ಅಂಬೇಡ್ಕರ್ ಪ್ರತಿಮೆಗೆ ಯಡಿಯೂರಪ್ಪ ಗೌರವ ನಮನ: ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಬದ್ಧ- ಮುಖ್ಯಮಂತ್ರಿ

ಬೆಂಗಳೂರು, ಡಿ. 6-   ಸಂವಿಧಾನ ಶಿಲ್ಪಿ ಡಾ‌.ಬಿ.ಆರ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನವಾದ  ಇಂದು ವಿಧಾನಸೌಧದ ಮುಂದಿರುವ ಅಂಬೇಡ್ಕರ್ ಪ್ರತಿಮೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.

ಬಳಿಕ ಮಾತನಾಡಿದ‌ ಯಡಿಯೂರಪ್ಪ, ಶೋಷಿತರು, ಹಿಂದುಳಿದವರನ್ನು ಅವಕಾಶ ವಂಚಿತರನ್ನು ಮುಖ್ಯ ವಾಹಿನಿಗೆ ತಂದ ಅಂಬೇಡ್ಕರ್ ಅವರು ಹಾಕಿಕೊಟ್ಟ ದಾರಿಯಲ್ಲಿ ರಾಜ್ಯಸರ್ಕಾರ ಕೆಲಸ ಮಾಡುತ್ತಿದೆ. ದಮನಿತರ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಅಂಬೇಡ್ಕರ್ ಪರಿನಿರ್ವಾಣ ದಿನದ ಈ ಸಂದರ್ಭದಲ್ಲಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರ ಸಂಕಲ್ಪ ಕೈಗೊಂಡಿದೆ ಎಂದು ಹೇಳಿದರು.

ಹೈದರಾಬಾದ್ ಎನ್‌ಕೌಂಟರ್ ಬಗ್ಗೆ ಕೇಳಿದ ಪ್ರಶ್ನೆಗೆ, ತಮ್ಮ ಆತ್ಮರಕ್ಷಣೆಗಾಗಿ ಪೊಲೀಸರು ಅತ್ಯಾಚಾರಿಗಳ ಮೇಲೆ ಗುಂಡು ಹಾರಿಸಿ  ಅತ್ಯಾಚಾರಿಗಳಿಗೆ ಶಿಕ್ಷೆ ವಿಧಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ  ಮಾತನಾಡಿ, ಕೇಂದ್ರ ಸರ್ಕಾರ ದಲಿತರಿಗೆ ಇನ್ನೂ ಹತ್ತು ವರ್ಷ ಮೀಸಲಾತಿ ಮುಂದುವರಿಸು  ನಿರ್ಧಾರ ಕೈಗೊಂಡಿದ್ದು,‌ ಕೇಂದ್ರದ ಈ ನಿರ್ಣಯವನ್ನು ತಾವು ಸ್ವಾಗತಿಸುವುದಾಗಿ ಹೇಳಿದರು.

ದೇಶದ ಉದ್ದಗಲಕ್ಕೂ ಅವರ ಚಿಂತನೆಗಳು ಅಳವಡಿಸುಂತಾಗಬೇಕು. ಎಲ್ಲಾ ರಾಜಕೀಯ ಪಕ್ಷಗಳಿಗೆ, ಸಾಮಾಜಿಕ ಕಳವಳಿಯ ಸಂಘಟನೆಗಳು ಅಂಬೇಡ್ಕರ್ ಅವರ ಚಿಂತನೆಗಳನ್ನು ಸಾಕಾರಗೊಳಿಸಲು ಕೇಂದ್ರ ಸರ್ಕಾರೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಹೈದ್ರಾಬಾದ್‌ನಲ್ಲಿ  ಅತ್ಯಾಚಾರಿಗಳ ಎನ್ ಕೌಂಟರ್ ನಡೆಸಿರುವ ಪೊಲೀಸರು ಕಾನೂನು ಪ್ರಕಾರವೇ ಕ್ರಮ  ಕೈಗೊಂಡಿದ್ದಾರೆ. ಮಾಧ್ಯಮಗಳಲ್ಲಿ ಗಮನಿಸಿದಂತೆ ಆರೋಪಿಗಳು ಪೊಲೀಸರ ಮೇಲೆ  ತಿರುಗಿಬಿದ್ದಿದ್ದಾರೆ. ಹಾಗಾಗಿ ಅನಿವಾರ್ಯವಾಗಿ ಪೊಲೀಸರುಗುಂಡು ಹಾರಿಸಿದ್ದಾರೆ‌. ಅತ್ಯಾಚಾರಿಗಳಿಗೆ ಇದೊಂದು ಪಾಠವಾಗಬೇಕು ಎಂದರು.

ಉಪ ಚುನಾವಣೆ  ಶಾಂತಿಯುತವಾಗಿ ಮುಗಿದಿದೆ. ಬೆಂಗಳೂರು ಹೊರತುಪಡಿಸಿ ಉಳಿದೆಲ್ಲ ಕಡೆ ಶೇಕಡಾ 70ಕ್ಕಿಂತ  ಹೆಚ್ಚು ಮತದಾನವಾಗಿದೆ. ಸಿ ಓಟರ್ ಸಮೀಕ್ಷೆ ಸತ್ಯಕ್ಕೆ ತುಂಬಾ ಹತ್ತಿರವಾಗಿದೆ. ಬಿಜೆಪಿ  ಹದಿನೈದೂ ಸ್ಥಾನಗಳಲ್ಲಿಯೂ ಗೆಲುವು ಸಾಧಿಸುವ ನಿರೀಕ್ಷೆ ಇದೆ. ಒಂದೆರಡು ಸ್ಥಳಗಳಲ್ಲಿ  ಸ್ವಲ್ಪ ಹೆಚ್ಚು ಕಡಿಮೆ ಆಗಿರಬಹುದು, ಹಾಗಾಗಿ 12 ಸ್ಥಾನಗಳನ್ನು ಬಿಜೆಪಿ ಗೆಲ್ಲುವುದು  ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು‌.