ಲೋಕದರ್ಶನ ವರದಿ
ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಕ್ಷೇತ್ರದ ಎಲ್ಲ 1938 ಮತಗಟ್ಟೆಗಳ ಮತಯಂತ್ರಗಳು ಮತ ಏಣಿಕೆ ಕೇಂದ್ರವಾದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸೂಕ್ತ ಭದ್ರತೆಯೊಂದಿಗೆ ತರಲಾಯಿತು.
ಬುಧವಾರ ಮತ ಏಣಿಕೆ ಕೇಂದ್ರವಾದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಚುನಾವಣಾ ವೀಕ್ಷಕರಾದ ನರಸಿಂಹಗಾರಿ ಎಲ್.ಟಿ.ರೆಡ್ಡಿ ಹಾಗೂ ಆಯಾ ಪಕ್ಷದ ಬೂತ ಏಜೆಂಟರಗಲ ಸಮ್ಮುಖದಲ್ಲಿ ಮತಯಂತ್ರಗಳನ್ನು ಭದ್ರತಾ ಕೊಠಡಿಯಲ್ಲಿರಿಸಿ ಬೀಗಮುದ್ರೆ ಹಾಕಲಾಯಿತು.
ಬಾಗಲಕೋಟೆ ಲೋಕಸಭಾ ಚುನಾವಣೆಗೆ ಸ್ಥಾಪಿಸಲಾದ ಒಟ್ಟು 1938 ಮತಗಟ್ಟೆಗಳಲ್ಲಿ ಮಂಗಳವಾರ ಶಾಂತಿಯುತವಾಗಿ ಮತದಾನ ನಡೆದಿದ್ದು, ಮತದಾನದ ನಂತರ ಕರ್ತವ್ಯ ನಿರತ ಸಿಬ್ಬಂದಿಗಳು ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಾಪಿಸಲಾದ ಡಿಮಸ್ಟರಿಂಗ್ ಕೇಂದ್ರಗಳಿಗೆ ಮತಯಂತ್ರಗಳನ್ನು ತಲುಪಿಸಿದರು.
ಡಿಮಸ್ಟರಿಂಗ್ ಕೇಂದ್ರಗಳಿಂದ ಏಣಿಕೆ ಕೇಂದ್ರವಾದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸೂಕ್ತ ಭದ್ರತೆಯೊಂದಿಗೆ ಮತಯಂತ್ರಗಳನ್ನು ಕಳುಹಿಸಿಕೊಡಲಾಯಿತು. ತೋವಿವಿಗೆ ವಿವಿಧ ವಿಧಾನಸಭಾ ಕ್ಷೇತ್ರಗಳಿಂದ ಬಂದ ಮತಯಂತ್ರಗಳನ್ನು ಸ್ವೀಕರಿಸುವ ಕಾರ್ಯ ನಡೆದು ಮತಯಂತ್ರಗಳನ್ನು ಭದ್ರತಾ ಕೊಠಡಿಯಲ್ಲಿರಿಸಿ ಬೀಗಮುದ್ರೆ ಹಾಕಲಾಯಿತು. ಮೇ 23 ರಂದು ಮತ ಏಣಿಕೆ ಕಾರ್ಯ ನಡೆಯಲಿದ್ದು, ಅಲ್ಲಿಯವರೆಗೆ ಬಿಗಿ ಬಂದೋಬಸ್ತ ವ್ಯವಸ್ಥೆ ಕಲ್ಪಿಸಲಾಗಿದೆ.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್.ರಾಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ ಸೇರಿದಂತೆ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.