ಬಳ್ಳಾರಿ, ಜೂ.03: ಕೋವಿಡ್ನಿಂದ 5 ಜನರು ಗುಣಮುಖರಾಗಿರುವ ಹಿನ್ನೆಲೆಯಲ್ಲಿ ಬಳ್ಳಾರಿ ಕೋವಿಡ್ ಜಿಲ್ಲಾಸ್ಪತ್ರೆಯಿಂದ ಅವರನ್ನು ಬುಧುವಾರ ಮಧ್ಯಾಹ್ನ ಬಿಡುಗಡೆ ಮಾಡಲಾಯಿತು.
ಜಿಲ್ಲಾಸ್ಪತ್ರೆಯಲ್ಲಿ 19 ಜನರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ ರಾತ್ರಿಯೊಂದು ಕೋವಿಡ್ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಸೊಂಕಿತರ ಸಂಖ್ಯೆ 52ಕ್ಕೇರಿದೆ. ಒಬ್ಬರು ಸಾವನ್ನಪ್ಪಿದ್ದು, ಇದುವರೆಗೆ 32 ಜನರು ಬಿಡುಗಡೆಯಾದಂತಾಗಿದೆ
ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದವರ ವಿವರ:-
14 ವರ್ಷದ ಪಿ-1542 ಬಾಲಕ ಮೂಲತಃ ಚಾಗನೂರು, 33 ವರ್ಷದ ಪಿ-1544 ಪುರುಷ ಮೂಲತಃ ನಾಗೇನಹಳ್ಳಿಯವರು, 18 ವರ್ಷ ಪಿ-1549 ಯುವತಿ ಮೂಲತಃ ಚಾಗನೂರು, 31 ವರ್ಷದ ಪಿ-1546 ಮಹಿಳೆಯು ಮೂಲತಃ ರೂಪನಗುಡಿಯವರಾಗಿದ್ದು ಇವರೆಲ್ಲರು ಮಹಾರಾಷ್ಟ್ರದ ಮುಂಬೈನಿಂದ ಬಂದಿರುವ ಟ್ರಾವೆಲ್ ಹಿಸ್ಟರಿ ಇದೆ. 23 ವರ್ಷದ ಪಿ-2155 ಯುವಕ ಹಗರಿಬೊಮ್ಮನಹಳ್ಳಿ ತಾಲೂಕಿನವರಾಗಿದ್ದು, ಇವರು ದೆಹಲಿಯಿಂದ ಜಿಲ್ಲೆಗೆ ಬಂದಿರುವ ಟ್ರಾವೆಲ್ ಹಿಸ್ಟರಿ ಇದೆ.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಗುಣಮುಖರಾಗಿ ಮನೆಯತ್ತ ತೆರಳಲು ಸಿದ್ದರಾಗಿ ನಿಂತಿದ್ದವರಿಗೆ ಹೂಗುಚ್ಛ, ಹಣ್ಣು-ಹಂಪಲು ನೀಡಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಕಂದಾಯ ಇಲಾಖೆ ವತಿಯಿಂದ ನೀಡಲಾಗುವ ಪಡಿತರ ಕಿಟ್ ಕಳುಹಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಎನ್.ಬಸರೆಡ್ಡಿ ಅವರು ಮಾತನಾಡಿ, ಇವರು ಬಂದಾಗ ಸಾಕಷ್ಟು ಭಯಭೀತರಾಗಿದ್ದರು, ಇವರಿಗೆ ಆಪ್ತ ಸಮಾಲೋಚನೆ ಮಾಡಿ ಅವರಲ್ಲಿದ್ದ ಭಯ ಹೋಗಲಾಡಿಸಿದೆವು. ಆತ್ಮ ಸ್ಥೈರ್ಯವನ್ನು ತುಂಬಿ ಅವರನ್ನು ಗುಣಮುಖರಾಗಲು ಬಹಳ ಶ್ರಮವಹಿಸಿದೆವು; ಈ 5 ಜನರು ಒಂದೇ ಬಾರಿಗೆ ಗುಣಮುಖರಾಗಿರುವುದು ನಮಗೆ ತುಂಬಾ ಸಂತೋಷವಾಗಿದ್ದು ಇನ್ನು ಉಳಿದವರನ್ನು ಆದಷ್ಟು ಬೇಗ ಗುಣಮುಖರನ್ನಾಗಿ ಮಾಡಲು ಪ್ರಯತ್ನಿಸುತ್ತೇವೆ ಎಂದರು.
ಗುಣಮುಖರಾಗಿ ಹೊರಬಂದವರಲ್ಲಿ ಕೆಲವರು ಮಾತನಾಡಿ, ಆಸ್ಪತ್ರೆಗೆ ದಾಖಲಾಗಿ ಬಂದಾಗಿನಿಂದ ಇಲ್ಲಿಯವರೆಗೆ ಚೆನ್ನಾಗಿ ನೋಡಿಕೊಂಡರು. ಸಮರ್ಪಕ ಚಿಕಿತ್ಸೆ ಕೊಟ್ಟರು ಮತ್ತು ಸ್ಥೈರ್ಯ ಕಳೆದುಕೊಂಡಿದ್ದ ನಮ್ಮನ್ನು ಮಾನಸಿಕವಾಗಿಯೂ ಸಜ್ಜುಗೊಳಿಸಿದರು ಮತ್ತು ಗುಣಮಟ್ಟ ಆಹಾರ ಒದಗಿಸಿದರು. ವೈದ್ಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಯ ಋಣ ನಾವೆಂದು ಮರೆಯಲ್ಲ ಎಂದರು.
ಈ ಸಂದರ್ಭದಲ್ಲಿ ಕೋವಿಡ್ ನೋಡಲ್ ಅಧಿಕಾರಿ ಡಾ.ಯೋಗಾನಂದರೆಡ್ಡಿ, ಹಿರಿಯ ತಜ್ಞರಾದ ಡಾ.ಪ್ರಕಾಶ್ ಭಾಗವತಿ, ಡಾ.ಶಂಕರ್ ನಾಯಕ್, ಡಾ.ನಿಖಿಲ್, ಶುಶ್ರೂಷಾ ಅಧೀಕ್ಷಕಿ ಶಾಂತಾಬಾಯಿ, ಡಾ.ಕೊಟ್ರೇಶ್, ಡಾ.ಚಿತ್ರಶೇಖರ, ಲ್ಯಾಬ್ ಟೆಕ್ನಿಷಿಯನ್ಸ್, ಎಕ್ಸ್-ರೇ, ಡಿ-ಗ್ರೂಪ್ ಸಿಬ್ಬಂದಿ ಸೇರಿದಂತೆ ಆಸ್ಪತ್ರೆಯ ಇತರ ಸಿಬ್ಬಂದಿಗಳು ಇದ್ದರು.