ವಾಹನಗಳ ನೋಂದಣಿ, ಚಾಲನಾ ಅನುಜ್ಞಾ ಪತ್ರಗಳ ನೀಡಿಕೆ: ಗಂಗಾವತಿಯಲ್ಲಿ ಮಾಸಿಕ ಕ್ಯಾಂಪ್
ಕೊಪ್ಪಳ 27: ವಾಹನಗಳ ನೋಂದಣಿ ಹಾಗೂ ಚಾಲನಾ ಅನುಜ್ಞಾ ಪತ್ರಗಳ ನೀಡಿಕೆ ಕುರಿತಂತೆ ಕೊಪ್ಪಳ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಗಂಗಾವತಿಯ ಎಪಿಎಂಸಿ ಆವರಣದಲ್ಲಿ ಬುಧವಾರದಂದು ಮಾಸಿಕ ಕ್ಯಾಂಪ್ ಜರುಗಿತು.
ಕೊಪ್ಪಳ ಪ್ರಾದೇಶಿಕ ಸಾರಿಗೆ ಕಚೇರಿಯ ಮೋಟಾರು ವಾಹನ ನೀರೀಕ್ಷಕರುಗಳು ಅರ್ಹತಾ ಪತ್ರ ಹಾಗೂ ತೆರಿಗೆ ಪಾವತಿಸದೇ ಇರುವಂತಹ ಶಾಲಾ ವಾಹನಗಳ ವಿರುದ್ಧ ವಿಶೇಷ ಪ್ರವರ್ತನ ಚಟುವಟಿಕೆ ಕಾರ್ಯಗಳನ್ನು ನಡೆಸಿ, ಗಂಗಾವತಿ ಮತ್ತು ಕಾರಟಗಿ ತಾಲೂಕುಗಳು ಸೇರಿದಂತೆ ಒಟ್ಟು 33 ಶಾಲೆಗಳಿಗೆ ತೆರಳಿ, ಅರ್ಹತಾ ಪತ್ರ ವಾಯಿದೆ (ಎಫ್.ಸಿ) ಮುಗಿದಿರುವ ವಾಹನಗಳಿಗೆ ಸಂಬಂಧಿಸಿದಂತೆ 111 ಅರ್ಹತಾ ಪತ್ರ (ಎಫ್.ಸಿ.) ನೋಟಿಸ್‌ಗಳನ್ನು ಹಾಗೂ ತೆರಿಗೆ ವಾಯಿದೆ (ಟ್ಯಾಕ್ಸ್) ಮುಗಿದಿರುವ ವಾಹನಗಳಿಗೆ ಸಂಬಂದಿಸಿದಂತೆ 87 ತೆರಿಗೆ ತಗಾದೆ ನೋಟಿಸ್‌ಗಳನ್ನು ಜಾರಿಗೊಳಿಸಿ ಒಟ್ಟು 198 ವಾಹನಗಳ ಶಾಲಾ ಸಂಸ್ಥೆಯ ಮುಖ್ಯಸ್ಥರಿಂದ ಸ್ವೀಕೃತಿಯನ್ನು ಪಡೆಯಲಾಗಿದೆ.
ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ್ ಅವರ ನೇತೃತ್ವದಲ್ಲಿ ಬುಧವಾರ ನಡೆದ ಗಂಗಾವತಿ ಕ್ಯಾಂಪ್‌ನಲ್ಲಿ 16 ಶಾಲಾ ವಾಹನಗಳ ಅರ್ಹತಾ ಪತ್ರಗಳನ್ನು ಕಚೇರಿಯ ಪ್ರತರ್ವನ ಸಿಬ್ಬಂದಿಯವರಾದ ಹಿರಿಯ ಮೋಟಾರು ವಾಹನ ನೀರೀಕ್ಷಕ ಜಿ.ಎಂ.ಸುರೇಶ ಅವರು ತಪಾಸಣೆ ಮಾಡಿ, ಅರ್ಹತಾ ಪತ್ರಗಳನ್ನು ನವೀಕರಣ ಮಾಡಿರುತ್ತಾರೆ.
ಇನ್ನೂ ಜಿಲ್ಲೆಯ ಬಾಕಿ ತಾಲೂಕುಗಳಾದ ಕುಷ್ಟಗಿ, ಯಲಬುರ್ಗಾ, ಕನಕಗಿರಿ, ಕುಕನೂರ ಹಾಗೂ ಕೊಪ್ಪಳ ತಾಲೂಕಿನ ಎಲ್ಲಾ ಶಾಲಾ ವಾಹನಗಳ ಮುಖ್ಯಸ್ಥರು ತಮ್ಮ ಸಂಸ್ಥೆ ಅಥವಾ ಶಾಲೆಗೆ ಸಂಬಂಧಿಸಿದ ಶಾಲಾ ವಾಹನಗಳ ತೆರಿಗೆ ಬಾಕಿ ಇದ್ದಲ್ಲಿ ಕೂಡಲೇ ತೆರಿಗೆ ಪಾವತಿಸಿ, ಅರ್ಹತಾ ಪತ್ರ ನವೀಕರಿಸಿಕೊಳ್ಳಬೇಕು. ತಪ್ಪಿದಲ್ಲಿ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು. ಶಾಲಾ ವಾಹನಗಳಲ್ಲಿ ಶಾಲಾ ಮಕ್ಕಳು ಅಥವಾ ಶಾಲೆಯ ಸಿಬ್ಬಂದಿಯವರನ್ನು ಕರೆದುಕೊಂಡು ಹೋಗುತ್ತಿರುವುದರಿಂದ ಅಪಘಾತಗಳು ಸಂಭವಿಸಿದಲ್ಲಿ ಶಾಲೆ ಅಥವಾ ಸಂಸ್ಥೆಯ ಮುಖ್ಯಸ್ಥರೇ ನೇರ ಹೊಣೆಗಾರರಾಗಿರುತ್ತಾರೆ. ಆದ್ದರಿಂದ ವಾಹನಗಳ ದಾಖಲಾತಿಗಳಾದ ಆರ್.ಸಿ. ಕಾರ್ಡ, ಇನ್ಸೂರೇನ್ಸ್, ರಹದಾರಿ (ಪರ್ಮಿಟ್), ತೆರಿಗೆ, ವಾಯು ಮಾಲಿನ್ಯ ಪ್ರಮಾಣ ಪತ್ರ, ಅರ್ಹತಾ ಪತ್ರಗಳನ್ನು ಅಪ್‌ಡೇಟ್ (ಣಠಿಜಚಿಣಜ)ನಲ್ಲಿ ಇಟ್ಟುಕೊಳ್ಳಬೇಕು ಎಂದು ಎಂದು ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ್ ಅವರು ತಿಳಿಸಿದ್ದಾರೆ.