ಕೊರೋನಾ ಲಾಕ್ ಡೌನ್ : ಬಡವರಿಗಾಗಿ 1.7 ಲಕ್ಷ ಕೋಟಿ ರೂ. ಪ್ಯಾಕೇಜ್ ಪ್ರಕಟಣೆ

ನವದೆಹಲಿ, ಮಾ 26, ಕೊರೋನಾ ವೈರಸ್ ಸೋಂಕು ನಿಯಂತ್ರಿಸುವ ಸಲುವಾಗಿ ಇಡೀ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ನಿರ್ಬಂಧ ಘೋಷಿಸಿದ 36 ಗಂಟೆಗಳ ಬಳಿಕ, ಕೇಂದ್ರ ಸರ್ಕಾರ ರೈತರು, ವಲಸೆ ಕಾರ್ಮಿಕರು ಹಾಗೂ ಗ್ರಾಮೀಣ ಮತ್ತು ನಗರ ಪ್ರದೇಶಗಳ ಬಡವರಿಗಾಗಿ 1.7 ಲಕ್ಷ ಕೋಟಿ ರೂ. ಪ್ಯಾಕೇಜ್ ಪ್ರಕಟಿಸಿದೆ. ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‍, ಪ್ರಧಾನ ಮಂತ್ರಿ ಬಡವರ ಕಲ್ಯಾಣ ಯೋಜನೆಯಡಿ ವಲಸೆ ಕಾರ್ಮಿಕರು ಹಾಗೂ ಬಡವರಿಗೆ ಸಹಾಯ ನೀಡಲಾಗುವುದು ಎಂದು ಹೇಳಿದ್ದಾರೆ.  ವೈರಸ್‌ಗೆ ತಮ್ಮನ್ನು ಒಡ್ಡಿಕೊಳ್ಳುತ್ತಿರುವ ಕೋವಿಡ್ -19 ಯೋಧರಿಗೆ ಮೂರು ತಿಂಗಳವರೆಗೆ ಪ್ರತಿ ವ್ಯಕ್ತಿಗೆ 50 ಲಕ್ಷ ರೂ.ಗಳ ವಿಮಾ ರಕ್ಷಣೆಯನ್ನು ನೀಡಲಾಗುವುದು ಎಂದು ಸಚಿವೆ ತಿಳಿಸಿದ್ದು, ಇವರಲ್ಲಿ ವೈದ್ಯರು, ಅರೆವೈದ್ಯರು, ಆರೋಗ್ಯ ಕಾರ್ಯಕರ್ತರು, ನೈರ್ಮಲ್ಯ ಕಾರ್ಮಿಕರು, ಆಶಾ ಕಾರ್ಮಿಕರು ಸೇರಿದ್ದಾರೆ. ಈಗಾಗಲೇ ಪ್ರತಿ ತಿಂಗಳು 5 ಕೆಜಿ ಪಡಿತರ ಪಡೆದುಕೊಳ್ಳುತ್ತಿರುವ 80 ಕೋಟಿ ಜನರಿಗೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ಅಥವಾ ಗೋಧಿಯನ್ನು ಮುಂದಿನ 3 ತಿಂಗಳವರೆಗೆ ವಿತರಿಸಲಾಗುವುದು.  ಅಲ್ಲದೆ ಗೊತ್ತುಪಡಿಸಿದ ಧಾನ್ಯವನ್ನು ಉಚಿತವಾಗಿ ನೀಡಲಾಗುವುದು ಎಂದು ಹೇಳಿದ್ದಾರೆ. ರೈತರು, ಮಹಾತ್ಮ ಗಾಂಧಿ ನರೇಗಾ ಕಾರ್ಮಿಕರು, ದಿವ್ಯಾಂಗರು, ಜನಧನ ಯೋಜನೆಯಡಿ ಬರುವ ಮಹಿಳೆಯರು, ಉಜ್ವಲ ಯೋಜನೆಯಡಿಯ ಬಡವರು, ಸ್ವಸಹಾಯ ಗುಂಪುಗಳಿಗಾಗಿ ಹಣಕಾಸು ಸಚಿವೆ 8 ವಿಶೇಷ ಪ್ರಕಟಣೆಗಳನ್ನು ಹಣಕಾಸು ಸಚಿವರು ಹೊರಡಿಸಿದ್ದಾರೆ.