ರಾಜ್ಯದ ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಉಪರಾಷ್ಟ್ರಪತಿ ಬೇಟಿಗೆ ಜಿಲ್ಲಾಡಳಿತಕ್ಕೆ ಮನವಿ
ರಾಣೇಬೆನ್ನೂರು 5: ನಾಳೆಯ 7 ನೇ ತಾರೀಖು ಶುಕ್ರವಾರದಂದು ರಾಣೇಬೆನ್ನೂರು ನಗರದಲ್ಲಿ ನಡೆಯುವ 2025 ರ “ಕರ್ನಾಟಕ ವೈಭವ” ವೈಚಾರಿಕ ಹಬ್ಬದ ಉದ್ಘಾಟನೆಗೆ ಭಾರತ್ ಸರಕಾರದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನಕರ್ ಆಗಮಿಸುತ್ತಿದ್ದು ರಾಜ್ಯದ ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ ‘10’ ನಿಮಿಷ ಮಾನ್ಯ ಉಪರಾಷ್ಟ್ರಪತಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಸಮಯಾವಕಾಶವನ್ನು ಮಾಡಿಕೊಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿಗಳು, ಪ್ರಗತಿಪರ ಚಿಂತಕರು ಆದ ರವೀಂದ್ರಗೌಡ ಎಫ್. ಪಾಟೀಲ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಾನ್ಯ ಐ.ಜಿ.ಪಿ. ಡಾಽಽ ಬಿ.ಆರ್. ರವಿಕಾಂತೇಗೌಡ, ಹಾವೇರಿ ಜಿಲ್ಲಾಧಿಕಾರಿ ಡಾಽಽ ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾಽಽ ಅಂಶುಕುಮಾರ್ ರವರಲ್ಲಿ ಮನವಿ ಮಾಡಿರುವ ಪಾಟೀಲರು ತಾವು ಸೂಚಿಸಿದ ಸ್ಥಳದಲ್ಲಿ ಆಯ್ದ ಕೆಲವೆ ಮುಖಂಡರೊಂದಿಗೆ ಕೇವಲ 10 ನಿಮಿಷ ಅವಕಾಶ ಮಾಡಿಕೊಟ್ಟರೆ ರೈತರು ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಹಾವೇರಿ ಜಿಲ್ಲೆಯಲ್ಲಿ ಕೃಷಿ ಕೇತ್ರದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನಾರ್ಹ ವಿಷಯಗಳ ಬಗ್ಗೆ ಚರ್ಚಿಸಿ ಮನವಿ ನೀಡಿದರೆ ಕೆಲವು ಸಮಸ್ಯೆಗಳು ಕೇಂದ್ರಕ್ಕೆ ಮುಟ್ಟುವ ಜೊತೆಗೆ ಪರಿಹಾರವನ್ನೂ ಕೂಡಾ ಕಂಡುಕೊಳ್ಳಬಹುದಾಗಿದೆ ಎಂದ ಪಾಟೀಲರು ಉಪರಾಷ್ಟ್ರಪತಿಗಳು ನಗರಕ್ಕೆ ಬರುತ್ತಿರುವುದು ಹೆಮ್ಮೆಯ ವಿಷಯದ ಜೊತೆಗೆ ರೈತಾಪಿ ವರ್ಗದ ಕೂಗು ಕೇಳಲು ಸಮಯ ಕೊಟ್ಟ ಕೀರ್ತಿ ಉಪರಾಷ್ಟ್ರಪತಿಗಳಾಗುತ್ತದೆ ಹಿರಿಮೆ ಕಾರ್ಯಕ್ರಮಕ್ಕೆ ಸಲ್ಲಿದರೆ ಗರಿಮೆ ಜಿಲ್ಲಾಡಳಿತಕ್ಕೆ ಸಲ್ಲುತ್ತದೆ. ಅನ್ನಧಾತನಿಗೆ ನೀಡಿದ ನಿಜವಾದ ಗೌರವ ಇಡೀ ಕರ್ನಾಟಕ ವೈಭವದ ಕಾರ್ಯಕ್ರಮಕ್ಕೆ ಸಲ್ಲುತ್ತದೆ ಎಂದಿದ್ದಾರೆ ಎಂದು ರವೀಂದ್ರಗೌಡ ಎಫ್. ಪಾಟೀಲರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.