ಯುವಜನರು ಪರಿಸರ ಸಂರಕ್ಷಿಸಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ-ಪ್ರೊ.ನಜೀರ್ ಅಹ್ಮದ್

ಯುವಜನರು ಪರಿಸರ ಸಂರಕ್ಷಿಸಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ-ಪ್ರೊ.ನಜೀರ್ ಅಹ್ಮದ್ Young people should join hands to protect the environment and build a healthy society - Prof. Nazir


ಬಳ್ಳಾರಿ 20: ವಿದ್ಯಾರ್ಥಿ ಯುವಜನರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ರಕ್ಷಿಸುವ  ಮೂಲಕ ಉತ್ತಮ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ಆ ಮೂಲಕ ಮಾಲಿನ್ಯ ರಹಿತ ಪರಿಸರವನ್ನು ಮುಂದಿನ ಪೀಳಿಗೆಗೆ ನೀಡಬೇಕು  ಎಂದು  ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಮಾಜಿ ಕುಲಸಚಿವರು, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಶೈಕ್ಷಣಿಕ ಸಿಬ್ಬಂದಿ ಕಾಲೇಜಿನ ನಿರ್ದೇಶಕರಾದ ಪ್ರೊ. ನಜೀರ್ ಅಹ್ಮದ್  ಅವರು ಅಭಿಪ್ರಾಯಪಟ್ಟರು.  

ಅವರು ಬಳ್ಳಾರಿಯ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜಿನಲ್ಲಿ ಬುಧವಾರದಂದು  ಸಮಾಜಶಾಸ್ತ್ರ ವಿಭಾಗವು "ವ್ಯವಹಾರ, ಪರಿಸರ ಮತ್ತು ಪತ್ರಿಕೋದ್ಯಮದ ಸಾಮಾಜಿಕ ನ್ಯಾಯ ಮತ್ತು ನೀತಿಶಾಸ್ತ್ರ ಎಂಬ ವಿಷಯವಾಗಿ ಏರಿ​‍್ಡಸಿದ್ದ ರಾಜ್ಯ ಮಟ್ಟದ ಒಂದು ದಿನದ ಕಾರ್ಯಾಗಾರದಲ್ಲಿ ಮೊದಲನೆಯ ಅಧಿವೇಶನದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.  

ಪರಿಸರ ಹಾನಿ ದುರ್ಬಲ ಸಮುದಾಯಗಳ ಮೇಲೆ ಅಸಮಾನವಾಗಿ ಪರಿಣಾಮ ಬೀರುತ್ತದೆ. ಮಾಲಿನ್ಯವನ್ನು ಕಡಿಮೆ ಮಾಡುವುದು, ಸುಸ್ಥಿರ ಸಂಪನ್ಮೂಲ ಬಳಕೆ, ಪರಿಸರ ಪ್ರಯೋಜನಗಳು ನ್ಯಾಯಯುತವಾಗಿ ಹಂಚಿಕೊಳ್ಳಲಾಗಿದೆಯೆ ಎಂದು ಪ್ರಭುತ್ವಗಳು ನೋಡಿಕೊಳ್ಳಬೇಕು ಎಂದು ತಿಳಿಸಿದರು.   

ಎರಡನೇ ಅಧಿವೇಶನದಲ್ಲಿ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರಾದ ಡಾ. ಜಿಲಾನ್ ಬಾಷಾ ಅವರು ಮಾತನಾಡಿ ವ್ಯವಹಾರಗಳಲ್ಲಿ ತೊಡಗಿರುವ ವ್ಯಾಪಾರಸ್ಥರು, ಉದ್ಯಮಿಗಳು ಸಾಮಾಜಿಕ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಸಾಮಾಜಿಕ ಮತ್ತು ಪರಿಸರ ಒಳಿತು ವ್ಯವಹಾರದ ಪರಿಕಲ್ಪನೆಯಲ್ಲಿ ಅಡಗಿರುತ್ತದೆ. ಉದ್ಯಮಗಳಲ್ಲಿ ನ್ಯಾಯಯುತ ವೇತನಗಳನ್ನು ನೀಡಬೇಕು. ಪರಿಸರ ಮಾಲಿನ್ಯ ಮಾಡದಂತೆ ಪಾರದರ್ಶಕತೆ ಮತ್ತು ಪರಿಣಾಮಗಳಿಗೆ ಹೊಣೆಗಾರಿಕೆಯಾಗಬೇಕಾಗುತ್ತದೆ ಎಂದರು.  

ಮೂರನೇ ಅಧಿವೇಶನದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಲೋಕೇಶ್ ಅವರು ಸಾಮಾಜಿಕ ನ್ಯಾಯ ಮತ್ತು ಪತ್ರಿಕೋದ್ಯಮದ ನೈತಿಕತೆ ಎಂಬ ವಿಷಯವಾಗಿ ಮಾತನಾಡಿ ಪತ್ರಕರ್ತರಾದವರು ಅಧಿಕಾರದ ಅಸಮತೋಲನವನ್ನು ಪರಿಹರಿಸಲು ಸಮಾಜದಲ್ಲಿ ನಿಷ್ಪಕ್ಷಪಾತ ವರದಿಗಾರಿಕೆ ಮಾಡಬೇಕು. ಅದು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವ ರೀತಿಯಲ್ಲಿರಬೇಕು  ಎಂದು ನುಡಿದರು.  

ಕಾರ್ಯಾಗಾರವು ಸಸ್ಯಕ್ಕೆ ನೀರುಣಿಸುವ ಮೂಲಕ ಉದ್ಘಾಟನೆಗೊಂಡಿತು. ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಹ್ಲಾದ್ ಚೌಧರಿ ಅಧ್ಯಕ್ಷತೆ ವಹಿಸಿ ಉದ್ಘಾಟನಾ ಭಾಷಣ ಮಾಡಿದರು. ಸಮಾಜಶಾಸ್ತ್ರ  ವಿಭಾಗದ ಮುಖ್ಯಸ್ಥರಾದ ಡಾ.ಇಸ್ಮಾಯಿಲ್ ಎಂ.ಮಕಾಂದರ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.  ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಕೆ.ಬಸಪ್ಪ ಅವರು ಎಲ್ಲರನ್ನು ಸ್ವಾಗತಿಸಿದರು. ಡಾ.ಅಪರ್ಣಾ ಹಿರೇಮಠ ಅವರು ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.