ನವದೆಹಲಿ 03: ಸಂಸತ್ ಬಜೆಟ್ ಅಧಿವೇಶನ ಆರಂಭದ ದಿನ ಉಭಯ ಸದನಗಳನ್ನುದ್ದೇಶಿಸಿದ್ದ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
‘ಮೇಕ್ ಇನ್ ಇಂಡಿಯಾ’ ಒಂದು ಒಳ್ಳೆಯ ಪರಿಕಲ್ಪನೆಯಾಗಿದ್ದು, ಮೋದಿ ಅದನ್ನು ಸಾಕಾರಗೊಳಿಸುವುದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದರು.
‘ಚೀನೀಯರು ನಮ್ಮ ಭೂಪ್ರದೇಶದಲ್ಲಿದ್ದಾರೆ ಎಂದು ನಮ್ಮ ಸೇನಾ ಮುಖ್ಯಸ್ಥರು ಹೇಳಿದ್ದಾರೆ. ‘ಮೇಕ್ ಇನ್ ಇಂಡಿಯಾ’ ವಿಫಲವಾಗಿರುವುದರಿಂದ ದೇಶದೊಳಗೂ ಚೀನಾ ಕುಳಿತಿದೆ. ಸ್ವದೇಶಿ ಉತ್ಪಾದನೆ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ಈ ಕ್ರಾಂತಿಕಾರಕ ಪರಿಕಲ್ಪನೆಯನ್ನು ಭಾರತವು ಚೀನಾಕ್ಕೆ ಮತ್ಟೊಮ್ಕೆ ಬಿಟ್ಟುಕೊಡುತ್ತಿದೆ ಎಂಬ ಆತಂಕ ಕಾಡುತ್ತಿದೆ’ ಎಂದಿದ್ದಾರೆ.
ಭಾರತದೊಳಗೆ ಚೀನಾ, ಭದ್ರತೆ ಮತ್ತು ಮೇಕ್ ಇನ್ ಇಂಡಿಯಾಗೆ ಮಾರಕ ಎಂದು ಹೇಳಿದ್ದಾರೆ.
ಭಾರತ ಚೀನಾ ಉತ್ಪನ್ನಗಳ ಮೇಲೆ ಹೆಚ್ಚು ಅವಲಂಬಿತವಾಗಿರುವುದು ಪ್ರಮುಖ ರಾಷ್ಟ್ರೀಯ ಕಾಳಜಿಯ ವಿಷಯವಾಗಿದೆ. ಭಾರತದ ಪ್ರದೇಶದ ಒಳಗೆ ಚೀನಾ ಪಡೆಗಳು ನುಗ್ಗಿವೆ, ನಮ್ಮ ಸೇನಾ ಮುಖ್ಯಸ್ಥರು ಚೀನಿಯರು ನಮ್ಮ ಪ್ರದೇಶದೊಳಗೆ ಇದ್ದಾರೆ ಎಂದು ಹೇಳಿದ್ದಾರೆ. ಇದು ಸತ್ಯ. ಚೀನಾ ನಮ್ಮ ಪ್ರದೇಶದೊಳಗೆ ಇರುವುದಕ್ಕೆ ಮುಖ್ಯ ಕಾರಣ, ಚೀನಾ ಈ ದೇಶದೊಳಗೆ ಕುಳಿತಿರುವುದಕ್ಕೆ ಕಾರಣ 'ಮೇಕ್ ಇನ್ ಇಂಡಿಯಾ' ವಿಫಲವಾಗಿರುವುದು ಎಂದರು.
"ಚೀನಾ ಈ ದೇಶದೊಳಗೆ ಕುಳಿತಿರುವುದಕ್ಕೆ ಕಾರಣ ಭಾರತ ಹೆಚ್ಚು ಉತ್ಪಾದಿಸಲು ನಿರಾಕರಿಸುತ್ತಿರುವುದಾಗಿದೆ ಮತ್ತು ಭಾರತ ಉತ್ಪಾದನಾ ವಲಯದ ಕ್ರಾಂತಿಯನ್ನು ಮತ್ತೊಮ್ಮೆ ಚೀನಿಯರಿಗೆ ಬಿಟ್ಟುಕೊಡಲಿದೆ ಎಂದು ನನಗೆ ಚಿಂತೆಯಾಗಿದೆ ಎಂದು ರಾಹುಲ್ ಗಾಂಧಿ ಸದನದಲ್ಲಿ ಹೇಳಿದ್ದಾರೆ.
ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮಾಡಿದ ಭಾಷಣವು ಕಳೆದ ವರ್ಷ ಮಾಡಿದ ಭಾಷಣದಂತೆಯೇ ಇದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ. ಅದೇ ‘ಲಾಂಡ್ರಿ ಪಟ್ಟಿ’ ಎಂದು ಅವರು ಕುಟುಕಿದ್ದಾರೆ.
ಯುಪಿಎ ಅಥವಾ ಈಗಿನ ಎನ್‌ಡಿಎ ಸರ್ಕಾರಗಳಿಂದಲೂ ನಿರುದ್ಯೋಗವನ್ನು ನಿಭಾಯಿಸಲು ಮತ್ತು ಯುವಕರಿಗೆ ಉದ್ಯೋಗದ ಬಗ್ಗೆ ಸ್ಪಷ್ಟವಾದ ಉತ್ತರವನ್ನು ನೀಡಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರಪತಿ ಭಾಷಣದಲ್ಲಿ ಕಾಂಗ್ರೆಸ್ ದೃಷ್ಟಿಕೋನದ ಕುರಿತ ಉಲ್ಲೇಖದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಮೆರಿಕ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ನಮ್ಮ ದೇಶದ ಪ್ರಧಾನಿಗೆ ಆಹ್ವಾನ ನೀಡುವಂತೆ ಕೋರಲು ವಿದೇಶಾಂಗ ಸಚಿವರನ್ನು ನಾವು ಕಳುಹಿಸಿರಲಿಲ್ಲ ಎಂದು ಟೀಕಿಸಿದ್ದಾರೆ.
ಇದಕ್ಕೆ ತಿರುಗೇಟು ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಸರ್ಕಾರದ ವಿದೇಶಾಂಗ ನೀತಿಯ ಬಗ್ಗೆ ತಮ್ಮ ಆರೋಪಗಳನ್ನು ಸಾಬೀತುಪಡಿಸುವಂತೆ ರಾಹುಲ್ ಗಾಂಧಿಯವರನ್ನು ಒತ್ತಾಯಿಸಿದ್ದಾರೆ. ನೀವು ಅಂತಹ ಆಧಾರರಹಿತ ಹೇಳಿಕೆಗಳನ್ನು ನೀಡಬಾರದು ಎಂದಿದ್ದಾರೆ.
ಉತ್ಪಾದನೆಯತ್ತ ದೇಶವು ಗಮನಹರಿಸಬೇಕಿದೆ. ಆದರೆ, ಸಾಮಾಜಿಕ ಉದ್ವಿಗ್ನತೆ ಹೆಚ್ಚಾಗುತ್ತಿದೆ ಎಂದು ರಾಹುಲ್ ಹೇಳಿದ್ದಾರೆ.
ಎಲೆಕ್ಟ್ರಿಕ್ ವಾಹನಗಳು, ಬ್ಯಾಟರಿಗಳು, ದ್ಯುತಿವಿಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಎಐ ತಂತ್ರಜ್ಞಾನಗಳು ಚಲನಶೀಲತೆಯಲ್ಲಿ ಬದಲಾವಣೆಯನ್ನು ಉಂಟುಮಾಡುತ್ತವೆ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.