ಬೆಂಗಳೂರು, ಏ.1, ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ 86 ಪ್ರಾಯದ ನಿವೃತ್ತ ಶಿಕ್ಷಕಿಯೊಬ್ಬರು ಕೊರೋನ ವೈರಸ್ ವಿರುದ್ಧದ ಹೋರಾಟಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1.25 ಲಕ್ಷ ರೂ. ಗಳನ್ನು ದೇಣಿಗೆಯಾಗಿ ನೀಡಿದ್ದಾರೆ.ಬೆಂಗಳೂರಿನ ಮಲ್ಲೇಶ್ವರಂ ನಿವಾಸಿಯೂ ಆಗಿರುವ ಜಿ.ಜಯಲಕ್ಷಮ್ಮ ಅವರು ತಮ್ಮ ಪಿಂಚಣಿ ನಿಧಿಯಲ್ಲಿ ಉಳಿತಾಯ ಮಾಡಿದ್ದ 1.25 ಲಕ್ಷ ರೂ. ಗಳನ್ನು ದೇಣಿಗೆಯಾಗಿ ನೀಡಿ, ಮಾನವೀಯತೆ ಮರೆದಿದ್ದಾರೆ.ಮಲ್ಲೇಶ್ವರಂ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಜಿ.ಜಯಲಕ್ಷಮ್ಮ ಅವರು 1992ನೇ ಸಾಲಿನ ಅಕ್ಟೋಬರ್ ನಲ್ಲಿ ನಿವೃತ್ತಿ ಹೊಂದಿದರು. ಸತತ ಮೂವರು ವರ್ಷಗಳ ಕಾಲ ಅವರು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.
ಅಂದಿನಿಂದ ಪಿಂಚಣಿಯಲ್ಲಿ ಉಳಿತಾಯ ಮಾಡಿದ್ದ ಹಣವನ್ನು ದೇಣಿಗೆ ನೀಡಿದ್ದಾರೆ.ಇಡೀ ವಿಶ್ವವನ್ನೇ ಕೊರೊನಾ ವೈರಸ್ ಆವರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಕೋವಿಡ್-19 ಸೋಂಕು ವಿರುದ್ಧ ಹೋರಾಡುತ್ತಿದ್ದಾರೆ. ಮಾರಣಾಂತಿಕ ವೈರಸ್ ವಿರುದ್ಧ ಜಾಗೃಕರಾಗಿ ಹಾಗೂ ಆರೋಗ್ಯ ಸಂಸ್ಥೆಗಳು ನೀಡಿರುವ ಸೂಚನೆಗಳನ್ನು ಚಾಚು ತಪ್ಪದೇ ಪಾಲಿಸುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಕೂಡ ನಮ್ಮ ಕೈಲಾದಷ್ಟು ಸಹಾಯ ಮಾಡಲು ಮುಂದಾಗಿದ್ದೇವೆ ಎಂದು ಜಿ.ಜಯಲಕ್ಷಮ್ಮ ತಿಳಿಸಿದ್ದಾರೆ.