ಹೈದರಾಬಾದ್, ಡಿ 1- ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮ (ಟಿಎಸ್ ಆರ್ ಟಿಸಿ) ಲಾಭದಲ್ಲಿ ಸಾಗಲು ಪ್ರತಿವರ್ಷ ಬಜೆಟ್‍ನಲ್ಲಿ 1,000 ಕೋಟಿ ರೂ. ಮೀಸಲಿರಿಸುವುದಾಗಿ ರಾಜ್ಯ ಸರ್ಕಾರ ಪ್ರಕಟಿಸಿದೆ. ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಪ್ರಗತಿ ಭವನದಲ್ಲಿ ಭಾನುವಾರ ಸಂಜೆ ಆರ್ ಟಿಸಿ ನೌಕರರೊಂದಿಗೆ ಸಂವಾದ ನಡೆಸಿದ ನಂತರ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ಈ ಘೋಷಣೆ ಮಾಡಿದ್ದಾರೆ.
ಯಾವುದೇ ಆರ್ ಟಿಸಿ ನೌಕರರನ್ನು ವಜಾಗೊಳಿಸುವುದಿಲ್ಲ ಎಂದ ಮುಖ್ಯಮಂತ್ರಿಯವರು, ಆರ್‍ಟಿಸಿ ಬಸ್‍ಗಳ ಮಾರ್ಗಗಳಲ್ಲಿ ಖಾಸಗಿ ಬಸ್‍ಗಳ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಕಳೆದ 52ದಿನಗಳಿಂದ ಮುಷ್ಕರ ನಡೆಸುತ್ತಿರುವ ನೌಕರರೊಂದಿಗೆ ಬಹುಶ: ಮುಖ್ಯಮಂತ್ರಿಯವರು ಇದೇ ಮೊದಲ ಬಾರಿಗೆ ಇಂತಹುದೊಂದು ಸಭೆ ನಡೆಸಿದ್ದಾರೆ.
ಮುಂದಿನ ಕೆಲವೇ ತಿಂಗಳಲ್ಲಿ ನಿಗಮ ಲಾಭದತ್ತ ಸಾಗಬೇಕಿದ್ದು, ಪ್ರತಿ ವರ್ಷ 1,000 ಕೋಟಿ ರೂ. ಲಾಭ ಗಳಿಸಬೇಕಿದೆ. ನಿಗಮದ ನೌಕರರು ವಾರ್ಷಿಕ 1 ಲಕ್ಷ ರೂ. ಬೋನಸ್ ಪಡೆಯಲಿದ್ದಾರೆ ಎಂದು ಅವರು ಹೇಳಿದರು. ನೌಕರರ ಸೆಪ್ಟೆಂಬರ್ ತಿಂಗಳ ವೇತನವನ್ನು ನಾಳೆ, ಸೋಮವಾರ ಪಾವತಿಸಲಾಗುವುದು. ಮುಷ್ಕರ ಅವಧಿಗೂ ವೇತನ ಪಾವತಿಸಲಾಗುವುದು. ನಿಗಮದ ನೌಕರರ ನಿವೃತ್ತಿ ವಯಸ್ಸನ್ನು 58ರಿಂದ 60ಕ್ಕೆ ಏರಿಸಲಾಗುವುದು ಎಂದು ಚಂದ್ರಶೇಖರ್ ರಾವ್ ಹೇಳಿದರು.