ವಿಜೃಂಭಣೆಯ ಯಡೂರ ವೀರಭದ್ರೇಶ್ವರ ರಥೋತ್ಸವ: ಸಾವಿರಾರು ಭಕ್ತರು ಸಾಕ್ಷಿ
ಮಾಂಜರಿ 31: ಕರ್ನಾಟಕ ಮಹಾರಾಷ್ಟ್ರ ರಾಜ್ಯದ ಜೊತೆಗೆ ಇನ್ನಿತರ ರಾಜ್ಯದ ಹಲವಾರು ಭಕ್ತಾದಿಗಳ ಆರಾಧ್ಯ ದೈವ ವಾದ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ವೀರಭದ್ರ ದೇವರ ವಿಶಾಳಿ ಯಾತ್ರಾ ಮಹೋತ್ಸವ ಮತ್ತು ಮಹಾರಥೋತ್ಸವವು ಗುರುವಾರ ಸಾಯಂಕಾಲ ಸಾವಿರಾರು ಭಕ್ತರ ವಿರುಪಾಕ್ಷ ಲಿಂಗ ಮಹಾರಾಜ್ ಕಿ ಜೈ ಪಂಚಾಚಾರ್ಯ ಮಹಾರಾಜ ಕಿ ಜೈ ಹರ ಹರ ಮಹಾದೇವ ಹರ ಹರ ಮಹಾದೇವ ಜಯ ಘೋಷದೊಂದಿಗೆ ವಿಜೃಂಭಣೆಯಿಂದ ಜರುಗಿತು.
ರಥೋತ್ಸವಕ್ಕೆ ತಮಟೆ, ನಗಾರಿ ಸೇರಿದಂತೆ ವಿವಿಧ ಜಾನದಪ ಕಲಾತಂಡಗಳು ಮೆರುಗು ಹೆಚ್ಚಿಸಿದವು.
ಗದ್ದುಗೆ ಪೂಜೆ ರಥೋತ್ಸವ: ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ 4ಕ್ಕೆ ಕರ್ತೃ ಗದ್ದುಗೆಯನ್ನು ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆ 6ಕ್ಕೆ ಗುರು ಪರಂಪರೆಯ ಸಂಸ್ಮರಣೋತ್ಸವ ಹಾಗೂ ಮಂತ್ರ ವೀರಭದ್ರ ದೇವರ ಲಿಂಗ ಗದ್ದುಗೆಗೆ ರುದ್ರಾಭಿಷೇಕ ನೆರವೇರಿಸಲಾಯಿತು ಸಾಯಂಕಾಲ ಸ್ನೇಹ-ಸೌಹಾರ್ದ-ಶಾಂತಿ- ಪ್ರಾರ್ಥನಾ ನೆರವೇರಿತು. ಬೆಳಗ್ಗೆ 9ಕ್ಕೆ ಉತ್ಸವ ಮೂರ್ತಿಗೆ ರಾಜೋಪಚಾರ ನೆರವೇರಿಸಿ, ಸಾಯಂಕಾಲ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಅರ್ಚಕರು ಪೂಜಾ ವಿಧಿವಿಧಾನ ಪೂರೈಸಿದರು.
ಶ್ರೀಶೈಲ ಪೀಠದ ಜಗದ್ಗುರು ಡಾ. ಚೆನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಅಬ್ಬೆ ತುಮಕೂರು ಸಂಸ್ಥಾನ ಮಠದ ಶಿವಾಚಾರ್ಯ ರತ್ನ ಡಾ. ಗಂಗಾಧರ್ ಶಿವಾಚಾರ್ಯ ಸ್ವಾಮೀಜಿಗಳು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ರಥದ ಮಿಣಿ ಎಳೆದು ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ನೆರೆದಿದ್ದ ಭಕ್ತರಿಂದ ಜಯಘೋಷ ಮುಗಿಲುಮುಟ್ಟಿತ್ತು. ಹುಲಿ ಹಿರೇಮಠದ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮೈಶಾಳಿನ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿಗಳು ಮಾಂಜರಿಯ ಗುರು ಶಾಂತಲಿಂಗ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಗಳು ಸೂಗುರೇಶ್ವರ ಮಠ ನೂಲಿನ ಗುರುಸಿದ್ಧ ಶಿವಾಚಾರ್ಯ ಸ್ವಾಮೀಜಿಗಳು ಮದನೂರಿನ ಸಿದ್ಧ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗಳು ಕಬ್ಬೂರಿನ ಗೌರಿ ಶಂಕರ್ ಶಿವಾಚಾರ್ಯ ಸ್ವಾಮೀಜಿಗಳು ಕರಿಬಂಟನಾಳನ ಶಿವಕುಮಾರ ಸ್ವಾಮೀಜಿಗಳು ವೀರಭದ್ರ ದೇವಸ್ಥಾನದ ಉತ್ತರಾಧಿಕಾರಿ ರೇಣುಕಾದೇವರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಪುಷ್ಪಾಲಂಕೃತ ರಥ: ಜಾನಪದ ಕಲಾತಂಡಗಳೊಂದಿಗೆ ಪುಷ್ಪಾಲಂಕೃತ ರಥವು ಕ್ರಮಿಸಿತು. ವೀರಭದ್ರ ದೇವಸ್ಥಾನದಿಂದ ಹಳೆ ಯಡೂರಿನ ಬಸವೇಶ್ವರ ದೇವಸ್ಥಾನ ವರಿಗೆ ಭಕ್ತರು ರಥದೊಂದಿಗೆ ಹೆಜ್ಜೆ ಹಾಕಿದರು. ಬಸವೇಶ್ವರ ದೇವಸ್ಥಾನದ ವೃತ್ತ ಬಳಸಿ ರಥೋತ್ಸವವು ಮರಳಿತು.
ಗ್ರಾಮದ ವೀರಭದ್ರ ದೇವಸ್ಥಾನದ ಆವರಣದಲ್ಲಿ ಜಮಾಯಿಸಿದ್ದ ಭಕ್ತರು ಹೆಬ್ಬಾವಿನ ಗಾತ್ರದ ರಥದ ಮಿಣಿಯನ್ನು ಎಳೆದು ಹರಕೆ ತೀರಿಸಿದರು. ರಥಕ್ಕೆ ಹಣ್ಣು- ಜವನ ಎಸೆದು ಹರಕೆ ನೆರವೇರಿಸಿದರು.
ಶ್ರೀಶೈಲ ಪೀಠದ ಆನೆ- ಜಾನಪದ ಕಲಾತಂಡಗಳ ಕಲಾ ಪ್ರದರ್ಶದಿಂದ ಮಹಾರಥೋತ್ಸವಕ್ಕೆ ಮೆರಗು ಬಂದಿತು.
ಸೋಲಾಪುರ್ ಸಿದ್ದೇಶ್ವರ ದೇವಸ್ಥಾನ ಹಾಗೂ ಶ್ರೀಶೈಲ ಮಠದ ನಂದಿ ಧ್ವಜ, ಛತ್ರಿ ಚಾಮರ, ಬಿರುದಾವಳಿಗಳ ಜೊತೆಗೆ ಸನಾಯಿ ನಾದಸ್ವರ, ವೀರಗಾಸೆ, ಪೂಜಾ ಕುಣಿತ, ಗಾರುಡಿ ಗೊಂಬೆ, ತಮಟೆ ಮತ್ತು ನಗಾರಿ, ಜಾಂಜ್ ಮೇಳ, ಮರಗಾಲು ಕುಣಿತ, ಡೊಳ್ಳು ಕುಣಿತ, ದೊಡ್ಡವರಸೆ, ವೀರಮಕ್ಕಳ ಕುಣಿತ, ಕರಡಿ ಮಜಲು, ಸುಗ್ಗಿ ಕುಣಿತ, ಗೊರವರ ಕುಣಿತ, ಕೋಲಾಟ ಸೇರಿದಂತೆ ಹಲವಾರು ಕಲಾ ತಂಡಗಳು ರಥೋತ್ಸವಕ್ಕೆ ಮೆರಗು ಹೆಚ್ಚಿಸಿದವು. ವೀರಭದ್ರ ದೇವಸ್ಥಾನದ ವಿಶಾಳಿ ಯಾತ್ರಾ ಮಹೋತ್ಸವ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಮಂದಿ ರಥೋತ್ಸವ ವೀಕ್ಷಿಸಿ ಭಕ್ತಿ ಭಾವ ಮೆರೆದರು
ಹರಿದು ಬಂದು ಜನಸಾಗರ: ವೀರಭದ್ರ ದೇವರ ವಿಶಾಲಿ ಜಾತ್ರಾ ಮಹೋತ್ಸವ ಮತ್ತು ಮಹಾ ರಥೋತ್ಸವಕ್ಕೆ ಪ್ರಸ್ತುತ ವರ್ಷ ಹಿಂದಿನ ಎಲ್ಲ ದಾಖಲೆ ಮೀರಿ ಜನಸಾಗರ ಹರಿದು ಬಂದಿತ್ತು. ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು. ವೀರಭದ್ರ ದೇವರ ವಿಶಾಲಿ ಜಾತ್ರೆ ಮತ್ತು ಮಹಾರಥೋತ್ಸವ ಜಾತ್ರೆ ಇತಿಹಾಸವಾಗಿದೆ. ರಾಜ್ಯದ ಜಾತ್ರಾ ಪರಂಪರೆಯಲ್ಲಿ ಇದೊಂದು ಮೈಲುಗಲ್ಲಾಗಲಿದೆ. ಶಕ್ತಿ ಯೋಜನೆಯ ಪರಿಣಾಮ ಪುರುಷರಿಗಿಂತ ಮಹಿಳೆಯರು ಅಧಿಕ ಪ್ರಮಾಣದಲ್ಲಿ ಬಂದಿರೋದು ಕಂಡು ಬಂತು.
ಮಹಾ ರಥೋತ್ಸವದಲ್ಲಿ ಯಾವುದೇ ಅನಾಹುತ ನಡೆಯದಂತೆ ಚಿಕ್ಕೋಡಿ ಉಪವಿಭಾಗೀಯ ಪೊಲೀಸ್ ಅಧಿಕಾರಿ ಗೋಪಾಲಕೃಷ್ಣ ಗೌಡರ್, ಪೊಲೀಸ್ ಇನ್ಸ್ಪೆಕ್ಟರ್ ವಿಶ್ವನಾಥ ಚೌಗುಲಾ, ಅಂಕಲಿ ಪೊಲೀಸ್ ಠಾಣೆಯ ಪಿಎಸ್‌ಐ ನಂದೀಶ್ ಸದಲಗಾ ಪಿಎಸ್‌ಐ ಬಿರಾದಾರ್ ಇವರ ನೇತೃತ್ವದಲ್ಲಿ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ ಏರಿ್ಡಸಲಾಗಿತ್ತು.