳ'ಕ್ಕೆ ತೆರಳಿ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೂಡ ಬೃಹತ್ ಸಂಖ್ಯೆಯಲ್ಲಿ ಹಾಜರಿದ್ದರು.     ನಂತರ ಟ್ವೀಟ್ ಮಾಡಿದ ರಾಹುಲ್ ಗಾಂಧಿ, 'ಸಶಕ್ತ, ಸಮರ್ಥ ನಾಯಕತ್ವ ಮತ್ತು ಅತ್ಯುದ್ಭುತ ಸಾಮಥ್ರ್ಯ ಹೊಂದಿದ್ದ ಲೋಹದ ಮಹಿಳೆ ಎಂದೇ ಕರೆಸಿಕೊಳ್ಳುತ್ತಿದ್ದ ನನ್ನ ಅಜ್ಜಿ ದಿವಂಗತ ಇಂದಿರಾ ಗಾಂಧಿ ಅವರ ಜಯಂತಿಯನ್ನು ಕೋಟಿ ಕೋಟಿ ನಮನಗಳನ್ನು ಸಲ್ಲಿಸುತ್ತೇನೆ. ಅವರು ಭಾರತವನ್ನು ಸಶಕ್ತ ದೇಶವನ್ನಾಗಿಸುವಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ' ಎಂದು ಸ್ಮರಿಸಿದ್ದಾರೆ.     ದೇಶದ ಮೊದಲ ಮಹಿಳಾ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರು ಉತ್ತರಪ್ರದೇಶದ ಇಂದಿನ ಪ್ರಯಾಗ್ ರಾಜ್ ನಲ್ಲಿ 1917ರ ನ.19ರಂದು ಜನಿಸಿದ್ದರು. ಇವರಿಗೆ ದೇಶದ ಅತ್ಯುನ್ನತ ಗೌರವವಾದ ಮರಣೋತ್ತರ ಭಾರತ ರತ್ನ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.