ರಾಮದುರ್ಗ : ಮಲಪ್ರಭಾ ನದಿಗೆ ನೀರು ಹರಿಸಲು ಒತ್ತಾಯಿಸಿ ಮನವಿ

ರಾಮದುರ್ಗ 14: ತಾಲೂಕಿನಾದ್ಯಂತ ಭೀಕರ ಬರದ ಛಾಯೆ ಉಂಟಾಗಿದ್ದು, ಜನ ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ನವಿಲುತೀರ್ಥ ಜಲಾಶಯದಿಂದ ಶೀಘ್ರ ಮಲಪ್ರಭಾ ನದಿಗೆ ನೀರು ಹರಿಸುವಂತೆ ಒತ್ತಾಯಿಸಿ ಕರವೇ ತಾಲೂಕಾ ಘಟಕದ ಪದಾಧಿಕಾರಿಗಳು ತಹಶೀಲ್ದಾರ ಮುಖಾಂತರ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ನದಿ ಸುತ್ತಮುತ್ತಲಿನ ಹಲವು ಗ್ರಾಮಗಳ ಜನ, ಜಾನುವಾರುಗಳು, ಪೈಪ್ಲೈನ್ ಮೂಲಕ ಕುಡಿಯುವ ನೀರಿಗಾಗಿ ನದಿ ಮೂಲವನ್ನೇ ಅವಲಂಭಿಸಿದ್ದು, ನದಿಯಲ್ಲಿ ನೀರಿಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಮಲಪ್ರಭಾ ನದಿಗೆ ನೀರು ಹರಿಸುವ ಮೂಲಕ ಈ ಭಾಗದ ರೈತರು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಅವರು ಮನವಿ ಮೂಲಕ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಕರವೇ ತಾಲೂಕಾಧ್ಯಕ್ಷ ದುಂಡಯ್ಯ ಹಿರೇಮಠ, ಆನಂದ ಜಗತಾಪ, ಸಿದ್ಧನಗೌಡ ಪಾಟೀಲ, ಲಕ್ಷ್ಮಣ ರಕಮೋಜಿ, ಗಂಗಾಧರ ಸಾಲಿಮಠ, ವಿನಯ ಚಂದರಗಿ, ಹಳೇತೊರಗಲ್, ರಾಮಾಪೂರ, ಮಾಗನೂರ, ಸುನ್ನಾಳ, ಹಾಲೋಳ್ಳಿ, ಗ್ರಾಮದ ರೈತ ಮುಖಂಡರು ಸೇರಿದಂತೆ ಇತರರಿದ್ದರು.