ಲೋಕದರ್ಶನ ವರದಿ
ವಿಜಯಪುರ 18: ಅಕ್ರಮವಾಗಿ ಕಳ್ಳಭಟ್ಟಿ ಸರಾಯಿ ತಯಾರು ಮಾಡುವುದನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕಳ್ಳಭಟ್ಟಿ ಸರಾಯಿ ನಿರ್ಮೂಲನ ಜಿಲ್ಲಾ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯಾದ್ಯಂತ ಅಕ್ರಮವಾಗಿ ಕಳ್ಳಭಟ್ಟಿ ಸರಾಯಿ ತಯಾರು ಮಾಡುವುದನ್ನು ನಿಯಂತ್ರಿಸುವ ಜೊತೆಗೆ ಈ ಸರಾಯಿ ಉತ್ಪಾದನೆಯಾಗುವಂತಹ ಪ್ರದೇಶಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಡುವಂತೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅಕ್ರಮ ಕಳ್ಳಭಟ್ಟಿ ಸರಾಯಿ ತಯಾರಿಕೆ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಅನಿರೀಕ್ಷಿತವಾಗಿ ದಾಳಿ ಮಾಡುವುದು, ದಂಡ ವಿಧಿಸುವುದು, ಶಿಕ್ಷೆಗೊಳಪಡಿಸುವಂತಹ ಕ್ರಮಗಳ ಬಗ್ಗೆಯೂ ಪರಿಶೀಲಿಸಿದ ಅವರು, ಪೋಲಿಸ್ ಇಲಾಖೆಯ ಸಹಕಾರವನ್ನು ಕಾಲಕಾಲಕ್ಕೆ ಪಡೆಯುವ ಮೂಲಕ ಅಬಕಾರಿ ಹಾಗೂ ಪೋಲಿಸ್ ಇಲಾಖೆ ಸೇರಿದಂತೆ ಇತರೆ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.
ಅಕ್ರಮ ಕಳ್ಳಭಟ್ಟಿ ಸರಾಯಿ ಚಟುವಟಿಕೆಯಲ್ಲಿ ತೊಡಗಿರುವವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು. ಕಳ್ಳಭಟ್ಟಿ ತಯಾರಿಕಾ ಚಟುವಟಿಕೆಯಿಂದ ಹೊರಬರಲು ಮನವೊಲಿಸಲು ವಿವಿಧ ನಿಗಮಗಳ ಮುಖಾಂತರ ಸಕರ್ಾರದಿಂದ ದೊರೆಯುವ ಸಾಲ-ಸೌಲಭ್ಯ, ಮುದ್ರಾ ಯೋಜನೆ, ಸ್ವಯಂ ಉದ್ಯೋಗಕ್ಕೆ ನೆರವಾಗುವ ಸಾಲ-ಸೌಲಭ್ಯಗಳ ಕುರಿತಂತೆ ಅರಿವು ಮೂಡಿಸಬೇಕು.ಅಕ್ರಮ ಕಳ್ಳಭಟ್ಟಿ ಸರಾಯಿ ನಿರ್ಮೂಲನೆಗೆ ಸಂಬಂಧಪಟ್ಟಂತೆ ತಹಶೀಲ್ದಾರರು ಕೂಡ ಕಡ್ಡಾಯವಾಗಿ ಸಭೆಯನ್ನು ನಡೆಸಬೇಕು. ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಬೇಕು. ವಿಶೇಷವಾಗಿ ಅಬಕಾರಿ ಇಲಾಖೆ ಅಧಿಕಾರಿಗಳು ಇನ್ನಷ್ಟು ಚುರುಕಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಇಂಡಿ ಉಪವಿಭಾಗಾಧಿಕಾರಿ ಆನಂದ ಸೇರಿದಂತೆ ಅಬಕಾರಿ ಇಲಾಖೆ, ಪೋಲಿಸ್ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಅಬಕಾರಿ ಇಲಾಖೆ ಆಯುಕ್ತರಾದ ರವಿಶಂಕರ ಸ್ವಾಗತಿಸಿದರು.