ನವದೆಹಲಿ,12 ಗ್ರಾಮಗಳು ಮತ್ತು
ಜಿಲ್ಲೆಗಳ ಪ್ರಯೋಜನಕ್ಕಾಗಿ ರೂಪಿಸಲಾಗುವ ಹೊಸ ಜಲ ನೀತಿಗಳು ಮತ್ತು ನಿರ್ವಹಣೆ ರಾಜ್ಯಗಳ ವಿಷಯವಾಗಿದ್ದು,
ನೀತಿಗಳ ಪ್ರಗತಿಗೆ ಜಲಶಕ್ತಿ ಸಚಿವಾಲಯ ನೆರವು ಮತ್ತು ಸಲಹೆಯನ್ನು ನೀಡಬಹುದಾಗಿದೆ ಎಂದು ಕೇಂದ್ರ ಸರ್ಕಾರ
ಹೇಳಿದೆ.ಲೋಕಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಈ ವಿಷಯ ತಿಳಿಸಿದ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್
ಶೆಖಾವತ್ ಅವರು, ರಾಜ್ಯಗಳು ತಮ್ಮ ಪ್ರದೇಶಗಳಲ್ಲಿನ ಜಲ ನಿರ್ವಹಣೆಗೆ ಕಾರ್ಯತಂತ್ರವನ್ನು ರೂಪಿಸಲು
ತಾವಾಗಿಯೇ ಕ್ರಮ ತೆಗೆದುಕೊಳ್ಳಬೇಕು. ಈ ಪ್ರಕ್ರಿಯೆಲ್ಲಿ ರಾಜ್ಯಗಳು ಸಂಬಂಧಿಸಿದ ಸಂಸದರು, ಸರ್ಕಾರೇತರ
ಸಂಸ್ಥೆಗಳ ಸಹಾಯ ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ.ಅನೇಕ ರಾಜ್ಯಗಳು ತಮ್ಮ ಪ್ರದೇಶಗಳಲ್ಲಿ ಜಲ ನಿರ್ವಹಣೆಗೆ
ಕ್ರಮಗಳನ್ನು ತೆಗೆದುಕೊಂಡಿವೆ. ಉದಾಹರಣೆಗೆ, ಗುಜರಾತ್ ರಾಜ್ಯದಲ್ಲಿ ಸ್ಥಳೀಯ ಕೆರೆ-ಕುಂಟೆಗಳು, ಸರೋವರಗಳು
ಮತ್ತು ನದಿಗಳಲ್ಲಿನ ನೀರು ಸಂಗ್ರಹ ಸಾಮಥ್ರ್ಯ ಹೆಚ್ಚಿಸಲು ‘ಸುಜಲಾಂ ಸುಫಲಾಂ ಜಲ ಅಭಿಯಾನ-2019’ನ್ನು
ಅಲ್ಲಿನ ಸರ್ಕಾರ ಆರಂಭಿಸಿದೆ ಎಂದು ಶೆಖಾವತ್ ಹೇಳಿದ್ದಾರೆ.ಪೂರಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು,
ಬುಂದೇಲ್‍ಖಂಡ್ ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕಳೆದ ನವೆಂಬರ್‍ನಲ್ಲಿ 7,266 ಕೋಟಿ ರೂ.
ವಿಶೇಷ ಪ್ಯಾಕೇಜ್ ಘೋಷಿಸಿದೆ. ಈ ಪ್ರದೇಶದಲ್ಲಿ ಕುಡಿಯುವ ನೀರು ಒದಗಿಸಲು ಹೆಚ್ಚುವರಿ 200 ಕೋಟಿ ರೂ
ಬಿಡುಗಡೆ ಮಾಡಿದೆ. 2009-2010ರಿಂದ ಮಾರ್ಚ್ 2018ರವರೆಗೆ ಸುಮಾರು 6257.35 ಕೋಟಿ ರೂ. ಬಿಡುಗಡೆ
ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.