ಯೋಗೇಶ ಪಾಟೀಲ ಅವರ ಸನ್ಮಾನ ಸಮಾರಂಭ; ರೈತರು ಮತ್ತು ಕಾರ್ಮಿಕರ ಜೀವನ ಮಟ್ಟ ಸುಧಾರಿಸಲು ಪ್ರಾಮಾಣಿಕ ಪ್ರಯತ್ನ: ಯೋಗೇಶ ಪಾಟೀಲ
ಕಾಗವಾಡ 07 : ಸಧ್ಯದ ಪರಿಸ್ಥಿತಿಯಲ್ಲಿ ಸಕ್ಕರೆ ಉದ್ಯಮವು ಸಂಕಷ್ಟ ಎದುರಿಸುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಈ ಕುರಿತು ಮನವರಿಕೆ ಮಾಡಿಕೊಟ್ಟು, ಸೂಕ್ತ ನೀತಿಗಳನ್ನು ರೂಪಿಸಿ, ಸಕ್ಕರೆ ಉದ್ಯಮವನ್ನು ಪುನಃಸ್ಚೆನಗೊಳಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರಗಳ ಗಮನ ಸೆಳೆದು, ಸಕ್ಕರೆ ಉದ್ಯಮದ ಮೇಲೆ ಅವಲಂಬಿತಗೊಂಡಿರುವ ರೈತರ ಮತ್ತು ಕಾರ್ಮಿಕರ ಹಿತಾಸಕ್ತಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದಾಗಿ ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆಗಳ ಸಂಘ (ಕರ್ನಾಟಕ) ದ ಅಧ್ಯಕ್ಷ ಹಾಗೂ ಅಥಣಿ ಶುಗರ್ಸನ ವ್ಯವಸ್ಥಾಪಕ ನಿರ್ದೇಶಕ ಯೋಗೇಶ ಪಾಟೀಲ ತಿಳಿಸಿದ್ದಾರೆ.
ಅವರು, ಸೋಮವಾರ ದಿ. 06 ರಂದು ತಾಲೂಕಿನ ಕೆಂಪವಾಡನ ಅಥಣಿ ಶುಗರ್ಸ ಕಾರ್ಖಾನೆ ಆವರಣದಲ್ಲಿ ದಕ್ಷಿಣ ಭಾರತದ ಸಕ್ಕರೆ ಕಾರ್ಖಾನೆಗಳ ಸಂಘ (ಕರ್ನಾಟಕ) ರಾಜ್ಯದ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಯುಕ್ತ ಅವರ ಅಭಿಮಾನಿ ಬಳಗದವರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಗೌರವ ಸನ್ಮಾನ ಸ್ವೀಕರಿಸಿ, ಮಾತನಾಡುತ್ತಿದ್ದರು. ನಮ್ಮ ತಂದೆಯವರು ನನಗೆ ನೀಡಿರುವ ಮಾರ್ಗದರ್ಶನದಿಂದಾಗಿ ನಾನು ಇಂದು ಈ ಹುದ್ದೆಗೆ ಏರಲು ಸಾಧ್ಯವಾಗಿದ್ದು, ಅವರು ಅತ್ಯಂತ ಪ್ರತಿಕೂಲ ವಾತಾವರಣದಲ್ಲಿ ಇಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸಂಕಷ್ಟಗಳನ್ನು ಎದುರಿಸುತ್ತಿರುವ ಸಕ್ಕರೆ ಉದ್ಯಮಕ್ಕೆ ಪುನಃಶ್ಚೆತನ ನೀಡಲು ಪ್ರಯತ್ನಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಯುವ ಧುರೀಣರು ಹಾಗೂ ಅಥಣಿ ಶುಗರ್ಸನ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಪಾಟೀಲ ಮಾತನಾಡಿ, ನಮ್ಮ ತಂದೆಯವರ ಮಾರ್ಗದರ್ಶನದಲ್ಲಿಯೇ ನಾವು ಮೂರು ಜನ ಸಹೋದರರು ಇಲ್ಲಿಯ ವರೆಗೂ ನಡೆದುಕೊಂಡು ಬಂದಿದ್ದರಿಂದಲೇ ಜೀವನದಲ್ಲಿ ಯಶಸ್ವಿಯಾಗಿದ್ದೇವೆ. ಅವರು ನಮಗೆ, ಪ್ರಾಮಾಣಿಕತೆ, ನಿಷ್ಠೆ, ಸತ್ಯದ ಮಾರ್ಗದಲ್ಲಿ ನಡೆದುಕೊಳ್ಳಲು ಪ್ರೇರಣೆಯಾಗಿದ್ದಾರೆ. ಅವರೇ ನಮಗೆ ಮಾದರಿ ವ್ಯಕ್ತಿಯಾಗಿದ್ದಾರೆ. ನನ್ನ ಸಹೋದರ ಯೋಗೇಶ ಪಾಟೀಲ ಅವರಿಗೆ ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆಗಳ ಸಂಘದ ಕರ್ನಾಟಕ ರಾಜ್ಯದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ನಮ್ಮ ಕುಟುಂಬಕ್ಕೆ ಹೆಮ್ಮೆಯ ಮತ್ತು ಸಂತೋಷದ ವಿಷಯವಾಗಿದೆ. ಯೋಗೇಶ ಪಾಟೀಲ ಈಗಾಗಲೇ ಮಹಾರಾಷ್ಟ್ರದ ಶುಗರ್ ಮಿಲ್ ಅಸೋಸಿಯೇಷನ್‌ನಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಬ್ಬ ಯುವಕ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಹುದ್ದೆಯನ್ನು ಅಲಂಕರಿಸಿದ್ದು, ದೇಶದಲ್ಲಿಯೇ ಪ್ರಥಮವಾಗಿದ್ದು, ನಮ್ಮೆಲ್ಲರಿಗೆ ಹೆಮ್ಮೆಯ ವಿಷಯವಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವರು, ಮಾಜಿ ಶಾಸಕರಾದ ಶ್ರೀಮಂತ ಪಾಟೀಲ ಮಾತನಾಡಿ, ಕಬ್ಬು ಕಟಾವು ಕಾರ್ಮಿಕರ ಮತ್ತು ಕಾರ್ಖಾನೆ ಕಾರ್ಮಿಕರ ಜೀವನ ಮಟ್ಟ ಸುಧಾರಿಸಿ, ಕಾರ್ಖಾನೆಗಳ ಆರ್ಥಿಕ ಮಟ್ಟ ಇನ್ನಷ್ಟು ಪ್ರಗತಿ ಹೊಂದಬೇಕು. ಈ ನಿಟ್ಟಿನಲ್ಲಿ ಯೋಗೇಶ ಪಾಟೀಲ ಅವರು ಕೈಗೊಳ್ಳುವ ಉತ್ತಮ ಕ್ರಮಗಳು ಇಡೀ ಭಾರತಕ್ಕೆ ಮಾದರಿಯಾಗಬೇಕು. ಅವರು ದಕ್ಷಿಣ ಭಾರತದ ಜೊತೆಗೆ ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘದ ಅಧ್ಯಕ್ಷರಾಗಿ ಅಧಿಕಾರ ವಹಿಸಲಿ ಎಂದು ಶುಭ ಹಾರೈಸಿದರು.ಅಥಣಿ ಶುಗರ್ಸ ನಿರ್ದೇಶಕ ಅಬ್ದುಲ್ ಬಾರಿ ಮುಲ್ಲಾ ಸ್ವಾಗತಿಸಿದರು. ಈ ವೇಳೆ ಮುಖಂಡರಾದ ಅಪ್ಪಾಸಾಹೇಬ ಅವತಾಡೆ, ಗಜಾನನ ಮಂಗಸೂಳಿ, ಉತ್ತಮ ಪಾಟೀಲ, ಗೀರೀಶ ಬುಟಾಳಿ, ಡಾ. ಪ್ರಕಾಶ ಕುಮಠಳ್ಳಿ, ರವಿ ಪೂಜಾರಿ, ಅಭಯಕುಮಾರ ಅಕಿವಾಟೆ, ಶಿವಾನಂದ ಪಾಟೀಲ, ಮಹಾವೀರ ಕಾತ್ರಾಳೆ, ಅರುಣ ಗಣೇಶವಾಡಿ, ಗಜಾನನ ಯರಂಡೋಲಿ, ನಿಂಗಪ್ಪ ಖೋಕಲೆ, ಅಪ್ಪಾಸಾಬ ಮಳಮಳಸಿ, ರಾಜೇಂದ್ರ ಪೊತದಾರ, ಉತ್ಕರ್ಷ ಪಾಟೀಲ, ಪ್ರಕಾಶ ಹಳ್ಳೊಳ್ಳಿ, ಅಭಯ ಪಾಟೀಲ, ನಾನಾಸಾಹೇಬ ಅವತಾಡೆ, ಬಾಹುಸಾಹೇಬ ಜಾಧವ, ಮಲ್ಲಿಕಾರ್ಜು ಅಂದಾನಿ, ಆರ್.ಎಂ. ಪಾಟೀಲ, ಈಶ್ವರ ಕುಂಬಾರೆ, ಪ್ರಮೋದ ಹೊಸುರೆ, ಪ್ರಫುಲ್ ಥೋರುಸೆ, ಸಿದ್ದು ಹವಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.