ವಿದ್ಯಾರ್ಥಿಗಳಿಗೆ ಆರೋಗ್ಯಕರ ವಾತಾವರಣ ಕಲ್ಪಿಸುವಂತೆ ನಿಲಯಪಾಲಕರಿಗೆ ಎಚ್ಚರಿಕೆ
ಬಳ್ಳಾರಿ 18:ಜಿಲ್ಲಾ ಪ್ರವಾಸದಲ್ಲಿದ್ದ ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರ್ಪ ಅವರು ಶನಿವಾರ ಮುಂಜಾನೆ ವೇಳೆ ಬಳ್ಳಾರಿ ನಗರದ ಮಯೂರ ಹೋಟೆಲ್ ಹಿಂಭಾಗದ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಸತಿ ನಿಲಯಗಳಿಗೆ ಅನೀರೀಕ್ಷಿತವಾಗಿ ಭೇಟಿ ನೀಡಿ, ಪರೀಶೀಲನೆ ನಡೆಸಿದರು.
ಸರ್ಕಾರಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ-02 ಗೆ ಭೇಟಿ ನೀಡಿದ ಉಪ ಲೋಕಾಯುಕ್ತರು ಅಡುಗೆ ಕೋಣೆ, ಆಹಾರ ದಾಸ್ತಾನು ಕೋಣೆ, ವಿದ್ಯಾರ್ಥಿಗಳ ವಸತಿ ಗೃಹ ಪರೀಶೀಲಿಸಿದರು. ಅಧಿಕಾರಿಗಳು, ವಾರ್ಡನ್, ಅಡುಗೆದಾರರು ಮತ್ತು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು.
ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸಮರ್ಕ ವ್ಯವಸ್ಥೆ ಮಾಡಬೇಕು. ಕಾಲಕಾಲಕ್ಕೆ ವಸತಿ ನಿಲಯಗಳಿಗೆ ಭೇಟಿ ನೀಡಿ ಮೇಲ್ವಿಚಾರಣೆ ನಡೆಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.
ಸರ್ಕಾರಿ ಮೆಟ್ರಿಕ್‌ಪೂರ್ವ ವಸತಿ ನಿಲಯಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳ ಜೊತೆ ಸಂವಾದ ನಡೆಸಿ, ಗುಣಮಟ್ಟದ ಹಾಲು ವಿತರಣೆ ಮಾಡುತ್ತಾರೆಯೇ, ಊಟ ಚೆನ್ನಾಗಿರುತ್ತದೆಯೇ, ಸ್ನಾನ ಹಾಗೂ ಶೌಚಾಲಯದ ಕೊಠಡಿಗಳು ಸ್ವಚ್ಛವಾಗಿವೆಯೇ, ಬಿಸಿ ನೀರು ಬರುತ್ತಿದೆಯೇ, ರಾತ್ರಿ ವೇಳೆ ಸೊಳ್ಳೆಗಳ ಕಾಟವಿದೆಯೇ ಎಂದೆಲ್ಲ ವಿಚಾರಿಸಿ ಮಾಹಿತಿ ಪಡೆದುಕೊಂಡರು.
ವಸತಿ ನಿಲಯಗಳಲ್ಲಿ ದೇಶದ ಮಹಾನುಭಾವರ ಕೈನಿಂದ ಬಿಡಿಸಿದ ಚಿತ್ರಗಳನ್ನು ವಿರೂಪಗೊಳಿಸುವಂತಿಲ್ಲ. ಅವರಿಗೆ ಅವಮಾನ ಮಾಡಿದಂತಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ನಿಲಯದ ಪಾಲಕರಿಗೆ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು, ನಮಗೆ ಮಲಗಲು ಬೆಡ್ ವ್ಯವಸ್ಥೆ ಇಲ್ಲ. ಸ್ನಾನಕ್ಕೆ ಬಿಸಿ ನೀರು ಇಲ್ಲ. ಸಾರು ನೀರಿನಂತಿರುತ್ತದೆ, ವೇಳಾಪಟ್ಟಿಯಂತೆ ಅಡುಗೆ ಮಾಡುವುದಿಲ್ಲ, ರಾತ್ರಿಯಾದರೆ ಅನಧೀಕೃತ ವ್ಯಕ್ತಿಗಳು ಬರುತ್ತಾರೆ, ಗಲಾಟೆ ಮಾಡುತ್ತಾರೆ, ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ವಾರ್ಡನ್ ವಿದ್ಯಾರ್ಥಿ ನಿಲಯಕ್ಕೆ ವಾರದಲ್ಲಿ ಒಮ್ಮೆ ಬರುತ್ತಾರೆ. ಬಟ್ಟೆ ತೊಳೆಯುವ ಸ್ಥಳದಲ್ಲಿ ಗಲೀಜು ತುಂಬುತ್ತದೆ. ಕೆಲವು ಸೌಲಭ್ಯಗಳನ್ನು ಸಮರ್ಕವಾಗಿ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಸಮಸ್ಯೆಗಳ ಪಟ್ಟಿಯನ್ನು ತೆರೆದಿಟ್ಟರು.
ಅಲ್ಲಿನ ವಸತಿ ನಿಲಯಗಳ ಕೋಣೆ, ಆಹಾರ ದಾಸ್ತಾನು ಗಮನಿಸಿ ಅಸಮಧಾನ ವ್ಯಕ್ತಪಡಿಸಿದ ಉಪ ಲೋಕಾಯುಕ್ತರು, ರಾಜ್ಯ ಸರ್ಕಾರವು ವಸತಿ ನಿಲಯದ ವಿದ್ಯಾರ್ಥಿಗಳಿಗಾಗಿಯೇ ಲಕ್ಷಾಂತರ ರೂ. ಖರ್ಚು ಮಾಡುತ್ತಿದೆ. ಮಕ್ಕಳಿಗೆ ಊಟ, ವಸತಿ, ರಕ್ಷಣೆ ಸೇರಿದಂತೆ ಮೂಲಭೂತ ಸೌಕರ್ಯಗಳು ಒದಗಿಸಲು ಏನು ಸಮಸ್ಯೆಯಾಗುತ್ತಿದೆ ಎಂದು ನಿಲಯದ ನಿಲಯಪಾಲಕರ ಅಮಾನತ್ತಿಗೆ ಸೂಚಿಸಿದರು.
ಈ ವೇಳೆ ಕರ್ನಾಟಕ ಲೋಕಾಯುಕ್ತದ ಅಪರ ನಿಬಂಧಕರಾದ ಕೆ.ಎಂ.ರಾಜಶೇಖರ್, ಸಹಾಯಕ ನಿಬಂಧಕರಾದ ಶುಭವೀರ್ ಜೈನ್.ಬಿ., ಉಪ ನಿಬಂಧಕರಾದ ಅರವಿಂದ.ಎನ್.ವಿ., ಕರ್ನಾಟಕ ಲೋಕಾಯುಕ್ತ ಬಳ್ಳಾರಿ ವಿಭಾಗದ ಪೊಲೀಸ್ ಅಧೀಕ್ಷಕ ಸಿದ್ಧರಾಜು.ಸಿ., ಡಿವೈಎಸ್ಪಿ ವಸಂತ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಸೇರಿದಂತೆ ಮುಂತಾದ ಅಧಿಕಾರಿಗಳು ಸಹ ಜೊತೆಗಿದ್ದರು.