ವಿಜಯಪುರ: ಮನತಣಿಸಿದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ಲೋಕದರ್ಶನ ವರದಿ

ವಿಜಯಪುರ 25: ಸುರಸಿಂಗಾರ ಹಾಗೂ ಮುಂಬಯಿನ ಹಾರ್ಮೋನಿ ಮ್ಯೂಸಿಕ್ ಫೌಂಡೇಶನ್ ಇವುಗಳ ಸಂಯುಕ್ತಾಶ್ರಯದಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಇತ್ತೀಚೆಗೆ ದರಬಾರ ಪ್ರೌಢಶಾಲೆಯ ಆವರಣದಲ್ಲಿ ನಡೆಯಿತು. ಮುಂಬೈನ ಶ್ರೇಷ್ಠ ಹಾರ್ಮೋನಿಯಂ  ಕಲಾವಿದರಾದ ಪಂ. ವಿಶ್ವನಾಥ ಕಾನ್ಹೇರೆ ಹಾರ್ಮೋನಿಯಂ ಸೋಲೊ ಕಾರ್ಯಕ್ರಮ ನೀಡಿದರು. ಅವರು ರಾಗ ಮಧುವಂತಿಯನ್ನು ಮನಸ್ಸಿಗೆ ಮುಟ್ಟುವಂತೆ ಎಳೆ ಎಳೆಯಾಗಿ ನುಡಿಸಿದರು. ನಂತರ ಮಿಶ್ರ ಯಮನ್, ಮಿಶ್ರ ಜೋಗ್ ನುಡಿಸಿ ಕಾರ್ಯಕ್ರಮದಲ್ಲಿದ್ದವರ ಮನತಣಿಸಿ ಜನರ ಚಪ್ಪಾಳೆ ಗಿಟ್ಟಿಸಿಕೊಂಡರು.

ಮುಂಬೈನ ಕಲಾವಿದೆ ಡಾ. ವರದಾ ಗೋಡಬೋಲೆ ರಾಗ ಅಭೋಗಿ, ರಾಗ ಬಸಂತ, ಭೈರವಿಗಳನ್ನು ಸುಶ್ರಾವ್ಯವಾಗಿ ಹಾಡಿ ಕಾರ್ಯಕ್ರಮಕ್ಕೆ ವಿಶೇಷ ಮೆರನ್ನು ತಂದರು. ಇವರಿಗೆ  ಬೆಂಗಳೂರಿನ ಕೇಶವ ಜೋಶಿ ತಬಲಾ ಮತ್ತು ಮುಂಬೈನ ಓಂಕಾರ ಹಾಮರ್ೋನಿಯಂ ಸಾಥನ್ನು ಉತ್ತಮವಾಗಿ ನೀಡಿದರು. ಶ್ರೀಹರಿ ಮತ್ತು ವಿಶಾಲ್ ತಂಬೂರಿಸಾಥ್ ನೀಡಿದರು.

ಸುರಸಿಂಗಾರದ ಉಪಾಧ್ಯಕ್ಷರಾದ ವಿಶ್ವನಾಥ ಬೀಳಗಿ, ಅರುಣ ಸೋಲಾಪುರಕರ್, ಸಂಗಣ್ಣ ಪಾಟೀಲ, ಡಾ. ಶಿರಗುಪ್ಪಿ, ತ್ರೀವೇಣಿ ಬೀಳಗಿ, ರಮೇಶ ಚೌಹಾಣ, ಡಾ. ವಿಷ್ಣು ಶಿಂದೆ, ಡಾ. ಹರೀಶ ಹೆಗಡೆ ಮತ್ತೀತರ ಪದಾಧಿಕಾರಗಳು, ಮುಂಬಯಿಯಹಾರ್ಮೋನಿ  ಮ್ಯೂಸಿಕ್ ಸಂಸ್ಥೆಯ ಮುಖ್ಯಸ್ಥೆ ಸುಮನ್ ದಿವಾಕರ, ಕಲಾವಿದರಾದ ವಿದುಷಿ ಶಾಂತಾಬಾಯಿ ಕೌತಾಳ, ಲತಾ ಜಹಾಗಿರ್ದಾರ್, ಮಾಧುರಿ ಕುಸುಗಲ್, ಗಿರಿಮಲ್ಲಪ್ಪ ಬಜಂತ್ರಿ, ಶ್ರೀಪಾದ ಅಠಲ್ಯೆ, ಆಯ್. ಆರ್ ಇಜೇರಿ, ಪ್ರೂ. ಸುರಪುರ, ಎ.ಟಿ.ಹಿರೇಮಠ, ಪಿ.ಎಸ್.ಕಡೇಮನಿ. ಎಸ್.ಟಿ. ಮೇರವಾಡೆ, ಎಸ್.ಎಂ. ತೊಗರಿ, ಜಿ.ಬಿ.ರುದ್ರಾಕ್ಷಿ, ಶಶಿಕಲಾ ಕುಲ್ಲೋಳಿ ಸಹಿತ ಅಪಾರ ಸಂಗೀತಾಸಕ್ತರು ಆಗಮಿಸಿದ್ದರು. ಸುಮನ್ ದಿವಾಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ ವಿಷ್ಣು ಶಿಂದೆ ನಿರೂಪಿಸಿದರು.