‘ಡೋಹರ ಕಕ್ಕಯ್ಯನವರು ಶಿವಾನುಭವಿಯಾದ ಅನುಭವ ಸಂಪನ್ನರಾಗಿದ್ದರು’

‘ಡೋಹರ ಕಕ್ಕಯ್ಯನವರು ಶಿವಾನುಭವಿಯಾದ ಅನುಭವ ಸಂಪನ್ನರಾಗಿದ್ದರು’ ‘Dohara Kakkayya was a Shiva devotee with rich experience’


 ಧಾರವಾಡ 06: ಶ್ರಮಜೀವಿಯಾದ ಶಿವಶರಣ ಡೋಹರ ಕಕ್ಕಯ್ಯನವರು ತಮ್ಮ ಕಾಯಕದ ಮೂಲಕ ಶಿವಾನುಭವಿಯಾದ ಅನುಭವ ಸಂಪನ್ನರಾಗಿದ್ದರು ಎಂದು ಡಾ ರುದ್ರಣ್ಣ ಚಿಲುಮಿ ಅಭಿಪ್ರಾಯಪಟ್ಟರು. 

ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ, ಮಾಕಂರ್ಡೇಯ ದೊಡಮನಿ ಶಿಕ್ಷಣ ಹಾಗೂ ಚಾರಿಟೇಬಲ್ ಟ್ರಸ್ಟ್‌ ದತ್ತಿ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡ ಡಾ. ಮಾರ್ಕಂಡೇಯ ದೊಡಮನಿ ಅವರು ರಚಿಸಿದ ಶಿವಶರಣ ಡೋಹರ ಕಕ್ಕಯ್ಯ ಚರಿತ್ರೆ ಗ್ರಂಥ ಪರಿಚಯಿಸಿ, ಮಾತನಾಡಿದರು. 

ಡೋಹರ ಕಕ್ಕಯ್ಯನವರು ಮಾಳವ ದೇಶದಿಂದ ಕಲ್ಯಾಣಕ್ಕೆ ಬಂದು ಅನುಭವ ಮಂಟಪದಲ್ಲಿ ಶರಣರೊಡನಾಡಿ ಬಸವಣ್ಣನವರ ಉತ್ತಮ ಒಡನಾಡಿಗಳೆನಿಸಿಕೊಂಡರು. ಡೋಹರ ಕಕ್ಕಯ್ಯನವರು ಚರ್ಮ ಹದ ಮಾಡುವ ಜಾತಿಗೆ ಸೇರಿದವರಾಗಿದ್ದು, “ಕಾಯಕವೇ ಸತ್ಯ, ದಾಸೋಹವೇ ನಿತ್ಯ” ಶರಣ ತತ್ವದಲ್ಲಿ ನಂಬಿಕೆ ಹೊಂದಿದವರಾಗಿದ್ದರು. 

ಕಲ್ಯಾಣದಲ್ಲಿ ಕ್ರಾಂತಿ ಸಂಭವಿಸಿದಾಗ ಚನ್ನಬಸವಣ್ಣನವರತ್ತ ಉಳವಿಗೆ ಹೊರಟಾಗ ಖಾನಾಪುರ ಸಮೀಪದ ಕಕ್ಕೇರಿಯಲ್ಲಿ ಬಿಜ್ಜಳನ ಸೈನ್ಯದೊಡನೆ ಕಲಿತನದಿಂದ ಹೋರಾಡಿ ವೀರ ಮರಣ ಹೊಂದಿದನು. ಅದೇ ಸ್ಥಳದಲ್ಲಿ ಇಂದಿಗೂ ಅವರ ಸಮಾಧಿ ಹಾಗೂ ಒಂದು ಕೆರೆಗಳಿವೆ. ಕಕ್ಕಯ್ಯನವರು ಒಟ್ಟು ಆರು ವಚನಗಳನ್ನು ರಚಿಸಿದ್ದು, ಆ ವಚನದಲ್ಲಿ ಬಸವಣ್ಣನವರು ನನಗೆ ಲಿಂಗ ದೀಕ್ಷೆ ನೀಡಿ ನನ್ನ ಕೀಳು ಕುಲದ ಕರ್ಮ ಕಳೆದನೆಂದು ಹೇಳಿಕೊಂಡಿದ್ದಾರೆ ಎಂದರು. 

ಪುಡಕಲಕಟ್ಟಿಯ ಶ್ರೀ ಆತ್ಮಾನಂದ ಆಶ್ರಮದ ಈರಣ್ಣ ಸತ್ಯಣ್ಣವರ ಮಾತನಾಡಿ, ಮಹಾತ್ಮರು, ಶರಣರು ಯಾವುದೇ ಜಾತಿಗೆ ಸೀಮಿತವಾದವರಲ್ಲ. ಎಲ್ಲರಿಗೂ ಪರಹಿತ ಬಯಸಿ ಅಜ್ಞಾನದಿಂದ ಸುಜ್ಞಾನದ ಕಡೆ ಮುನ್ನಡೆಸಿದವರಾಗಿದ್ದರೆಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಕವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ. ಬಿ. ಪಿ. ವಾಘಮೊರೆ ಮಾತನಾಡಿ, ಡಾ ಮಾರ್ಕಂಡೇಯ ದೊಡಮನಿ ಓರ್ವ ಶಿಕ್ಷಕರಾಗಿದ್ದ ಅಪರೂಪದ ವ್ಯಕ್ತಿಗಳು. 89ರ ಇಳಿವಯಸ್ಸಿನಲ್ಲಿಯೂ ಅವರ ಉತ್ಸಾಹ ಬತ್ತಿಲ್ಲ. ಕವಿವಿಯಿಂದ ಇಂತಹ ವಯಸ್ಸಿನಲ್ಲಿ ಡಾಕ್ಟರೇಟ್ ಪಡೆದು ಸಾಧನೆ ಮಾಡಿದ್ದಾರೆ. ಅವರು ಯುವಕರಿಗೆ ಸ್ಪೂರ್ತಿಯಾಗಿದ್ದಾರೆಂದು ಹೇಳಿದರು. 

ವೇದಿಕೆಯ ಮೇಲೆ ಸುಶೀಲಾ ದೊಡ್ಡಮನಿ ಇದ್ದರು. ಡಾ. ಮಾರ್ಕಂಡೇಯ ದೊಡಮನಿ ದತ್ತಿ ಆಶಯ ಕುರಿತು ಮಾತನಾಡಿದರು. 

ದಿವ್ಯ ಸಾನಿಧ್ಯ ವಹಿಸಿದ್ದ ಸುರೇಬಾನದ ಪೂಜ್ಯ ಸಮರ್ಥ ಶಿವಾನಂದ ಸ್ವಾಮಿಗಳು ಆಶೀರ್ವಚನ ನೀಡಿ, ಮಹಾತ್ಮರ ಸಂದೇಶ ಪಾಲಿಸಿದರೆ ಮಾತ್ರ ಜೀವನ ಸಾರ್ಥಕ ಮೊದಲು ನಾನು ಯಾರು? ಎಂಬುದನ್ನು ತಿಳಿಯಿರಿ ಎಂದರು. 

ಶಂಕರ ಕುಂಬಿ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ, ಮಾತನಾಡಿದರು. ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ಡಾ ಧನವಂತ ಹಾಜವಗೋಳ ವಂದಿಸಿದರು. ಬಸವಪ್ರಭು ಹೊಸಕೇರಿ, ಪ್ರೊ ವಿ. ಆಯ್‌. ಬೆಣಗಿ, ಸಿ. ಎಸ್‌. ಪಾಟೀಲ, ಎಸ್‌. ಜಿ. ಪಾಟೀಲ, ಜಯಂತ ಗಾಮನಗಟ್ಟಿ ಸೇರಿದಂತೆ ದೊಡಮನಿ ಪರಿವಾರದವರು ಇದ್ದರು.