ವಿಶ್ವ ಕ್ಯಾನ್ಸರ್ ದಿನಾಚರಣೆ: ಜನ ಜಾಗೃತಿ ಜಾಥದಲ್ಲಿ ಡಿಹೆಚ್‌ಓ ಡಾ.ಯಲ್ಲಾ ರಮೇಶ್ ಬಾಬು ಮನವಿ
ಸಾರ್ವಜನಿಕರು ದುಶ್ಚಟಗಳಿಂದ ದೂರವಿರಬೇಕುಬಳ್ಳಾರಿ 04: ಸಾರ್ವಜನಿಕರು ಬೀಡಿ ಸೇದುವುದು, ತಂಬಾಕು ಗುಟ್ಕಾ ಜಗಿಯುವುದು, ಮದ್ಯ ಸೇವನೆ ಸೇರಿದಂತೆ ದುಷ್ಚಟಗಳಿಂದ ದೂರವಿರಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ‘ವಿಶಿಷ್ಟತೆಯಿಂದ ಏಕತೆ’ ಎಂಬ ಘೋಷವಾಕ್ಯದೊಂದಿಗೆ “ವಿಶ್ವ ಕ್ಯಾನ್ಸರ್ ದಿನಾಚರಣೆ” ಅಂಗವಾಗಿ ಜಿಲ್ಲಾ ಆಸ್ಪತ್ರೆ ಆವರಣದಿಂದ ಮಂಗಳವಾರ ಹಮ್ಮಿಕೊಂಡಿದ್ದ ಜನಜಾಗೃತಿ ಜಾಥಾಗೆ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಕ್ಯಾನ್ಸರ್ ನಲ್ಲಿ ಸುಮಾರು ವಿಧಗಳಿವೆ. ಅವುಗಳಲ್ಲಿ ಚರ್ಮದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್, ಕೊಲೊರೆಕ್ಟಲ್ ಕ್ಯಾನ್ಸರ್, ಮೆಲನೋಮ, ಲಿಂಫೋಮ ಕ್ಯಾನ್ಸರ್ ಮತ್ತು ಮೂತ್ರಪಿಂಡದ ಕ್ಯಾನ್ಸರ್ ಗಳಿವೆ. ಆದರೆ ಬಾಯಿ, ಗರ್ಭಾಶಯ ಮತ್ತು ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತವೆ ಎಂದು ಅವರು ತಿಳಿಸಿದರು.
ಕ್ಯಾನ್ಸರ್ ಖಾಯಿಲೆಯ ಬಗ್ಗೆ ಜಾಗೃತಿ ಮತ್ತು ಅರಿವು ಹೊಂದಬೇಕು. ಕ್ಯಾನ್ಸರ್ ಚಿಕಿತ್ಸೆಗೆ ಬಿಮ್ಸ್ ನಲ್ಲಿ ಚಿಕಿತ್ಸಾ ಸೌಲಭ್ಯವಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾರ್ಯಕ್ರಮ ಅಧಿಕಾರಿ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ.ವಿ.ಕೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 2000 ರ ಫೆ.04 ರಂದು ಪ್ಯಾರಿಸ್ ದೇಶದಲ್ಲಿ ಮೊದಲ ಬಾರಿಗೆ ವಿಶ್ವ ಕ್ಯಾನ್ಸರ್ ದಿನ ಆಚರಿಸಲಾಯಿತು. ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವುದು ಇದರ ಉದ್ದೇಶವಾಗಿತ್ತು ಎಂದು ಹೇಳಿದರು.ಇಂದು ಅಧುನಿಕ ಜೀವನ ಶೈಲಿಗಳಿಂದ ತಂಬಾಕು ಬಳಕೆಯಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಪ್ರಸುತ್ತ ಆಧುನಿಕ ತಂತ್ರಜ್ಞಾನದಿಂದ ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತಗಳಲ್ಲಿ ಪತ್ತೆಮಾಡಬೇಕು. ಖಚಿತ ಪಟ್ಟಲ್ಲಿ ಸಂಪೂರ್ಣವಾಗಿ ಚಿಕಿತ್ಸೆ ನೀಡಿ ಗುಣಮುಖಗೊಳಿಸಬಹುದು ಎಂದರು.ಮುಂದಿನ ದಿನಗಳಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿಯೇ ಕೀಮೋಥೆರಫಿ ಸೌಲಭ್ಯ ಆರಂಭವಾಗಲಿದೆ. ಮಾರ್ಚ್ ತಿಂಗಳಲ್ಲಿ ಗೃಹ ಆರೋಗ್ಯ ಕರ್ನಾಟಕ ಕಾರ್ಯಕ್ರಮದಡಿ ಮನೆ-ಮನೆ ಭೇಟಿ ನೀಡಿ ಸಾಂಕ್ರಮಿಕ ರೋಗಗಳ ತಪಾಸಣೆ ಕೈಗೊಳ್ಳಲಾಗುವುದು. ಸಾರ್ವಜನಿಕರು ಜಾಗೃಕರಾಗಿ ಕ್ಯಾನ್ಸರ್ ಲಕ್ಷಣಗಳಿನುಸಾರವಾಗಿ ತಪಾಸಣೆಗೆ ಒಳಪಟ್ಟು ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಿಸಲು ಕೈಜೋಡಿಸಬೇಕು ಎಂದು ತಿಳಿಸಿದರು.*ಅರಿವು ಮೂಡಿಸಿದ ಜಾಥಾ:*
ಜನ ಜಾಗೃತಿ ಜಾಥಾವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಆರಂಭಗೊಂಡು ಸಂಗಂ ವೃತ್ತ, ರಾಘವೇಂದ್ರ ಚಿತ್ರ ಮಂದಿರ ವೃತ್ತ, ಮೀನಾಕ್ಷಿ ವೃತ್ತ, ಜಿಲ್ಲಾಧಿಕಾರಿಗಳ ಕಚೇರಿ ಮಾರ್ಗವಾಗಿ ಮರಳಿ ಗಡಿಗಿ ಚೆನ್ನಪ್ಪ ವೃತ್ತ ಮೂಲಕ ಪುನಃ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದವರೆಗೆ ಮರಳಿತು. ದಾರಿಯುದ್ದಕ್ಕೂ ಘೋಷಣೆ ಹಾಕುತ್ತಾ ಕ್ಯಾನ್ಸರ್ ರೋಗದ ಕುರಿತು ಅರಿವು ಮೂಡಿಸಲಾಯಿತು.
ಇದೇ ವೇಳೆ ಕ್ಯಾನ್ಸರ್ ಕುರಿತ ಜಾಗೃತಿ ಭಿತ್ತಿಪತ್ರಗಳನ್ನು ಗಣ್ಯರು ಬಿಡುಗಡೆಗೊಳಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಕ್ಯಾನ್ಸರ್ ತಜ್ಞರಾದ ಡಾ.ವಿಘ್ನೇಶ್.ಎಸ್., ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಕುಟುಂಬ ಕಲ್ಯಾಣ ಅನುಷ್ಠಾನಾಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ.ವೀರೇಂದ್ರ ಕುಮಾರ್, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಆರ್.ಅಬ್ದುಲ್ಲಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ ಸೇರಿದಂತೆ ಜಾಥಾದಲ್ಲಿ ವಿಮ್ಸ್ ನಸಿಂರ್ಗ್ ವಿದ್ಯಾರ್ಥಿಗಳು, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳು ಆಶಾ ಕಾರ್ಯಕರ್ತೆಯರು, ನಗರ ಪ್ರಾಥಮಿಕ ಆರೋಗ್ಯ ಸಿಬ್ಬಂದಿಗಳು ಭಾಗವಹಿಸಿದ್ದರು.