ಹೆಣ್ಣುಮಕ್ಕಳಿಗೆ ಅವಕಾಶ ದೊರೆತಾಗ ಅರ್ಥಪೂರ್ಣ ಜೀವನ ಹಾಗೂ ಸಮಾಜವನ್ನು ಮುಂದಕ್ಕೆ ಕೊಂಡೊಯ್ಯಿರಿ : ಪ್ರೊ.ಚಂದ್ರಶೇಖರ್

ಹೆಣ್ಣುಮಕ್ಕಳಿಗೆ ಅವಕಾಶ ದೊರೆತಾಗ ಅರ್ಥಪೂರ್ಣ ಜೀವನ ಹಾಗೂ ಸಮಾಜವನ್ನು ಮುಂದಕ್ಕೆ ಕೊಂಡೊಯ್ಯಿರಿ : ಪ್ರೊ.ಚಂದ್ರಶೇಖರ್ When girls are given the opportunity, they lead meaningful lives and society forward: Prof. Chandra

ಲೋಕದರ್ಶನ ವರದಿ 

ವಿಜಯಪುರ 05 : ಜಾತಿ ವ್ಯವಸ್ಥೆ ಇರುವ ಪರಿಸ್ಥಿತಿಗಳ ನಡುವೆಯೂ ಕೆಲವು ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರುತ್ತಿರುವುದು ಸಂತೋಷದ ಸಂಗತಿಯಾಗಿದ್ದು, ಹೆಣ್ಣುಮಕ್ಕಳಿಗೆ ಅವಕಾಶ ದೊರೆತಾಗ ಅದನ್ನು ಅರ್ಥಪೂರ್ಣವಾಗಿ ಬಳಸಿಕೊಂಡು ತಮ್ಮ ಜೀವನವನ್ನು ಹಾಗೂ ಸಮಾಜವನ್ನು ಮುಂದಕ್ಕೆ ಕೊಂಡೊಯ್ಯಬೇಕು ಎಂದು ಪ್ರೊ.ಚಂದ್ರಶೇಖರ್ ಆರಿ​‍್ವ ಹೇಳಿದರು. ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಹಾಗೂ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಮೈಸೂರು ಇವರ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ‘ಉತ್ತರ ಕರ್ನಾಟಕ ಭಾಗದ ಬುಡಕಟ್ಟು ಮಹಿಳೆಯರ ಸಬಲೀಕರಣ: ಸಮಸ್ಯೆಗಳು ಹಾಗೂ ಸವಾಲುಗಳು’ ಎಂಬ ವಿಷಯ ಕುರಿತ ಎರಡು ದಿನಗಳ ರಾಷಿೊಥಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಜಾತಿ ವ್ಯವಸ್ಥೆಯ ರಚನೆ ಕುರಿತು ಮಾತನಾಡಿದ ಅವರು, ಒಂದು ಜಾತಿಯ ಮೇಲೆ ಇನ್ನೊಂದು ಜಾತಿಯ ಆಧಿಪತ್ಯ ಮುಂದುವರಿಯುತ್ತಿರುವುದು ಸಮಾಜದಲ್ಲಿ ಕಂಡುಬರುವ ವಾಸ್ತವಿಕತೆ ಎಂದರು.

ಇದೇ ರೀತಿಯಾಗಿ ಕುಟುಂಬ ವ್ಯವಸ್ಥೆಯಲ್ಲಿಯೂ ಮಹಿಳೆಯರ ಮೇಲೆ ಪುರುಷರ ನಾಯಕತ್ವ ಹೆಚ್ಚಾಗಿ ಕಾಣಸಿಗುತ್ತದೆ ಹಾಗೂ ಇದರಿಂದ ಮಹಿಳೆಯರಿಗೆ ಪೂರ್ಣ ಸ್ವಾತಂತ್ರ್ಯ ಸಿಗದ ಪರಿಸ್ಥಿತಿ ಉಂಟಾಗುತ್ತದೆ. ಬುಡಕಟ್ಟು ಸಮುದಾಯದವರು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ತಮ್ಮ ಹಕ್ಕುಗಳಿಗಾಗಿ ಮಹತ್ವದ ಪಾತ್ರ ವಹಿಸಿರುವುದನ್ನು ನೆನಪಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರೊ.ಸಕ್ಪಾಲ್ ಹೂವಣ್ಣ ಮಾತನಾಡಿ, ಇಂತಹ ಕಾರ್ಯಕ್ರಮಗಳು ನಮ್ಮ ವಿಶ್ವವಿದ್ಯಾಲಯದಲ್ಲಿ ಆಯೋಜನೆಯಾಗುತ್ತಿರುವುದು ವಿದ್ಯಾರ್ಥಿಗಳಿಗೆ ಹಾಗೂ ನಮ್ಮ ವಲಯದ ಜನರಿಗೆ ಬುಡಕಟ್ಟು ಸಮುದಾಯಗಳ ಕುರಿತು ತಿಳಿದುಕೊಳ್ಳಲು ಸಹಾಯಕವಾಗುತ್ತಿದೆ. ಇದರ ಮೂಲಕ ಸಾಕಷ್ಟು ಜ್ಞಾನ ದೊರಕುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಡಾ.ಕೃಷ್ಣಮೂರ್ತಿ ಕೆ.ವಿ ಮಾತನಾಡಿ, ಬುಡಕಟ್ಟು ಸಮುದಾಯಗಳ ಕುರಿತು ಹೆಚ್ಚಿನ ಅರಿವು ಮೂಡಿಸಲು ವಿಶ್ವವಿದ್ಯಾಲಯಗಳಲ್ಲೇ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಈ ಮೂಲಕ ವಿದ್ಯಾರ್ಥಿಗಳು ಹಾಗೂ ಸಮಾಜದಲ್ಲಿ ಬುಡಕಟ್ಟು ಸಮುದಾಯಗಳ ಜೀವನ ಶೈಲಿ ಮತ್ತು ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳುವ ಅವಕಾಶ ದೊರೆಯುತ್ತದೆ. ಬುಡಕಟ್ಟು ಸಮುದಾಯದಲ್ಲಿ ಮದುವೆ ನಡೆಯುವಾಗ ಹೆಣ್ಣಿನ ಅನುಮತಿಯನ್ನು ಪಡೆದುಕೊಂಡೇ ಮದುವೆ ಮಾಡಲಾಗುತ್ತದೆ. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಒಪ್ಪಿತ ಮದುವೆಗಳೇ ನಡೆಯುತ್ತವೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್‌. ಲಕ್ಕಣ್ಣನವರ ಮಾತನಾಡಿ, ಬುಡಕಟ್ಟು ಸಂಶೋಧನಾ ಸಂಸ್ಥೆ ಎಂಬುದು ಏನು ಮತ್ತು ಅದರ ಕಾರ್ಯ ಚಟುವಟಿಕೆಗಳ ಬಗ್ಗೆ ಇಂತಹ ವಿಚಾರಸಂಕಿರಣಗಳ ಮೂಲಕ ಅನೇಕರಿಗೆ ತಿಳಿದುಕೊಳ್ಳಲು ಸಾಧ್ಯವಾಗಿದೆ. ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು. ಬುಡಕಟ್ಟು ಮಹಿಳೆಯರ ಸಮಸ್ಯೆಗಳು ಕೇವಲ ಅವರಿಗಷ್ಟೇ ಸೀಮಿತವಾಗಿಲ್ಲ, ಅವು ಎಲ್ಲ ಮಹಿಳೆಯರ ಸಮಸ್ಯೆಗಳಾಗಿವೆ ಎಂದರು. ಒಟ್ಟಾರೆ ಎರಡು ದಿನಗಳ ಕಾಲ ನಡೆದ ಈ ವಿಚಾರಸಂಕಿರಣ ಯಶಸ್ವಿಯಾಗಿ ನೆರವೇರಿದೆ ಎಂದರು.ಕಾರ್ಯಕ್ರಮದಲ್ಲಿ ಡಾ.ವೆಂಕಟೇಶಟಿ. ಎಸ್‌. ಸ್ವಾಗತಿಸಿ ವಂದಿಸಿದರು. ಡಾ.ಜಕ್ಕವ್ವ ವಠಾರ ನಿರೂಪಿಸಿದರು.