ಲೋಕದರ್ಶನ ವರದಿ
ವಿಜಯಪುರ 02: ಲೋಕಸಭಾ ಸಾರ್ವತ್ರಿಕ ಚುನಾವಣೆ-2019ಕ್ಕೆ ಸಂಬಂಧಿಸಿದಂತೆ ಮತಗಟ್ಟೆ ಸಿಬ್ಬಂದಿಗಳನ್ನು ಸೂಕ್ತ ರೀತಿಯಲ್ಲಿ ತರಬೇತಿಗೊಳಿಸಿ ವ್ಯವಸ್ಥಿತವಾಗಿ ಚುನಾವಣೆ ನಡೆಯುವಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜಿಲ್ಲೆಯ ಲೋಕಸಭಾ ಮೀಸಲು ಕ್ಷೇತ್ರದ ವ್ಯಾಪ್ತಿಗೆ ಬರುವ ಎಂಟು ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಆಯಾ ತಾಲೂಕಾ ತಹಶೀಲ್ದಾರರೊಂದಿಗೆ ಸಭೆ ನಡೆಸಿದ ಅವರು, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಯಾವುದೇ ರೀತಿಯ ಲೋಪವಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಮತಗಟ್ಟೆ ಸಿಬ್ಬಂದಿಗಳನ್ನು ಶಿಸ್ತುಬದ್ಧವಾಗಿ ತರಬೇತಿಗೊಳಿಸಿ ಚುನಾವಣೆ ವ್ಯವಸ್ಥಿತ ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳಲು ಸೂಚನೆ ನೀಡಿದರು.
ಚುನಾವಣಾ ಆಯೋಗವು ನೀಡಿರುವ ಮಾರ್ಗಸೂಚಿಗಳನ್ವಯ ಕಾರ್ಯನಿರ್ವಹಿಸುವಂತೆ ತಿಳಿಸಿದ ಅವರು, ಸಂಬಂಧಪಟ್ಟ ಅಧಿಕಾರಿಗಳು, ಚುನಾವಣಾ ಸಿಬ್ಬಂದಿಗಳು ಒಗ್ಗಟ್ಟಾಗಿ ಏಕರೂಪದಲ್ಲಿ ಕಾರ್ಯನಿರ್ವಹಿಸಬೇಕು. ಯಾವುದೇ ಲೋಪಕ್ಕೆ ಅವಕಾಶ ನೀಡದಿರಲು ತಿಳಿಸಿದ ಅವರು, ಚುನಾವಣಾ ಕರ್ತವ್ಯದಲ್ಲಿದ್ದಾಗ ತಮ್ಮ ಗಮನವನ್ನು ಹೆಚ್ಚಾಗಿ ಕೇಂದ್ರೀಕರಿಸುವಂತೆ ತಿಳಿಸಿದ ಅವರು, ಮತಗಟ್ಟೆ ಸಿಬ್ಬಂದಿಗಳು ಇವಿಎಂ, ವಿವಿಪ್ಯಾಟ್ಗಳ ಸುರಕ್ಷತೆ ಮತ್ತು ನಿರ್ವಹಣೆಯನ್ನು ಜಾಗೃತಿಯಿಂದ ಹಾಗೂ ಜವಾಬ್ದಾರಿಯಿಂದ ನಿಭಾಯಿಸುವಂತೆ ಸಲಹೆ ನೀಡಿದರು.
ಈಗಾಗಲೇ ಚುನಾವಣಾ ಮತದಾರರ ಪಟ್ಟಿಗಳನ್ನು ಪರಿಶೀಲನೆಗಾಗಿ ನೀಡಲಾಗಿದೆ. ಮತದಾರರ ಪಟ್ಟಿಯನ್ನು ಸಮರ್ಪಕವಾಗಿ ಪರಿಶೀಲಿಸುವಂತೆ ತಿಳಿಸಿದ ಅವರು, ಚುನಾವಣೆಯು ಪಾರದರ್ಶಕವಾಗಿ ನಡೆಯಲು ನೀತಿ ಸಂಹಿತೆ ಉಲ್ಲಂಘನೆ ತಡೆಗೆ ಹೆಚ್ಚಿನ ಗಮನ ಹರಿಸಬೇಕು. ಅದರಂತೆ ಚುನಾವಣಾ ಸಂದರ್ಭದಲ್ಲಿ ಅಭ್ಯಥರ್ಿಗಳಿಂದ ಆಗುವ ವೆಚ್ಚಗಳನ್ನು ಸರಿಯಾಗಿ ದಾಖಲಿಸುವಂತೆ ತಿಳಿಸಿದರು.
ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಅಧಿಕಾರಿಗಳಿಗೆ ಪ್ರಾಯೋಗಿಕ ರೂಪದಲ್ಲಿ ತರಬೇತಿಗೊಳಿಸಬೇಕು. ಪಿಆರ್ಓಗಳಿಗೆ ಸಂಬಂಧಪಟ್ಟ ಕೈಪಿಡಿಗಳನ್ನು ಸಮರ್ಪಕವಾಗಿ ಹಂಚಿಕೆಯಾಗುವಂತೆ ನೋಡಿಕೊಳ್ಳಬೇಕು. ಆಯಾ ಮತಗಟ್ಟೆ ಅಧಿಕಾರಿಗಳಿಗೆ ಆದೇಶ ಪ್ರತಿಗಳನ್ನು ತಲುಪಿರುವ ಬಗ್ಗೆ ಆಯಾ ಸಹಾಯಕ ಚುನಾವಣಾಧಿಕಾರಿಗಳು ಖಾತ್ರಿಪಡಿಸಿಕೊಳ್ಳಬೇಕು. ಪೋಸ್ಟಲ್ ಬ್ಯಾಲೆಟ್ಗೆ ಸಂಬಂಧಿಸಿದಂತೆ ಸೂಕ್ತ ತರಬೇತಿಯ ಜೊತೆಗೆ ಮಾಹಿತಿ ಒದಗಿಸುವಂತೆ ತಿಳಿಸಿದರು.
ಬರ ನಿರ್ವಹಣೆಗೆ ಸೂಚನೆ:
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ನೈಜ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ಸಮರ್ಪಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಕೆಯಾಗುತ್ತಿರುವ ಬಗ್ಗೆ ನಿಗಾ ಇಡಬೇಕು. ಅವಶ್ಯಕತೆಗನುಗುಣವಾಗಿ ವಿಶೇಷವಾಗಿ ಜಾನುವಾರುಗಳಿಗೆ, ಅವಶ್ಯಕತೆಗೆ ಅನುಗುಣವಾಗಿ ಮೇವು ಬ್ಯಾಂಕುಗಳಿಂದ ಮೇವು ಪೂರೈಸುತ್ತಿರುವ ಬಗ್ಗೆ ಸರಿಯಾಗಿ ದಾಖಲೀಕರಣಗೊಳಿಸಬೇಕು. ಈ ಕುರಿತಂತೆ ಎಷ್ಟು ರೈತರಿಗೆ ಎಷ್ಟು ಪ್ರಮಾಣದ ಮೇವು ಒದಗಿಸಲಾಗಿದೆ ಎಂಬುದರ ಬಗ್ಗೆ ವರದಿಯನ್ನು ಸಹ ಸಲ್ಲಿಸಬೇಕು ಎಂದು ಸಂಬಂಧಪಟ್ಟ ತಹಶೀಲ್ದಾರರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಸೇರಿದಂತೆ ಸಹಾಯಕ ಚುನಾವಣಾಧಿಕಾರಿಗಳು, ತಹಶೀಲ್ದಾರರು ಉಪಸ್ಥಿತರಿದ್ದರು.