125 ವರ್ಷದ ಕಾಂಗ್ರೆಸ್ಗೆ ಈ ಸ್ಥಿತಿ ಏಕೆ ಬಂತು?: ಪ್ರಧಾನಿ

ಭೋಪಾಲ್ 25: 125 ವರ್ಷ ಹಳೆಯದಾದ ಕಾಂಗ್ರೆಸ್ ಪಕ್ಷ ಈಗ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವುದು ಏಕೆ? ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಪ್ರಶ್ನಿಸಿದ್ದಾರೆ. 

ಇಂದು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನ್ಮದಿನದ ಪ್ರಯುಕ್ತ ಮಧ್ಯಪ್ರದೇಶದ ಭೋಪಾಲ್ ನಲ್ಲಿ ಆಯೋಜಿಸಿದ್ದ ಕಾರ್ಯಕರ್ತ ಮಹಾಕುಂಭ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 125 ವರ್ಷದ ಪಕ್ಷ ಈಗ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿದೆ. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಅವರು ಆತ್ಮಾವಲೋಕನ ಮಾಡಿಕೊಂಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು. 

ಪ್ರತಿಪಕ್ಷಗಳೊಂದಿಗೆ ಮೈತ್ರಿ ಸಾಧಿಸಲು ಕಾಂಗ್ರೆಸ್ ವಿಫಲವಾಗಿದೆ. ಆದರೂ ಮೈತ್ರಿಗಾಗಿ ಸಣ್ಣಪುಟ್ಟ ಪಕ್ಷಗಳ ಬಳಿ ಅಂಗಲಾಚುತ್ತಿದೆ. ಅಲ್ಲದೆ ವಿದೇಶಗಳಲ್ಲಿ ಮೈತ್ರಿ ಮಾಡಿಕೊಳ್ಳಲು ಯತ್ನಿಸುತ್ತಿದೆ. ಭಾರತದ ಪ್ರಧಾನಿ ಯಾರು ಎಂಬುದನ್ನು ಪ್ರಪಂಚ ನಿರ್ಧರಿಸುತ್ತದೆಯೇ? ಎಂದು ಮೋದಿ ಪ್ರಶ್ನಿಸಿದ್ದಾರೆ. 

ಜಗತ್ತಿನ ಎಲ್ಲಾ ಇಸ್ಲಾಮಿಕ್ ರಾಷ್ಟ್ರಗಳು ತ್ರಿವಳಿ ತಲಾಖ್ ಅನ್ನು ನಿಷೇಧಿಸಿವೆ. ಆದರೆ ನಮ್ಮಲ್ಲಿ ಮಹಿಳೆ ನೇತೃತ್ವದ ರಾಜಕೀಯ ಪಕ್ಷಕ್ಕೆ ಮಹಿಳೆಯರ ಬಗ್ಗೆಯೇ ಕಾಳಜಿ ಇಲ್ಲ. ಕೇವಲ ಮತಕ್ಕಾಗಿ ತ್ರಿವಳಿ ತಲಾಖ್ ಗೆ ವಿರೋಧಿಸುತ್ತಿದ್ದಾರೆ ಎಂದರು. 

ನಮ್ಮ ಸಮಾಜದಲ್ಲಿರುವ ಮತ ಬ್ಯಾಂಕ್ ರಾಜಕಾರಣವನ್ನು ಕಿತ್ತೊಗೆಯುವುದು ನಮ್ಮ ಪಕ್ಷದ ಪ್ರಮುಖ ಉದ್ದೇಶ. ಬಿಜೆಪಿ ಅಖಂಡ ಮಾನವತಾವಾದ, ಸಬಕ್ ಸಾಥ್ ಸಬಕ್ ವಿಕಾಸದಲ್ಲಿ ನಂಬಿಕೆ ಇರಿಸಿದೆ. ಆದರೆ ಪ್ರಪಂಚದಲ್ಲಿ ಯಾವ ಪಕ್ಷವೂ ಇದುವರೆಗೂ ಈ ಬಗ್ಗೆ ಮಾತನಾಡಿರುವುದನ್ನು ನಾನು ಕಂಡಿಲ್ಲ ಎಂದು ಪ್ರಧಾನಿ ಹೇಳಿದರು. 

ಇದೇ ವೇಳೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ, ರಾಷ್ಟ್ರಪಿತ ಮಹಾತ್ಮಗಾಂಧಿ. ಲೋಹಿಯಾ ಅವರನ್ನು ಸ್ಮರಿಸಿದ ಪ್ರಧಾನಿ ಮೋದಿ, ನಮ್ಮ ಸ್ವತಂತ್ರ ರಾಷ್ಟ್ರದ ಈ ಮೂವರು ಮಹಾಪುರುಷರನ್ನು ನಾವು ಎಂದಿಗೂ ಮರೆಯುವಂತಿಲ್ಲ ಎಂದರು.]