ಯಡೂರು ವೀರಭದ್ರ ಜಾತ್ರೆ: ಸಾಮೂಹಿಕ ಅಯ್ಯಾಚಾರ, ಲಿಂಗ ದೀಕ್ಷೆ
ಮಾಂಜರಿ 30: ಜೀವನದ ಉನ್ನತಿ, ಶಾಂತಿಯ ಬದುಕಿಗೆ ಧರ್ಮದ ಆದರ್ಶ ಮೌಲ್ಯಗಳ ಅರಿವು ಮುಖ್ಯ. ಸುಖದ ಮೂಲ ಧರ್ಮದ ಪರಿಪಾಲನೆಯಲ್ಲಿದೆ. ಸತ್ಯ ಶುದ್ಧ ಧರ್ಮಾಚರಣೆಯಿಂದ ಬದುಕು ವಿಕಾಸಗೊಳ್ಳುವುದೆಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚೆನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಗಳು ಅಭಿಪ್ರಾಯಪಟ್ಟರು.
ಗುರುವಾರರಂದು ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ವೀರಭದ್ರ ದೇವಸ್ಥಾನದ ವಿಶಾಳಿ ಯಾತ್ರಾ ಮಹೋತ್ಸವ ಹಾಗೂ ಮಹಾರಥೋತ್ಸವ ಅಂಗವಾಗಿ ಆಯೋಜಿಸಲಾದ ಸಾಮೂಹಿಕ ಅಯ್ಯಾಚಾರ ಮತ್ತು ಲಿಂಗ ದೀಕ್ಷೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಆಶಾಂತಿಯಿಂದ ತತ್ತರಿಸುತ್ತಿರುವ ಜಗತ್ತಿಗೆ ಧರ್ಮವೊಂದೇ ಆಶಾಕಿರಣ. ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸಿದ ವೀರಶೈವ ಧರ್ಮದಲ್ಲಿ ಆದರ್ಶ ಮೌಲ್ಯಗಳನ್ನು ಕಾಣುತ್ತೇವೆ. ಅವರವರ ಧರ್ಮ ಅವರಿಗೆ ಶ್ರೇಷ್ಠ. ಆದರೆ ಇನ್ನೊಂದು ಧರ್ಮದವರೊಂದಿಗೆ ಸಹಿಷ್ಣುತಾ ಮನೋಭಾವನೆಯಿಂದ ನಡೆದು ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದುದು ಎಲ್ಲರ ಧರ್ಮ. ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಅಹಿಂಸಾದಿ ಧ್ಯಾನ ಪಯಂರ್ತರವಾದ ದಶ ಧರ್ಮ ಸೂತ್ರಗಳು ಸಕಲರ ಬಾಳಿಗೆ ಬೆಳಕು ತೋರಿವೆ ಎಂದು ಶ್ರೀಶೈಲ ಜಗದ್ಗುರುಗಳು ಹೇಳಿದರು
ಪ್ರತಿಯೊಬ್ಬ ಮನುಷ್ಯ ಜೀವನದಲ್ಲಿ ಮೂರು ಋಣ ತೀರಿಸಲೇಬೇಕು. ಹೆತ್ತ ತಂದೆ-ತಾಯಿಗಳ ಋಣ ಮತ್ತು ಗುರು ಋಣ ತೀರಿಸಬೇಕು. ಮುತ್ನಾಳ ಗ್ರಾಮ ಚಿಕ್ಕದಾದರೂ ಭಕ್ತರ ಭಕ್ತಿ ದೊಡ್ಡದು ಎಂದು ಜಮಖಂಡಿಯ ಶಿವಲಿಂಗ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದರು.
ಈ ಸಾಮೂಹಿಕ ಅಯ್ಯಾಚಾರ ಮತ್ತು ಲಿಂಗ ಭಿಕ್ಷೆ ಸಮಾರಂಭದ ನೇತೃತ್ವವನ್ನು ಜಮಖಂಡಿಯ ಗೌರಿಶಂಕರ್ ಶಿವಾಚಾರ್ಯ ಸ್ವಾಮೀಜಿ ಅಂಬಿಕಾ ನಗರದ ಈಶ್ವರ ಪಂಡಿತರಾದ ಶಿವಾಚಾರ್ಯ ಸ್ವಾಮೀಜಿ ಬನಹಟ್ಟಿಯ ಶರಣಬಸವ ಶಿವಾಚಾರಿ ಸ್ವಾಮೀಜಿಗಳು ವಹಿಸಿದ್ದರು ಪೌರಹಿತ್ಯವನ್ನು ವೇದಮೂರ್ತಿಗಳಾದ ಶ್ರೀಶೈಲ ಶಾಸ್ತ್ರಿ ಹಿರೇಮಠ್, ಮಲ್ಲಯ್ಯ ಶಾಸ್ತ್ರಿ ಜಡೆ, ಬಸವರಾಜ್ ಶಾಸ್ತ್ರಿ ಹಿರೇಮಠ, ಅಣ್ಣಯ್ಯ ಶಾಸ್ತ್ರಿ ಹಿರೇಮಠ, ಮಹಾಲಿಂಗ ಶಾಸ್ತ್ರಿ ಬ್ರಿಂಗಿ, ಸಂತೋಷ್ ಶಾಸ್ತ್ರಿ ಹಿರೇಮಠ ಮಾಡಿದರು.