ಬ್ಯಾಡಗಿ03: ಅಭಿವೃದ್ಧಿಯ ನೆಪದಲ್ಲಿ ಅರಣ್ಯಗಳನ್ನು ನಾಶ ಮಾಡುತ್ತಿರುವುದರಿಂದ ಕಾಡು ಪ್ರಾಣಿಗಳು ನಾಡಿಗೆ ಲಗ್ಗೆಯಿಟ್ಟಿದ್ದು, ಅರಣ್ಯ ಸಂರಕ್ಷಿಸದಿದ್ದಲ್ಲಿ ಜನರಿಗೆ ಉಳಿಗಾಲವಿಲ್ಲ ಎಂದು ಎಸ್.ಡಿ.ಎಂ.ಸಿ. ಅಧ್ಯಕ್ಷ ಉಜ್ಜಯ್ಯ ಕರಿನಾಗಣ್ಣನವರ ಹೇಳಿದರು.
ಅವರು ತಾಲೂಕಿನ ಅತ್ತಿಕಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ "ವಿಶ್ವ ವನ್ಯಜೀವಿಗಳ ದಿನಾಚರಣೆ" ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಅರಣ್ಯಗಳು ನಾಶವಾಗುತ್ತಿರುವದರಿಂದ ಕಾಡಿನಲ್ಲಿ ಆಹಾರ ದೊರಕದೇ ಹುಲಿ, ಸಿಂಹ, ಚಿರತೆ, ಕರಡಿಯಂತಹ ಅನೇಕ ಪ್ರಾಣಿಗಳು ಜನವಸತಿ ಪ್ರದೇಶಗಳಿಗೆ ದಾಳಿಯಿಡುತ್ತಿರುವುದರಿಂದ ಜನಜೀವನ ಕಷ್ಟಕರವಾಗಿದೆ. ಕಾಂಕ್ರೀಟ್ಮಯ ನಾಡಿಗಾಗಿ ಗಿಡಗಳನ್ನು ಕಡಿಯುತ್ತಾ, ಮೋಜು ಮಸ್ತಿಗಾಗಿ ಪ್ರಾಣಿಗಳನ್ನು ಕೊಲ್ಲುತ್ತಾ ಸಾಗಿದರೆ ಮುಂದೊಂದು ದಿನ ಚಿತ್ರಗಳಲ್ಲಿ ಪ್ರಾಣಿಗಳನ್ನು ಗುರುತಿಸಬೇಕಾದ ಪ್ರಸಂಗ ಎದುರಾಗುವುದು ಖಚಿತವೆಂದು ಎಚ್ಚರಿಸಿದ ಅವರು ಪ್ರತಿಯೊಬ್ಬ ವಿದ್ಯಾರ್ಥಿ ಯು ತಮ್ಮ ಕುಟುಂಬದೊಂದಿಗೆ ಮನೆಗೆ ಒಂದರಂತೆ ಗಿಡಗಳನ್ನು ಬೆಳೆಸುವ ನಿಟ್ಟಿನಲ್ಲಿ ಕ್ರಮ ವಹಿಸುವ ಮೂಲಕ ನೈಸಗರ್ಿಕವಾಗಿ ಹಸಿರು ವಾತಾವರಣವನ್ನು ಸೃಷ್ಟಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಮುಖ್ಯ ಶಿಕ್ಷಕ ಬಿ.ಎಚ್. ದೊಡ್ಡಮನಿ ಮಾತನಾಡಿ, ವನ್ಯಜೀವಿಗಳ ಸಂರಕ್ಷಣೆ ಮಾಡುವಲ್ಲಿ ನಮ್ಮೆಲ್ಲರ ಪಾತ್ರ ಬಹಳ ಮುಖ್ಯವಾದದ್ದು, ಅರಣ್ಯ ಪ್ರದೇಶಗಳ ರಕ್ಷಣೆಯೊಂದಿಗೆ ಅವುಗಳು ವಾಸಿಸುವ ಪ್ರದೇಶದಲ್ಲಿ ಮಾನವರ ಹಸ್ತಕ್ಷೇಪವಿಲ್ಲದಿದ್ದರೆ ಎಲ್ಲ ಪ್ರಾಣಿಗಳೂ ನೆಮ್ಮದಿಯಿಂದ ಬಾಳಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಜ್ಯೋತಿ ಬಿಳಕಿ, ಸದಸ್ಯರಾದ ಆಂಜನೇಯ ಗಿರೇಗೊಂಡ್ರ, ಪರಮೇಶಪ್ಪ ಕರಿನಾಗಣ್ಣನವರ, ಮನೋಹರ ಕರಿನಾಗಣ್ಣನವರ, ಸಹ ಶಿಕ್ಷಕರಾದ ಸುಧಾ ಎಚ್, ಬಿ ಆರ್ ಕೊಟ್ರಳ್ಳಿ, ಈಶಪ್ಪ ಎಂ, ಮಹೇಶಪ್ಪ ಎಚ್ ಹಾಗೂ ಜಮೀರ ರಿತ್ತಿ ಉಪಸ್ಥಿತರಿದ್ದರು.