‘ಲೈಟ್ ಹೌಸ್‌’ ಕೃತಿ ಬಿಡುಗಡೆ ಸಮಾರಂಭ

‘ಲೈಟ್ ಹೌಸ್‌’ ಕೃತಿ ಬಿಡುಗಡೆ ಸಮಾರಂಭ ‘Lighthouse’ book release ceremony

ಧಾರವಾಡ 11 : ಆಧುನೀಕತೆ ಪ್ರವೇಶವಾದರೂ ಸಂಪ್ರದಾಯವನ್ನು ಬಿಡಲಾರದ ಮಾದರಿಯಲ್ಲಿ ನಮ್ಮಇವತ್ತಿನ ಮಹಿಳಾ ಕಾದಂಬರಿಕಾರರು ಬರೆದದ್ದನ್ನು, ಬರೆಯುತ್ತಿರುವುದನ್ನು ಕಾಣುತ್ತೇವೆ ಎಂದು ಬೆಟಗೇರಿ ಕೃಷ್ಣಶರ್ಮ ರಾಷ್ಟ್ರೀಯ ಸ್ಮಾರಕಟ್ರಸ್ಟ್‌ನ ಅಧ್ಯಕ್ಷೆ ಡಾ. ವಿನಯಾಒಕ್ಕುಂದ ಹೇಳಿದರು. ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ.ಬಸು ಬೇವಿನ ಗಿಡದ ಅವರು ಅನುವಾದಿಸಿದ ವರ್ಜಿನಿಯಾ ವೂಲ್ಪ್‌ ಅವರ ‘ಲೈಟ್ ಹೌಸ್‌’ ಕೃತಿ ಬಿಡುಗಡೆ ಸಮಾರಂಭದಲ್ಲಿ, ಕೃತಿ ಬಿಡುಗಡೆ ಮಾಡಿ ಮಾತನಾಡಿದರು. 

ಲೈಟ್ ಹೌಸ್ ಕಾದಂಬರಿ, ನೂರು ವರ್ಷಗಳ ಹಿಂದೆ ರಚಿತವಾಗಿದ್ದರೂ ಕೂಡ ಇವತ್ತಿನ ಕಾಲ ಘಟ್ಟದಲ್ಲೂ ಮುಖಾಮುಖಿಯಾಗಿ ನಿಲ್ಲುತ್ತದೆ. ಸಹೃದಯರ ಮನಸ್ಸಿನ ಆಳಕ್ಕೆ ಪಾತ್ರಗಳು ಇಳಿಯುತ್ತವೆ. ಸಂಪ್ರದಾಯದಿಂದ ಆಧುನೀಕತೆಯ ಕಡೆಗೆ ಚಲಿಸುವ ಮಹಿಳೆಯ ರೂಪಕಗಳು ಅಗಾಧವಾದ ಅರ್ಥವನ್ನು ಹೊರಸೂಸುತ್ತವೆ. ಹೆಣ್ಣು ಮೀನಿನ ಅತಿಯಾದ ಆಸೆಯಿಂದ ಇಡೀ ಕುಟುಂಬ  ನಾಶವಾಗುವ ಸಂದರ್ಭವನ್ನು ಸೊಗಸಾಗಿ ಕಟ್ಟಿಕೊಡಲಾಗಿದೆ. ಇಲ್ಲಿ ಬರುವ  ಪಾತ್ರಗಳು ಸಾಮಾನ್ಯವಾದವುಗಳಲ್ಲ. ಎಲ್ಲವೂ ಸೃಜನಶೀಲ ಪಾತ್ರಗಳು ಎಂದು ಹೇಳಿದರು.  

ಕೃತಿಯ ಕುರಿತು ಮಾತನಾಡಿದ, ಕವಯತ್ರಿ, ಪ್ರಾಧ್ಯಾಪಕಿ, ಡಾ.ಅನಸೂಯ ಕಾಂಬಳೆ ಅವರು, ಮಹಿಳಾ ಸಾಹಿತ್ಯದ ಅನುವಾದ ಆಗದೇ ಇರುವುದು ಖೇದದ ಸಂಗತಿ. ಬಸು ಬೇವಿನ ಗಿಡದ ಇದಕ್ಕೆ ಹೊರತಾಗಿ, ಇದನ್ನು ಅನುವಾದಿಸಿದ್ದು ಸಂತಸದ ಸಂಗತಿ. ‘ಲೈಟ್ ಹೌಸ್‌’ ಎಂಬುದು ಬೆಳಕಿನ ಸಂಕೇತ. ಬರುವ ಹಡಗಿಗೆ ದಾರಿ ತೋರಿಸುವಂತೆ, ಒಂದು ಕುಟುಂಬಕ್ಕೆ ಮಹಿಳೆ ಬೆಳಕಾಗಿ ಹೇಗೆ ನಿಲ್ಲುತ್ತಾಳೆ ಎಂಬುದರ ಸಂಕೇತವಾಗಿದೆ. ಆದರೆ ಇದಕ್ಕೆ ಗಂಡನಾದವನು ಹೇಗೆ  ತಡೆಗೋಡೆಯಾಗಿ ವರ್ತಿಸುತ್ತಾನೆ ಎಂಬುದರ ಚಿತ್ರಣವಿದೆ. ನಿರೂದ್ಯೋಗದ ಸಮಸ್ಯೆ, ವರ್ಗ ವೈಷಮ್ಯದ ಚಿತ್ರಣವಿದೆ. ಯುದ್ಧ ಸಂದರ್ಭದಲ್ಲಿ ಯುದ್ಧಎನ್ನುವುದು ಅಧಿಕಾರದ ಅಭಿವ್ಯಕ್ತಿಯ ಭಾವವಾಗಿದೆ. ಕಾದಂಬರಿಯ ಅನುವಾದದ ಭಾಷೆ ಓದುಗರ ಮನವನ್ನು ಗೆಲ್ಲುವಲ್ಲಿ ಯಶಸ್ಸು ಕಾಣುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.  

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾ.ಶಶಿಧರ ತೋಡಕರ ಅವರು, ಕಾದಂಬರಿ ಶತಮಾನದ ಹಿಂದೆ ರಚಿತಗೊಂಡಿದ್ದರೂ ಇದರ ವಸ್ತು, ಬರುವ ಪಾತ್ರಗಳು ಇವತ್ತಿನ ಕಾಲಕ್ಕೂ ಅನ್ವಯವಾಗುತ್ತವೆ. ಸಹೃದಯರೂ ಕೂಡ ಇದರಲ್ಲಿ ಪಾಲುದಾರ ಪಾತ್ರದಾರಿಯಾಗುತ್ತಾರೆ. ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿ ತನ್ನ ಸ್ವಾರ್ಥ ಹಾಗೂ ಸಮಯ ಸಾಧನೆಗಾಗಿ ಮಾರ್ಗದರ್ಶನದೊಂದಿಗೆ ವರ್ತಿಸುವ ಬಗೆ, ಆ ಕಾಲಕ್ಕೆ ಮಾತ್ರ ಸೀಮಿತವಾದದ್ದಲ್ಲ. ಇಂದಿಗೂ ಅಂತಹ ಚಿತ್ರಣ ಕಣ್ಮುಂದೆ ಬಂದು ನಿಲ್ಲುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. 

ಕೃತಿಯ ಅನುವಾದಕ ಡಾ.ಬಸು ಬೇವಿನ ಗಿಡದ ಅವರು ಅನುವಾದದ ಅನುಭವಗಳನ್ನು ಹಂಚಿಕೊಂಡರು. ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯಡಾ. ಜಿನದತ್ತ ಹಡಗಲಿ ನಿರೂಪಿಸಿ, ವಂದಿಸಿದರು.  ಸಮಾರಂಭದಲ್ಲಿ ಡಾ. ಲಿಂಗರಾಜ ಅಂಗಡಿ, ಡಾ. ವೆಂಕಟೇಶ ಮಾಚಕನೂರ, ಸುಜಾತ ಹಡಗಲಿ, ಡಾ.ಚಂದ್ರಶೇಖರ ರೊಟ್ಟಿಗವಾಡ ಡಾ.ಎಂ.ಡಿ. ಒಕ್ಕುಂದ, ಎ.ಎ. ದರ್ಗಾ, ಶ್ರೀಧರ ಗಸ್ತಿ, ಹೇಮಾ ಪಟ್ಟಣಶೆಟ್ಟಿ, ಬಿ.ಎಸ್‌. ಶಿರೋಳ, ಡಾ.ಆನಂದ ಪಾಟೀಲ, ಸಿ.ಯು.ಬೆಳ್ಳಕ್ಕಿ, ಡಾ.ಪ್ರಜ್ಞಾ ಮತ್ತಿಹಳ್ಳಿ, ವೈ.ಜಿ.ಭಗವತಿ, ಮೇಘಾ ಹುಕ್ಕೇರಿ, ಮಹಾಂತೇಶ ನರೇಗಲ್ ಮೊದಲಾದವರು ಉಪಸ್ಥಿತರಿದ್ದರು. 


Modernity and Tradition Virginia Woolf's 'The Lighthouse' Women Writers