ನದಿ ಜೋಡಣೆ ಪ್ರಕ್ರಿಯೆಗೆ ಶೀಘ್ರ ಚಾಲನೆ: ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭರವಸೆ

gajendra

ಬೆಂಗಳೂರು,  ಡಿ 16 - ಕೃಷ್ಣಾ, ಕಾವೇರಿ, ಗೋದಾವರಿ ಮತ್ತು ಪೆನ್ನಾರ್ ನದಿಗಳ ಜಲಾನಯನ ಪ್ರದೇಶಗಳಲ್ಲಿನ ನದಿಗಳ ಜೋಡಣೆಯಿಂದ ನೀರಿನ ಲಭ್ಯತೆ ವೃದ್ಧಿಸುವ ಸಾಧ್ಯತೆಳು ಹೆಚ್ಚಿದ್ದು, ಈ ಮಹತ್ವಾಕಾಂಕ್ಷಿ ಯೋಜನೆಗೆ ಸಮ್ಮತಿ ನೀಡಬೇಕೆಂಬ ರಾಜ್ಯದ ಪ್ರಮುಖ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. 

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೋಮವಾರ ನಗರಕ್ಕೆ ಆಗಮಿಸಿದ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ರಾಜ್ಯದ ಈ ಮನವಿಯನ್ನು ಈಡೇರಿಸಲು ಸಹಮತಿ ವ್ಯಕ್ತಪಡಿಸಿದ ಸಚಿವರು, ಇದು ಪ್ರಧಾನಿ ನರೇಂದ್ರ ಮೋದಿಯವರಿಗೂ ಆದ್ಯತೆಯ ವಿಷಯವಾಗಿದ್ದು, ನದಿ ಜೋಡಣೆಯ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಕ್ರಮ ಕೈಗೊಳ್ಳುವುದಾಗಿ ವಾಗ್ದಾನ ನೀಡಿದರು. 

ಪಿಎಂಕೆಎಸ್ ವೈ ಯೋಜನೆಯಡಿ  ರಾಜ್ಯ ಕೈಗೆತ್ತಿಕೊಂಡಿರುವ ತುಂಗಾ ಮೇಲ್ದಂಡೆ, ಭೀಮಾ ಏತ ನೀರಾವತಿ, ಕಾರಂಜಾ, ಶ್ರೀ  ರಾಮೇಶ್ವರ ಏತ ನೀರಾವರಿ ಮತ್ತು ನಾರಾಯಣಪುರ ಎಡದಂಡೆ ಕಾಲುವೆ ಯೋಜನೆ ಸೇರಿದಂತೆ ವಿವಿಧ  ಯೋಜನೆಗಳಿಗೆ 439 ಕೋಟಿ ರೂ. ಹಣವನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಯಡಿಯೂರಪ್ಪ ಮಹದಾಯಿ ಮತ್ತು ಕೃಷ್ಣ ನದಿ ವಿವಾದ ನ್ಯಾಯಾಧಿಕರಣದ ನೀರು ಹಂಚಿಕೆಯ ಕುರಿತು ಗಜೆಟ್ ಅಧಿಸೂಚನೆ ಹೊರಡಿಸುವಂತೆ ಶೇಖಾವತ್ ಅವರಿಗೆ ಮನವಿ ಮಾಡಿದ್ದು, ಈ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು ಎನ್ನಲಾಗಿದೆ. 

ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ಮೇಕೆದಾಟು ಯೋಜನೆಗೆ  ಅನುಮೋದನೆ ನೀಡುವಂತೆ ಮನವಿ ಮಾಡಿದರು. ಈ ಯೋಜನೆಯ ಅನುಮೋದನೆಗೆ ಯಾವುದೇ ಕಾನೂನು ತೊಡಕು  ಇರುವುದಿಲ್ಲ ಎಂದು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು. ಇದಕ್ಕೆ ಕೇಂದ್ರ  ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಮುಖ್ಯಮಂತ್ರಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.