ಬಿಡುಗಡೆಗೆ ಮೊದಲೇ 'ಕೆಜಿಎಫ್ ಸಿನಿಮಾ ದಾಖಲೆಗಳ ಮೇಲೆ ದಾಖಲೆ ಮಾಡುತ್ತಿದೆ. ಈಗ ಸಿನಿಮಾದ ಒಂದು ಹಾಡು ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. ಈ ಮೂಲಕ ಭಾರತದ ಆಚೆಗೂ 'ಕೆಜಿಎಫ್ ಸಿನಿಮಾ ಸದ್ದು ಮಾಡುತ್ತಿದೆ. 'ಕೆಜಿಎಫ್ ಸಿನಿಮಾದ 'ಗಲಿ ಗಲಿ' ಹಾಡು ಕಳೆದ ಬುಧವಾರ ಬಿಡುಗಡೆಯಾಗಿದೆ. ಬಿಡುಗಡೆಯಾದ ಮೊದಲ ದಿನವೇ 13 ಮಿಲಿಯನ್ ವ್ಯೂವ್ಸ್ ಪಡೆದುಕೊಂಡಿದೆ. ವಿಶೇಷ ಎಂದರೆ, ವಿಶ್ವದ ಯಾವ ಸಿನಿಮಾ ಹಾಡು ಕೂಡ ಒಂದು ದಿನಕ್ಕೆ ಈ ಮಟ್ಟಿನ ಹಿಟ್ಸ್ ಪಡೆದುಕೊಂಡಿಲ್ಲ.
ಈ ದಾಖಲೆ ಮೂಲಕ 'ಕೆಜಿಎಫ್ ಸಿನಿಮಾ ಕ್ರೇಜ್ ಏನು ಎನ್ನುವುದು ಮತ್ತೆ ಸಾಬೀತಾಗಿದೆ. ಸಿನಿಮಾದ ಈ ಹಾಡನ್ನು ಹಿಂದಿಯಲ್ಲಿ ಮಾತ್ರ ಬದಲಾಯಿಸಲಾಗಿತ್ತು. 1989ರಲ್ಲಿ ಬಂದ 'ತ್ರಿದೇವ್ ಚಿತ್ರದ ಸೂಪರ್ ಹಿಟ್ ಹಾಡನ್ನು ಮತ್ತೆ ಇಲ್ಲಿ ಬಳಸಿಕೊಳ್ಳಲಾಗಿತ್ತು. ಅಂದಹಾಗೆ, ಕನ್ನಡದಲ್ಲಿ 'ಜೋಕೆ ನಾನು ಬಳ್ಳಿಯ ಮಿಂಚು..' ಹಾಡಿಗೆ ತಮನ್ನಾ ಹೆಜ್ಜೆ ಹಾಕಿದ್ದಾರೆ. ಆ ಹಾಡು ಇಂದು ಬಿಡುಗಡೆಯಾಗುತ್ತಿದೆ. ಮುಂದಿನ ಶುಕ್ರವಾರ ಸಿನಿಮಾ ತೆರೆಗೆ ಬರಲಿದೆ.