ಜೀವ ಬೆದರಿಕೆ ಒಡ್ಡುತ್ತಿರುವ ಆರೋಪಿ ಕರ ವಸುಲಿಗಾರನ ವಜಾಕ್ಕೆ ವಿವಿಧ ಸಂಘಟನೆಗಳಿಂದ ಆಗ್ರಹ

Various organizations have demanded the dismissal of the accused debt collector who is threatening

 ಜೀವ ಬೆದರಿಕೆ ಒಡ್ಡುತ್ತಿರುವ ಆರೋಪಿ ಕರ ವಸುಲಿಗಾರನ ವಜಾಕ್ಕೆ ವಿವಿಧ ಸಂಘಟನೆಗಳಿಂದ ಆಗ್ರಹ 

ಯರಗಟ್ಟಿ 05: ಪಟ್ಟಣ ಪಂಚಾಯತಿಯಲ್ಲಿ ಮಿತಿಮೀರಿ ಭ್ರಷ್ಟಾಚಾರ ನಡೆಯುತ್ತಿದ್ದು ಬಡವರ, ದಲಿತರ, ರೈತರ ಹೀಗೆ ಸಾರ್ವಜನಿಕರಿಂದ ಹಣ ಸುಲಿಗೆ ಮಾಡಿದ್ದಲ್ಲದೆ ಹಣ ಕೊಟ್ಟಿರುವುದನ್ನು ಹೊರಗಡೆ ಹೇಳಬಾರದೆಂದು ಜೀವ ಬೆದರಿಕೆ ಹಾಕುತ್ತಾ ಸುಮಾರು 7 ಕೋಟಿಯಷ್ಟು ಬೇನಾಮಿ ಆಸ್ತಿ ಮಾಡಿರುವ ಬಿಲ್ ಕಲೆಕ್ಟರ್ ಮಲಿಕಸಾಬ ಶಿಕ್ಕಲಗಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಮತ್ತು ನೌಕರಿಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಪಟ್ಟಣ ಪಂಚಾಯತಿ ಎದುರು ಪೆಂಡಾಲ ಹಾಕಿ ಡಾ.ಬಿ.ಆರ್‌.ಅಂಬೇಡ್ಕರ ಭಾವಚಿತ್ರ ಹಿಡಿದು ದಲಿತ ಸಂಘಟನೆ ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆ ಮಾಡಿದರು. 

ಈ ಸಂಧರ್ಭದಲ್ಲಿ ದಲಿತ ಸಮಾಜ ಮುಖಂಡ ಸಂತೋಷ ಚನ್ನಮೇತ್ರಿ ಮಾತನಾಡಿ ಮನೆಯ ಉತಾರ ಹಾಗೂ ಇನ್ನಿತರ ಕೆಲಸಗಳಿಗೆ ಪ.ಪಂ.ಕಾರ್ಯಾಲಯಕ್ಕೆ ಬಂದಾಗ ನಮ್ಮ ಸಮುದಾಯವನ್ನು ಹೀಯಾಳಿಸುವುದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ಹಾಗೂ ಮನೆಯ ಕಂಪ್ಯೂಟರ್ ಉತಾರಕ್ಕೆ 50 ರಿಂದ 60 ಸಾವಿರ ಹಣದ ಬೇಡಿಕೆ ಇಡುತ್ತಿರುವ ಬಿಲ್ ಕಲೆಕ್ಟರ್ ಮಲಿಕಸಾಬ ಶಿಕ್ಕಲಗಿ ನೌಕರನನ್ನು ವಜಾಗೋಳಿಸಬೇಕು ಇಲ್ಲದಿದ್ದರೇ ಹೋರಾಟ ನಿರಂತರವಾಗಿರುತ್ತದೆ ಎಂದರು. 

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ಮಾಧವಾನಂದ ಗುಂಡಪ್ಪಗೋಳ ಕರ ವಸುಲಿಗಾರ ಮಲಿಕಸಾಬ ಶಿಕ್ಕಲಗಿ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಹಾಗೂ ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದಾನೆ ಎಂದು  ಅವರ ವಿರುದ್ಧ ಸಾರ್ವಜನಿಕರಿಂದ ಹಾಗೂ ಸಂಘ ಸಂಸ್ಥೆಗಳಿಂದ ಮೌಖಿಕವಾಗಿ ಹಾಗೂ ಲಿಖಿತರೂಪದಲ್ಲಿ ಹಲವಾರು ಆಪಾಧನೆಗಳು ಬಂದಿರುತ್ತವೆ. ನೌಕರನಿಗೆ ಸಾಕಷ್ಟು ನೋಟಿಸ್ ನೀಡಿದರೂ ಉತ್ತರ ಬರದ ಹಿನ್ನಲೆಯಲ್ಲಿ ಹಾಗೂ ಮೇಲಾಧಿಕಾರಿಗಳ ಆದೇಶದಂತೆ ಕರ ವಸುಲಿಗಾರ ಮಲಿಕಸಾಬ ಶಿಕ್ಕಲಗಿ ಇವರನ್ನು ಸಾರ್ವಜನಿಕರ ಆಪಾಧನೆಗಳನ್ನು ಪರಿಗಣಿಸಿ ಆಡಳಿತಾತ್ಮಕ ಹಾಗೂ ಸಾರ್ವಜನಿಕರ ಹಿತದೃಷ್ಠಿಯಿಂದ ಸದರಿ ನೌಕರನನ್ನು ಬೆರೆ ನಗರ ಸ್ಥಳಿಯ ಸಂಸ್ತೆಗೆ ನಿಯೋಜಿಸಲು ಹಾಗೂ ನಿಯೋಜನೆಗೊಳ್ಳುವರೆಗೆ ವೇತನ ರಹಿತಿ ರಜೆಯ ಮೇಲೆ ತೆರಳಲು ಸೂಚಿಸಿ ಠರಾವನ್ನು ಅಂಗಿಕರಿಸಲಾಗಿದೆ ಎಂದು ಹೇಳಿ ಪ್ರತಿಭಟನಾಕಾರರ ಮನವಲಿಸಿದಾಗ ಪ್ರತಿಭಟನೆಯನ್ನು ಪ್ರತಿಭಟನಾಕಾರರು ಹಿಂಪಡೆದರು. 

ಈ ಸಂಧರ್ಭದಲ್ಲಿ ಭಾಸ್ಕರ ಹಿರೇಮೇತ್ರಿ, ಯಲ್ಲಪ್ಪ ಪಟ್ಟಪ್ಪನವರ, ಸುರೇಶ ತಮ್ಮನ್ನವರ, ಬಾಬು ಚನ್ನಮೇತ್ರಿ, ಸಂಜು ಮುರಗೋಡ, ಹನಮಂತ ನರೇರ, ಲಂಕೇಶ ಮೇತ್ರಿ, ಸುರೇಶ ಭಜಂತ್ರಿ, ಸಚೀನ ಚನ್ನಮೇತ್ರಿ, ಪ್ರಕಾಶ ಅಕ್ಕಿಸಾಗರ, ಅರುಣ ನೀಲಪ್ಪನವರ, ಕುಮಾರ ಅಡಿಬಟ್ಟಿ, ಸುರೇಶ ಉದ್ದಪ್ಪನವರ, ಫಕೀರ​‍್ಪ ಕಾಮೋಶಿ, ಡಿ.ಕೆ.ರಫೀಕ, ರಾಜು ಮಾದರ, ಯಶ್ವಂತ ಮುಗಳಿಹಾಳ, ಬಸು ಗುಡಮಕೇರಿ, ಮಣ್ಣಪ್ಪ ಪಟ್ಟಪ್ಪನವರ, ಭೀಮಶಿ ಹಾದಿಮನಿ, ಯರಗಟ್ಟಿ, ರೈನಾಪೂರ, ಸೊಪ್ಪಡ್ಲ, ಸತ್ತಿಗೇರಿ, ಕೊಡ್ಲಿವಾಡ, ತಾವಲಗೇರಿ ಹೀಗೆ ವಿವಿಧ ಗ್ರಾಮಸ್ಥರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.