ವಿಶ್ವ ಜಾನಪದ ಬುಡಕಟ್ಟು ದಿನ ಆಚರಣೆ
ಧಾರವಾಡ 16: ಜಾನಪದ ಸಾಹಿತ್ಯ ನಮ್ಮ ಜನಪದರ ಜೀವನಾನುಭವದ ಅಭಿವ್ಯಕ್ತಿ. ಇಂತಹ ಮೋಹಕ ಸಾಹಿತ್ಯವನ್ನು ಉಳಿಸಿ ಬೆಳೆಸಬೇಕಾದದ್ದು ನಮ್ಮ ಆದ್ಯ ಕರ್ತವ್ಯ ಎಂದು ಧಾರವಾಡ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಕೃಷ್ನಾ ಕೊಳ್ಳಾನಟ್ಟಿ ಹೇಳಿದರು.
ಅವರು ಕ.ವಿ.ವ ಸಂಘದಲ್ಲಿ ವಿಶ್ವ ಜಾನಪದ ಬುಡಕಟ್ಟು ದಿನಾಚರಣೆ ಅಂಗವಾಗಿ ದ್ಯಾಮವ್ವದೇವಿ ಸಾಂಸ್ಕೃತಿಕ ಮಹಿಳಾ ಸಂಘ, ತಡಸಿನಕೊಪ್ಪ ಹಾಗೂ ಶಿವಯೋಗೇಶ್ವರ ಜಾನಪದ ಕಲಾ ಸಂಘ, ಧಾರವಾಡ ಜಂಟಿಯಾಗಿ ಆಯೋಜಿಸಿದ್ದ ‘ಜಾನಪದ ಸಂಭ್ರಮ-2025’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉತ್ತರ ಕರ್ನಾಟಕದ ಜಾನಪದ ಕಲಾವಿದರ ತವರು. ಆದರೆ ಸರ್ಕಾರದ ನಿರ್ಲಕ್ಷದಿಂದ ಕಲಾವಿದರಿಗೆ ಸಿಗಬೇಕಾದ ಸೌಲಭ್ಯಗಳು ಸಿಗದಿರುವುದು ವಿಷಾದ. ಜಾನಪದ ಕಲಾ ಶ್ರೀಮಂತಿಕೆ ಉಳಿಯಬೇಕಾದರೆ ಮೊದಲು ಕಲಾವಿದರಿಗೆ ಸಿಗಬೇಕಾದ ಸೌಲಭ್ಯ ಸಿಗುವಂತಾಗಬೇಕು. ಕಲಾವಿದರು ನಮ್ಮ ಸಂಸ್ಕೃತಿಯ ವಾರಸುದಾರರು ಎಂದು ಹೇಳಿದರು.
ಕ.ವಿ.ವ. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ ಮಾತನಾಡಿ, ಜಾನಪದ ಸಾಹಿತ್ಯ ಎಲ್ಲಾ ಪ್ರಕಾರಗಳಿಗಿಂತಲೂ ಶ್ರೇಷ್ಠವಾದುದು. ಒಂದರ್ಥದಲ್ಲಿ ಶಿಷ್ಠಪದ ಸಾಹಿತ್ಯಕ್ಕೆ ತಾಯಿ ಇದ್ದಂತೆ. ಜಾನಪದ ಹಾಡುಗಳು ಜನಪದರು ಜೀವನದಲ್ಲಿ ಪಟ್ಟ ನೋವು ನಲಿವುಗಳೇ ಹಾಡಾಗಿವೆ. ಜಾನಪದ ಹಾಡುಗಳು ಹಾಡಲು ಕಾವ್ಯಮಯವೂ, ಭಾವಮಯವೂ ಆಗಿವೆ. ಅಂತಹ ಸಾಹಿತ್ಯ ಜನಪ್ರಿಯತೆ ಜಾಗತೀಕರಣದ ಪ್ರಭಾವದಿಂದ ನಶಿಸುತ್ತಿರುವುದು ಆತಂಕಕಾರಿಯಾಗಿದೆ.
ಕ.ವಿ.ವ. ಸಂಘದ ಕೋಶಾಧ್ಯಕ್ಷ ಸತೀಶ ತುರಮರಿ ಮಾತನಾಡಿ, ಜಾನಪದ ಮೊದಲು ಮೌಖಿಕ ಸಾಹಿತ್ಯವಾಗಿತ್ತು. ನಂತರ ಸಾಹಿತ್ಯಾಸಕ್ತರು ಕೃತಿ ರೂಪದಲ್ಲಿ ತಂದಿದ್ದಾರೆ. ನಮ್ಮ ಬದುಕು ತಿದ್ದಿ ಸಂಸ್ಕಾರಗೊಳಿಸುವ ಶಕ್ತಿ ಜಾನಪಕ್ಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಿ. ಹೊಂಗಲ ಮಾತನಾಡಿ, ಜಾನಪದ ಮರೆತರೆ ನಮ್ಮ ಸಂಸ್ಕೃತಿ ಹಾಗೂ ಪರಂಪರೆ ಮರೆತಂತೆ. ನಮ್ಮ ಪೂರ್ವಜರು ನಮಗಾಗಿ ಬಿಟ್ಟು ಹೋದ ಈ ಕಲಾ ಪರಂಪರೆ ಉಳಿಸಿ ಬೆಳೆಸಬೇಕಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿದ್ದ ಎಸ್.ಎನ್. ಬಿದರಳ್ಳಿ, ಎಸ್.ಎನ್. ಚಿಕ್ಕಣ್ಣವರ ಜಾನಪದ ಸಂಭ್ರಮ ಕುರಿತು ಮಾತನಾಡಿದರು. ಪ್ರಕಾಶ ಮಲ್ಲಿಗವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಕ್ಕೇರ್ಪ ನಡುವಿನಮನಿ(ಶ್ಯಾನವಾಡ ಮಾಸ್ತರ) ಸ್ವಾಗತಿಸಿ, ನಿರೂಪಿಸಿದರು. ಗಂಗವ್ವ ಆಡಿನವರ, ಪ್ರೇಮಾ ವಾಲಿಕಾರ, ಅನಸೂಯಾ ಗಾಯಕವಾಡ, ನಾಗಮ್ಮ ಬಾರಿಗಿಡದ ಸೇರಿದಂತೆ ಜಾನಪದ ಕಲಾವಿದರು ಕಾರ್ಯಕ್ರಮದಲ್ಲಿದ್ದರು. ತಾಲೂಕಿನ ವಿವಿಧ ಹಳ್ಳಿಗಳಿಂದ ಆಗಮಿಸಿದ್ದ ಜಾನಪದ ಕಲಾ ತಂಡಗಳು ತಮ್ಮ ಕಲಾ ಸಂಭ್ರಮ ಆಚರಿಸಿದರು.