ಅಶ್ಲೀಲ ಪದ ಬಳಕೆ : ಸಿ.ಟಿ.ರವಿ ವಿರುದ್ದ ಪ್ರತಿಭಟನೆ

Use of foul language: Protest against CT Ravi

ಅಶ್ಲೀಲ ಪದ ಬಳಕೆ : ಸಿ.ಟಿ.ರವಿ ವಿರುದ್ದ ಪ್ರತಿಭಟನೆ 

ಹಾನಗಲ್ 21: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ವಿಧಾನ ಪರಿಷತ್ ಅಧಿವೇಶನದಲ್ಲಿ ಬಿಜೆಪಿಯ ಸದಸ್ಯ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಅಶ್ಲೀಲ ಶಬ್ಧ ಬಳಸಿದ ಹಿನ್ನೆಲೆಯಲ್ಲಿ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ರಸ್ತೆ ಮಧ್ಯೆ ಟೈರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು. 

       ಕನಕ ವೃತ್ತದಲ್ಲಿ ದಿಢೀರ್ ಪ್ರತಿಭಟನೆ ನಡೆಸಿ,ಬಿಜೆಪಿ ವಿರುದ್ಧ ಘೋಷಣೆ ಕೂಗಲಾಯಿತು. ಅಶ್ಲೀಲ ಪದ ಬಳಕೆ ಮಾಡುವ ಮೂಲಕ ಇಡೀ ಮಹಿಳಾ ಕುಲವನ್ನು ಅವಮಾನಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು. 

      ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗೀತಾ ಪೂಜಾರ ಮಾತನಾಡಿ ಮಾತೆತ್ತಿದರೆ ಧರ್ಮ,ದೇಶ ಎಂದು ಮಾತನಾಡುವ ಬಿಜೆಪಿ ಮುಖಂಡರ ವರ್ತನೆ ಹೇಳುವುದು ಆಚಾರ, ತಿನ್ನುವುದು ಬದನೆಕಾಯಿ ಎನ್ನುವಂತಿದೆ. ಬಿಜೆಪಿಗರದ್ದು ಡೋಂಗಿ ದೇಶಭಕ್ತಿ. ಚಿಂತಕರ ಚಾವಡಿ ಎಂದು ಕರೆಯಿಸಿಕೊಳ್ಳುವ ವಿಧಾನ ಪರಿಷತ್ತಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರೊಂದಿಗೆ ಸಿ.ಟಿ.ರವಿ ನಡೆದುಕೊಂಡ ರೀತಿ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಲಕ್ಷ್ಮೀ ಹೆಬ್ಬಾಳ್ಕರ್ ನೊಂದುಕೊಂಡಿರುವ ಶಾಪ ಬಿಜೆಪಿಗೆ ತಟ್ಟದೇ ಬಿಡದು ಎಂದು ವಾಗ್ದಾಳಿ ನಡೆಸಿದರು.ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ, ಅನಿತಾ ಶಿವೂರ, ಮಂಗಳಾ ಬೆಣ್ಣಿ ಸೇರಿದಂತೆ ಅನೇಕರಿದ್ದರು.