ಭಗವಂತನ ಓಲೈಕೆಗೆ ನಿಸ್ವಾರ್ಥ ಮತ್ತು ನಿಷ್ಕಲ್ಮಶ ಭಕ್ತಿ ಅವಶ್ಯ
ವಿಜಯಪುರ 22: ಮನುಷ್ಯನ ಅಂತರಂಗದ ವಿಕಾಸದ ಮೂಲಕ ವ್ಯಕ್ತಿಯಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುವುದೇ ಭಕ್ತಿ. ನಮ್ಮ ಭಕ್ತಿ ತೋರಿಕೆಗೆ ಮಾತ್ರ ಆಗಿರದೇ ಅದು ನಿಸ್ವಾರ್ಥ ಮತ್ತು ನಿಷ್ಕಲ್ಮಶವಾದ ಮನಸ್ಸಿನಿಂದ ಕೂಡಿರಬೇಕು. ಭಕ್ತಿಯಲ್ಲಿ ಮೂರು ವಿಧಗಳು- ಹರಕೆಯ ಭಕ್ತಿ, ತಿರುಕಿಯ ಭಕ್ತಿ ಮತ್ತು ಬೆರಕಿಯ ಭಕ್ತಿ. ನಾವು ದಿನನಿತ್ಯ ಧ್ಯಾನ, ಭಕ್ತಿ ಮತ್ತು ಸತ್ಕಾರ್ಯಗಳ ಮೂಲಕ ಪರಶಿವನನ್ನು ಕಾಣಬೇಕು. ಭಗವದ್ಗೀತೆಯಲ್ಲಿ ಅಧ್ಯಾಯ 12 ರಲ್ಲಿ ಶ್ರೀಕೃಷ್ಣ “ಭಗವಂತನನ್ನು ನೈಜವಾಗಿ ಕಾಣಬೇಕೆಂದರೆ ನಿಷ್ಕಾಮ ಭಕ್ತಿ ಇರಬೇಕು. ಸದಾ ಭಗವದ್ಚಿಂತನೆಯಲ್ಲಿ ತೊಡಗುತ್ತಾ, ಸಹಾಯ ಬಯಸಿ ಬಂದವರಿಗೆ ನಮ್ಮ ಕೈಲಾದಷ್ಟು ಸಹಾಯ ಅಥವಾ ಪರೋಪಕಾರ ಮಾಡಿದಾಗ ಮಾತ್ರ ಅವರ ರೂಪದಲ್ಲಿ ನಾವು ಭಗವಂತ ನಮಗೆ ಕಾಣಸಿಗುತ್ತಾನೆ. ಗೋರಖ ಕುಂಬಾರ ಮತ್ತು ಸೊನ್ನಲಿಗೆಯ ಸಿದ್ದರಾಮ ಇವರ ಭಕ್ತಿಗೆ ಮೆಚ್ಚಿ ಸ್ವತಃ ಪರಮಾತ್ಮನೇ ಪ್ರತ್ಯಕ್ಷನಾಗಿ ಅವರ ಕೈಹಿಡಿದು ನಡೆಸಿದ್ದಾನೆ ಎಂಬ ಪ್ರತೀತಿಯಿದೆ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಅದರಲ್ಲಿ ವಿಶೇಷವಾಗಿ ಬೀಸುವ ಕಲ್ಲಿನ ಪದ, ಜೋಗುಳ ಪದ, ಗರತಿಯ ಹಾಡುಗಳು, ಹಂತಿ ಪದ ಮತ್ತು ಮಗಳು ಗಂಡನ ಮನೆಯಲ್ಲಿ ಹೇಗೆ ಬದುಕಬೇಕು, ಇತರರೊಂದಿಗೆ ಹೇಗೆ ಇರಬೇಕು, ಮನೆತನ ಕೀರ್ತಿ ಎತ್ತಿ ಹಿಡಿಬೇಕು ಎಂಬ ಬದುಕುವ ರೀತಿ, ನೀತಿ ಮತ್ತು ಸಂಸಾರದ ಸೂಕ್ಷ್ಮತೆಗಳ ಬಗ್ಗೆ ತಾಯಿಯಾದವಳು ಮಗಳಿಗೆ ಬುದ್ದಿವಾದ ಹೇಳುವದು ಇಂತಹ ನಮ್ಮ ಜಾನಪದ ಸೊಗಡು, ಸಂಸ್ಕೃತಿ ಮತ್ತು ಭವ್ಯತೆಗಳ ಪ್ರತಿಬಿಂಬವಾಗಿರುವ ನಮ್ಮ ಮೂಲ ಜನಪದ ಸಂಸ್ಕೃತಿ-ಸಂಸ್ಕಾರ ಮತ್ತು ಪರಂಪರೆಗಳು ಮಾಯವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಪರಮಪೂಜ್ಯ ಶಂಕರಾನಂದ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು. ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಸೇನಾ ನಗರದಲ್ಲಿರುವ ಶಿವಾಲಯ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಹಮ್ಮಿಕೊಂಡ ಪ್ರವಚನದ 3 ನೇ ದಿನದ ಪ್ರವಚನದಲ್ಲಿ “ನಿಷ್ಕಾಮ ಭಕ್ತಿ ಮತ್ತು ಜನಪದ ಸಂಸ್ಕೃತಿ” ವಿಷಯ ಕುರಿತು ಮಾತನಾಡುತ್ತಿದ್ದರು. ಅವರು ಮಾತನಾಡುತ್ತಾ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವಂತೆ ತಾಯಿಯೇ ಮೊದಲ ಗುರುವಾಗಿರುವದರಿಂದ ಪ್ರತಿ ಮನೆಯಲ್ಲಿ ಮುತ್ತೈದೆಯರ ಸಂಕೇತವಾಗಿರುವ ಮುತ್ತೈದೆಯರ ಐದು ಮುಖ್ಯವಾದ ಮುತ್ತುಗಳೆಂದರೆ, ತಾಳಿ, ಅರಿಷಿಣ ಮತ್ತು ಕುಂಕುಮ, ಬಳೆ ಮತ್ತು ಕಾಲುಂಗುರ ಇವುಗಳನ್ನು ಉಡಲು ಮಕ್ಕಳಿಗೆ ತಿಳಿಸಿ ಹೇಳಿ, ನಮ್ಮ ಸಂಸ್ಕೃತಿ ಮುಂದಿನ ಜನಾಂಗಕ್ಕೂ ಉಳಿಸಿ-ಬೆಳಸಬೇಕೆಂದು ಸಲಹೆ ನೀಡಿದರು. ಪಾಶ್ಚಾತ್ಯೀಕರಣದ ಗಾಢ ಪ್ರಭಾವದಿಂದ ಜನಪದ ಸಾಹಿತ್ಯಿಕ ಕಲೆ-ಕೌಶಲ್ಯಗಳು ಮಹವಾಗುತ್ತಿರುವ ಇಂದಿನ ದಿನಗಳಲ್ಲಿ ಮುಂದಿನ ಪೀಳಿಗೆಗೆ ಅರಿವು ಮೂಡಿಸಬೇಕೆಂಬ ಉದ್ದೇಶದಿಂದ ವಚನ ಕಂಠಪಾಠ/ಗಾಯನ ಸ್ಪರ್ಧೆ ಮತ್ತು ಒಡಪು (ಗಂಡ/ಹೆಂಡತಿ ಹೆಸರು ಹೇಳುವ) ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಗಳಲ್ಲಿ ಮಕ್ಕಳು, ಮಹಿಳೆಯರು ಮತ್ತು ಪುರುಷರು ಭಾಗವಹಿಸಿದ್ದು ವಿಶೇಷವಾಗಿತ್ತು. ಇದೇ ಸಂದರ್ಭದಲ್ಲಿ ದೇಣಿಗೆ ದೇವಸ್ಥಾನದ ಅಭಿವೃದ್ಧಿಗೆ ತನು-ಮನ-ಧನದಿಂದ ದೇಣಿಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬಸಯ್ಯ ಶಾಸ್ತ್ರೀ ಅರ್ಚಕರು, ಗುರುಬಸಯ್ಯ ಹಿರೇಮಠ, ಚನ್ನವೀರ ಗೋಂಧಳಿ, ಪ್ರಫುಲ ನಿಂಬಾಳಕರ, ವಿಶ್ವನಾಥ ತೋಟದ, ಅಲ್ಲಮಪ್ರಭು ಶಿರಹಟ್ಟಿ, ಕಾಶಿಲಿಂಗ ಶೇಗಾವಿ, ಅಪ್ಪಾಸಾಹೇಬ ಹಂಚಿನಾಳ, ರೇಣುಕಾ ಗಂಜಾಳ, ಸುನೀತಾ ವಳಸಂಗ, ಶಕುಂತಲಾ ಅಂಕಲಗಿ ಇನ್ನಿತರರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ನವರಸಪುರದ ಎಲ್ಲ ಬಡಾವಣೆಗಳ ಸುಮಾರು ನೂರಾರು ಹಿರಿಯರು, ಮಹಿಳೆಯರು, ಮಕ್ಕಳು ಯುವಕರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.