ಲೋಕದರ್ಶನ ವರದಿ
ಶಿರಹಟ್ಟಿ 29: ಶಿರಹಟ್ಟಿಯ ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳು ಶನಿವಾರ ರಾತ್ರಿ 7-8ರ ಸುಮಾರಿಗೆ ಊಟ ಮಾಡಿದ ನಂತರ ರಾತ್ರಿ 11 ಗಂಟೆಗೆ ಅಸ್ವಸ್ಥಗೊಂಡು ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಹಾಗೂ ರವಿವಾರ ದಿವಸವೂ ಸಹ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಂಡು ಅಸ್ವಸ್ಥರಾಗಿದ್ದಾರೆ.
ಸಾಂಬಾರನಲ್ಲಿ ಹುಳು: ಶನಿವಾರ ರಾತ್ರಿ ಊಟ ಮಾಡಿದ ನಂತರ ಶಾಲೆಯ ವಿದ್ಯಾರ್ಥಿಗಳಾದ ಸಂಗೀತಾ ಗುಂಡಿಕೇರಿ, ಜ್ಯೋತಿ ಮಡಿವಾಳರ, ವೈಷ್ಣವಿ ಹುಲಕಟ್ಟಿ, ಅಮೂಲ್ಯ ಹಿತ್ತಲಮನಿ, ಪವಿತ್ರಾ ಮಲಸಮುದ್ರ, ತೇಜಸ್ವಿನಿ ತಿರಕಪ್ಪನವರ, ಜಯಶ್ರೀ ದೊಡ್ಡಮನಿ, ಮಂಜುಳಾ ಪಲ್ಲೇದ, ರಾಧಿಕಾ ಯಲಗಚ್ಚ, ಸೃಷ್ಟಿ ಸನದಿ ರಾತ್ರಿ 11ಗಂಟೆ ಸುಮಾರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಖಾಸಗಿ ವಾಹನದಲ್ಲಿ ಇವರನ್ನು ತಾಲೂಕಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ರವಿವಾರ 2-3 ವಿದ್ಯಾರ್ಥಿಗಳನ್ನು ಪಾಲಕರು ಬಂದು ಮನೆಗೆ ಕರೆದೊಯ್ದಿದ್ದಾರೆ. ವಿದ್ಯಾರ್ಥಿಗಳು ಸಾಂಬಾರನಲ್ಲಿ ಹುಳು ಬಿದ್ದಿದೆ ಎಂದು ಹೇಳಿದರೂ ಸಹ ಅದನ್ನೇ ನಮಗೆ ಬಡಿಸಿದ್ದರಿಂದ ನಮಗೆ ವಾಂತಿ-ಬೇಧಿ, ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ಹೇಳುತ್ತಿದ್ದಾರೆ. ಕಳೆದ ವಾರ ಎಫ್1 ಪರೀಕ್ಷಾ ಇದ್ದಂತಹ ಸಮಯದಲ್ಲಿ ಸಮರ್ಪಕವಾಗಿ ವಿದ್ಯುತ್ ಇಲ್ಲದೇ ಇದ್ದುದರಿಂದ ನಮಗೆ ಸರಿಯಾಗಿ ಓದಲಿಕ್ಕೆ ಸಾಧ್ಯವಾಗಿಲ್ಲಾ. ಈ ವ್ಯವಸ್ಥೆಯನ್ನು ಸರಿಪಡಿಸುವಂತೆಯೂ ಸಹ ವಿದ್ಯಾರ್ಥಿಗಳು ಆಗ್ರಹಪಡಿಸಿದ್ದಾರೆ.
ಶೀಘ್ರವೇ ಭೇಟಿ: ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಖಾಜಾಹುಸೇನ ಮುಧೋಳ, ಘಟನೆಗೆ ಸಂಬಂಧಿಸಿದಂತೆ ಪ್ರಾಚಾರ್ಯರಿಂದ ಮಾಹಿತಿ ಪಡೆಯಲಾಗುವುದು. ಶೀಘ್ರದಲ್ಲೇ ವಸತಿ ಶಾಲೆಗೆ ಭೇಟಿ ವಿದ್ಯಾರ್ಥಿಗಳೊಂದಿಗೆ ಸಮಸ್ಯೆಗಳನ್ನು ಆಲಿಸಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.