ವಿದ್ಯಾರ್ಥಿಗಳು ಕೈಜೋಡಿಸಿದಾಗ ಗ್ರಾಮಗಳ ಉದ್ಧಾರ ಸಾಧ್ಯ: ಮೂಗನೂರಮಠ

ಧಾರವಾಡ 03: ಗ್ರಾಮಗಳ ಅಭಿವೃದ್ಧಿಗಾಗಿ ವಿದ್ಯಾರ್ಥಿಗಳು ಕೈಜೋಡಿಸಿದಾಗ ಗ್ರಾಮಗಳ ಉದ್ಧಾರ ಆಗಲು ಸಾಧ್ಯ ಎಂದು ಧಾರವಾಡ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಬಿ.ಎಸ್.ಮೂಗನೂರಮಠ ಹೇಳಿದರು. 

ಅವರು ಕರ್ನಾಟಕ ಕಲಾ ಮಹಾವಿದ್ಯಾಲಯದ ಸಮಾಜ ಕಾರ್ಯ ಅಧ್ಯಯನ ವಿಭಾಗ (ಬಿ.ಎಸ್.ಡಬ್ಲು) ಹಾಗೂ ಜಿಲ್ಲಾ ಪಂಚಾಯತ, ತಾಲ್ಲೂಕ ಪಂಚಾಯತ ಮತ್ತು ಗ್ರಾಮ ಪಂಚಾಯತ ಹೆಬ್ಬಳ್ಳಿ ಸಂಯುಕ್ತ ಆಶ್ರಯದಲ್ಲಿ "ಗ್ರಾಮೀಣ ಅಭಿವೃದ್ಧಿಯತ್ತ ಸಮಾಜ ಕಾರ್ಯಕರ್ತರು" ಎಂಬ ವಿಷಯದ ಕುರಿತ ಹೆಬ್ಬಳ್ಳಿಯಲ್ಲಿ ಆಯೋಜಿಸಿದ ಐದು ದಿನಗಳ ಅಭ್ಯುದಯ ಸಮಾಜ ಕಾರ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳನ್ನು ಇಂದಿನ ಶಿಕ್ಷಣ ಸಂಸ್ಥೆಗಳು ಗ್ರಾಮೀಣವಲಯದಲ್ಲಿ ಆಯೋಜಿಸುವುದರಿಂದ ಗ್ರಾಮಗಳ ಸ್ಥಿತಿಗತಿ ಸುಧಾರಿಸಲು ಸಾಧ್ಯ ಎಂದ ಅವರು ಇಂದು ಗ್ರಾಮೀಣ ಜನರಿಗೆ ಸಾಮಾಜಿಕ ತಿಳುವಳಿಕೆ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳಿಂದ ಜನರಲ್ಲಿ ಬದಲಾವಣೆ ತರಬೇಕಾಗಿದೆ ಎಂದರು. ಇಂದು ಗ್ರಾಮೀಣ ಪ್ರದೇಶದಿಂದ ಜನಸಮುದಾಯವು ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದು ಅದನ್ನು ತಪ್ಪಿಸಬೇಕಾಗಿದ ಅಗತ್ಯ ಇದೆ ಎಂದರು. 

ಕವಿವಿ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ ಹನುಮಗೌಡ. ಸಿ ಮಾತನಾಡಿ ಗ್ರಾಮೀಣ ಜನರೊಂದಿಗೆ ವಿದ್ಯಾಥರ್ಿಗಳು ಬೆರೆಯಬೇಕು ಮತ್ತು ಇಂದಿನ ಅನೇಕ ಸಾಮಾಜಿಕ ಮೂಢ ನಂಬಿಕೆಗಳನ್ನು ಹೊಗಲಾಡಿಸಲು ಅವರಿಗೆ ತಿಳುವಳಿಕೆ  ನೀಡುವದು ಸೂಕ್ತ ಎಂದ ಅವರು ಗ್ರಾಮೀಣ ಜನರ ಭಾವನೆಗಳಿಗೆ ಸರಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಸ್ಪಂದಿಸಬೇಕಾಗಿದೆ ಎಂದರು.

ಹೆಬ್ಬಳ್ಳಿ ಗ್ರಾಮ ಪಂಚಾಯತ ಉಪಾಧ್ಯಕ್ಷ ರಮೇಶ ಧಾರವಾಡ ಮಾತನಾಡಿ ಹೆಬ್ಬಳ್ಳಿ ಗ್ರಾಮವು ಎಲ್ಲ ವಲಯಗಳಲ್ಲಿ ಮುಂದಿದ್ದು, ಇಂದು ಶೇಕಡಾ 90% ರಷ್ಟು ಶೌಚ್ಛಾಲಯಗಳನ್ನು ಇಲ್ಲಿನ ಗ್ರಾಮಸ್ಥರು ಹೊಂದಿದ್ದು, ಹೆಬ್ಬಳ್ಳಿಯಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ಬಹಳ ಆದ್ಯತೆ ನೀಡಲಾಗಿದೆ ಎಂದರು.

ಜಿಲ್ಲಾ ಪಂಚಾಯತ ಸದಸ್ಯರಾದ ಚನ್ನಬಸಪ್ಪ ಮಟ್ಟಿ ಮಾತನಾಡಿ ಪ್ಲಾಸ್ಟಿಕ್ ನಿಯಂತ್ರಣಕ್ಕೆ  ಸರಕಾರದ ಕೇಲವು ನೀತಿಗಳಲ್ಲಿ ಬದಲಾವಣೆ ತರಬೇಕಾಗಿದೆ ಎಂದ ಅವರು ಇಂದು ನಮ್ಮ ಗ್ರಾಮವು ಎಲ್ಲ ರೀತಿಯಿಂದಲೂ ಮುಂದುವರೆದಿದ್ದು, ಇಂತಹ  ಅಭಿವೃದ್ಧಿ ಶಿಬಿರಗಳನ್ನು  ಆಯೋಜಿಸಲು ಎಲ್ಲ ಸಹಕಾರ ನೀಡಲಾಗುವದು ಎಂದರು. 

ಕೆಸಿಡಿಯ ಬಿ.ಎಸ್.ಡಬ್ಲು ವಿಭಾಗದ ಉಪನ್ಯಾಸಕ ಶಬಿರದ ಸಂಯೋಜಕ ಉಪನ್ಯಾಸಕ ರಮೇಶ ಕಟಂಬ್ಲಿ ಮಾತನಾಡಿ ಐದು ದಿನಗಳ ಈ ಶಬಿರದಲ್ಲಿ ವನಮಹೋತ್ಸವ, ಉಚಿತ ನೇತ್ರ ತಪಾಸಣೆ, ರೈತರೊಂದಿಗೆ ಸಂವಾದ, ಶ್ರಮದಾನ ಪರಿಸರ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳು ಗ್ರಾಮದಲ್ಲಿ ನಡೆಯಲಿವೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಡಾ. ಬಿ.ಎಫ್.ಚಾಕಲಬ್ಬಿ ಮಾತನಾಡಿ ಗ್ರಾಮೀಣ ಸಮುದಾಯದ ಜೊತೆಗೆ ಶಿಕ್ಷಣ ಸಂಸ್ಥೆಗಳು ಸಂಬಂಧ ಹೊಂದಿದಾಗ ಮಾತ್ರ ಗ್ರಾಮೀಣ ಅಭಿವೃದ್ಧಿಗೆ ಹೆಚ್ಚು ಮಹತ್ವ ಬರುತ್ತದೆ.  ಇಂದು ಪರಿಸರ ಮತ್ತು ನೀರು ಸಂರಕ್ಷಣೆಗೆ ಗ್ರಾಮೀಣ ಮತ್ತು ಶಹರ ಪ್ರದೇಶಗಳ ಜನರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ ಎಂದರು.

ಹೆಬ್ಬಳ್ಳಿ ಗ್ರಾಮಪಂಚಾಯತ ಅಧ್ಯಕ್ಷೆ ರತ್ನವ್ವ ಸುಣಗಾರ ಮತ್ತು ಧಾರವಾಡದ ನಾಗರಿಕ ಮಿತ್ರ ಸಂಸ್ಥೆಯ ಅಧ್ಯಕ್ಷರಾದ ಎಸ್.ಎಮ್ ಮುಲ್ಲಾ ಮಾತನಾಡಿದರು. ಉಪನ್ಯಾಸಕರಾದ ಬಸವರಾಜ್.ಎನ್. ಅಶ್ವತಕುಮಾರ ತಳವಾರ, ಲಕ್ಷ್ಮಿ ದಡ್ಡಿ,  ಗ್ರಾಮ ಪಂಚಾಯತನ ಪಿಡಿಓ, ಬಿ.ಡಿ.ಚವಡರೆಡ್ಡಿ, ಶಿವಶಂಕರ ಬಿ.ಡಿ ಕಾರ್ಯಕ್ರಮದಲ್ಲಿ  ಗ್ರಾಮ ಪಂಚಾಯತ ಸದಸ್ಯರಾದ ವಿದ್ಯಾಥರ್ಿಗಳು ಗ್ರಾಮಸ್ಥರು ಇದ್ದರು.