ವಿಜಯಪುರ: ಸರ್ಕಾರದ ರೈತಾಭಿವೃದ್ದಿ ಯೋಜನೆಗಳ ಲಾಭ ದೊರಕಿಸಲು ಕರೆ

ಲೋಕದರ್ಶನ ವರದಿ

ವಿಜಯಪುರ 25: ಸರ್ಕಾರದ  ರೈತಾಭಿವೃದ್ದಿ ಯೋಜನೆಗಳು ಸಮರ್ಪಕವಾಗಿ ರೈತ ಸಮುದಾಯಕ್ಕೆ ದೊರಕಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ತೋಟಗಾರಿಕೆ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಸಿ.ಮನಗೂಳಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ ನೀಡಿದರು.

ಕರ್ನಾಟಕದ  ಸಣ್ಣ ಕೈಗಾರಿಕೆಗಳ ಸಂಘ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಮಂಡಳಿ, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ, ಕೆಐಎಡಿಬಿ ಕೈಗಾರಿಕೆಗಳ ಮಾಲೀಕರ ಸಂಘ ಇವರುಗಳ ಸಹಯೋಗದಲ್ಲಿ ಇಂದು ಮಧುವನ ಇಂಟರ್ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ಜರುಗಿದ ಕೃಷಿ ವ್ಯವಹಾರ ಮತ್ತು ಆಹಾರ ಸಂಸ್ಕರಣಾ ನೀತಿ-2015 ಜಾಗೃತಿ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ದೇಶವು ಕೃಷಿ ಆಧಾರಿತ ದೇಶವಾಗಿದ್ದು, ರೈತ ಸಮುದಾಯ ಅಭಿವೃದ್ದಿಯಾದರೆ ಇಡಿ ದೇಶವೆ ಅಭಿವೃದ್ದಿ ಆದಂತೆ. ಈ ನಿಟ್ಟಿನಲ್ಲಿ ಇಂತಹ ಸಂಘ-ಸಂಸ್ಥೆಗಳು, ಸರ್ಕಾರದ  ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಯೋಜನೆಗಳ ಲಾಭಗಳನ್ನು ರೈತಾಪಿ ವರ್ಗಕ್ಕೆ ತಲುಪಿಸುವ ಜೊತೆಗೆ ಜಾಗೃತಿ ಮೂಡಿಸಲು  ಶ್ರಮಿಸುವಂತೆ ತಿಳಿಸಿ ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಂಡ ಕಾರ್ಯಗಾರದ ಮಾದರಿಯಲ್ಲಿ  ತಾಲೂಕು ಮಟ್ಟದಲ್ಲಿಯೂ ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.

ಕರ್ನಾಟಕ  ಸಣ್ಣ ಕೈಗಾರಿಕೆ ಸಂಘದ ಅಧ್ಯಕ್ಷ ಬಸವರಾಜ ಎಸ್.ಜವಳಿ ಅವರು ಮಾತನಾಡಿ, ಪ್ರಸ್ತುತ ದಿನದಂದು ರೈತರು ಉತ್ತಮ ಮಾರುಕಟ್ಟೆ ಸೌಲಭ್ಯದ ಕೊರತೆಯಿಂದ ಅನೇಕ ರೀತಿಯ ಸಮಸ್ಯೆ ಎದುರಿಸುತ್ತಿದ್ದು, ಅವರಿಗೆ ಸೂಕ್ತ ಸೌಲಭ್ಯಗಳೂ ದೊರಕಬೇಕು. ಉತ್ತಮ ಬೆಲೆ, ಸಾಗಾಣಿಕ ವ್ಯವಸ್ಥೆ ಮುಂತಾದ ಸೂಕ್ತ ಸೌಲಭ್ಯಗಳು ದೊರಕುವಂತಾಗಬೇಕು ಆಗ ಮಾತ್ರ ರೈತ ಸಮುದಾಯ ಅಭಿವೃದ್ದಿಯಾಗುತ್ತದೆ ಎಂದು ಹೇಳಿದರು. 

ಹಣಕಾಸು ಮತ್ತು ಬ್ಯಾಂಕಿಂಗ್ ವ್ಯವಸ್ಥೆ ಕುರಿತು ನಗರ ಜಂಟಿ ಕಾರ್ಯದರ್ಶಿ ಸುರೇಶ ಎನ್.ಸಾಗರ್ ಹಾಗೂ ಆಹಾರ ಸಂಸ್ಕರಣಾ ಮತ್ತು ಬಳಕೆ ಕುರಿತು ತೋಟಗಾರಿಕೆ ತಂತ್ರಜ್ಞಾನ ತೋಟಗಾರಿಕೆ ವಿಶ್ವವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಸ್.ಎಲ್.ಜಗದೀಶ ಉಪನ್ಯಾಸ ನೀಡಿದರು

ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಮುಖಂಡರಿಗೆ ಗೌರವಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಶಿವಯೋಗಪ್ಪ ನೇದಲಗಿ, ಕೆಐಎಡಿಬಿ ಕೈಗಾರಿಕೆಗಳ ಮಾಲೀಕರ ಸಂಘದ ಅಧ್ಯಕ್ಷ ಎಸ್.ವಿ.ಪಾಟೀಲ, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಎಸ್.ಎಸ್.ಬಿರಾದಾರ, ಸಂಘದ ಕಾರ್ಯನಿರ್ವಾಹಕ  ಕಾರ್ಯದರ್ಶಿ  ಕೆ.ಎಸ್. ಶ್ರೀದರ, ವಾಣಿಜ್ಯ ಮತ್ತು ಕೈಗಾರಿಕೆ ಮಂಡಳಿ ಅಧ್ಯಕ್ಷ ದುಂಡಪ್ಪ ಗುಡ್ಡೋಡಗಿ, ಸೂಕ್ಷ್ಮ, ಸಣ್ಣ ಮಧ್ಯಮ ಕೈಗಾರಿಕೆಗಳ ಅಪರ ನಿರ್ದೇಶಕ  ಎಚ್.ಎಂ.ಶ್ರೀನಿವಾಸ, ಜಂಟಿ ಕಾರ್ಯದರ್ಶಿ-ಗ್ರಾಮೀಣ ಎಸ್.ವಿಶ್ವೇಶ್ವರಯ್ಯ, ನಿಂಗಣ್ಣ ಎಸ್. ಬಿರಾದಾರ, ತೋಟಗಾರಿಕೆ ಇಲಾಖೆಉಪನಿರ್ದೇಶಕ  ಸಂತೋಷ ಇನಾಂದಾರ, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ  ಟಿ.ಸಿದ್ದಣ್ಣ ಉಪಸ್ಥಿತರಿದ್ದರು. ಗೌರವ ಪ್ರಧಾನ ಕಾರ್ಯದರ್ಶಿ ರವಿಕಿರಣ ನಿರೂಪಿಸಿದರು. ಉಪಾಧ್ಯಕ್ಷ ಆರ್.ರಾಜು ವಂದಿಸಿದರು.