ಮಹಿಳೆಯರು ಆರೋಗ್ಯಕ್ಕೆ ಗಮನ ನೀಡಿರಿ: ಪ್ರೊ.ಮುನಿರಾಜು
ಬಳ್ಳಾರಿ 28: ಪ್ರಸ್ತುತ ದಿನಗಳಲ್ಲಿ ಮಕ್ಕಳು ಪೌಷ್ಠಿಕ ಎದೆ ಹಾಲಿನ ಕೊರತೆಯಿಂದಾಗಿ ಹಲವಾರು ರೋಗಗಳಿಗೆ ಒಳಗಾಗುತ್ತಿದ್ದಾರೆ. ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸುವ ಜೊತೆಗೆ ಮಹಿಳೆಯರು ತಮ್ಮ ಆರೋಗ್ಯದ ಕಡೆ ಗಮನಹರಿಸಬೇಕೆಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ ಮುನಿರಾಜು ಹೇಳಿದರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಅಂಬೇಡ್ಕರ್ ಸಭಾಂಗಣದಲ್ಲಿ ಬಳ್ಳಾರಿಯ ಐಎಂಎ, ಡಬ್ಲ್ಯೂಡಿಡಬ್ಲ್ಯೂ ಮತ್ತು ಗೈನೋಕಾಲಜಿ ಸೊಸೈಟಿ ಬಳ್ಳಾರಿ, ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಷನ್ ಹಾಗೂ ವಿಶ್ವವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ವಿಭಾಗ ಜಂಟಿಯಾಗಿ ಮಂಗಳವಾರ ಆಯೋಜಿಸಿದ್ದ “ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಹೆಚ್‌ಪಿವಿ ಲಸಿಕೆ ಜಾಗೃತಿ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳ ಕುರಿತು ಹಲವಾರು ಮೂಢ ನಂಬಿಕೆಗಳು ನಮ್ಮಲ್ಲಿವೆ. ಹೆಣ್ಣು ಮಕ್ಕಳು ಜನಿಸುತ್ತಲೇ ಭಾರ ಎನ್ನುವ ಕಲ್ಪನೆ ಇಂದು ದೂರವಾಗಿದೆ. ಸ್ತ್ರೀ ಸಂಬಂಧಿತ ಮಾರಕ ರೋಗಗಳ ಕುರಿತು ಅವರಿಗೆ ಮಾಹಿತಿ ನೀಡುವುದು ಪ್ರಸ್ತುತ ದಿನಗಳಲ್ಲಿ ಅವಶ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಳ್ಳಾರಿ ಫ್ಯಾಮಿಲಿ ಪ್ಲ್ಯಾನಿಂಗ್ ಇಂಡಿಯಾ ಅಧ್ಯಕ್ಷರಾದ ಟಿ.ಜಿ.ವಿಠ್ಠಲ್ ಮಾತನಾಡಿ, ರೋಗಗಳ ಕುರಿತು ಸಂಶೋಧನೆಗಳು ಹೆಚ್ಚಾದಷ್ಟು ರೋಗಗಳ ಸಂಖ್ಯೆಯು ಹೆಚ್ಚುತ್ತಿವೆ. ಹೊಸ ರೋಗಗಳಿಗೆ ಅನುಗುಣವಾಗಿ ಚಿಕಿತ್ಸಾ ಪದ್ದತಿಗಳು ಬದಲಾಗುತ್ತಿವೆ. ಕ್ಯಾನ್ಸರ್ ತಡೆಗಟ್ಟುವ ಕ್ರಮಗಳನ್ನು ನೀವು ತಿಳಿದು, ಇನ್ನೊಬ್ಬರಿಗೂ ತಿಳಿಸಿ ಎಂದು ಹೇಳಿದರು.
ಬಳ್ಳಾರಿ ಐಎಂಎ ಕಾರ್ಯದರ್ಶಿಯಾದ ಡಾ. ಸಂಗೀತಾ ಕಟ್ಟಿಮನಿ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್‌ನ್ನು ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಓಬಿಜಿ, ಗೈನೋಕಾಲಜಿ ಸೊಸೈಟಿ ಅಧ್ಯಕ್ರರಾದ ಡಾ. ಶಿವಕುಮಾರ್ ಭಾಗಿಯಾಗಿ ವಿಶೇಷ ಉಪನ್ಯಾಸ ನೀಡಿದರು. ವಿವಿಯ ಕುಲಸಚಿವರಾದ ಎಸ್ ಎನ್ ರುದ್ರೇಶ, ಎಫ್‌ಪಿಎ ಬ್ರ್ಯಾಂಚ್ ಮ್ಯಾನೇಜರ್ ಎಸ್ ವಿಜಯಲಕ್ಷ್ಮಿ, ಸಮಾಜ ವಿಜ್ಞಾನ ನಿಕಾಯದ ಡೀನ್ ಡಾ. ಗೌರಿ ಮಾಣಿಕ್ ಮಾನಸ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ನೆರೆದಿದ್ದ ಮಹಿಳೆಯರಿಗೆ ಸ್ಕ್ರೀನಿಂಗ್ ಮತ್ತು ಹೆಚ್‌ಪಿವಿ ಲಸಿಕೆ ಅಭಿಯಾನ ನಡೆಸಲಾಯಿತು.
ಕಾರ್ಯಕ್ರಮವನ್ನು ಅನಿಲ್ ನಿರೂಪಿಸಿದರು. ರುಚಿತಾ ಸ್ವಾಗತಿಸಿದರು. ವಿಶ್ವವಿದ್ಯಾಲಯದ ಎಲ್ಲ ಮಹಿಳಾ ಸಿಬ್ಬಂದಿ ಹಾಗೂ 100ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಸಂಶೋಧನಾ ವಿದ್ಯಾರ್ಥಿನಿಯರು. ವಿದ್ಯಾರ್ಥಿಗಳು ಉಪಸ್ಥಿತರಿದ್ದರು.