ಮಹಿಳಾ ವಿವಿಯಲ್ಲಿ ವಿಶಿಷ್ಟ ವಿಜ್ಞಾನ ಮಾದರಿ ಪ್ರದರ್ಶನ

ಮಹಿಳಾ ವಿವಿಯಲ್ಲಿ ವಿಶಿಷ್ಟ ವಿಜ್ಞಾನ ಮಾದರಿ ಪ್ರದರ್ಶನ Unique science model exhibition at women's university

ವಿಜಯಪುರ  11: ವಿಜ್ಞಾನ ಎಂಬುದು ಕೇವಲ ಪಠ್ಯಪುಸ್ತಕದ ಸಿದ್ಧಾಂತವಲ್ಲ, ಅದು ನಮ್ಮ ಸುತ್ತಲಿನ ಜಗತ್ತನ್ನು ಅರ್ಥೈಸಿಕೊಳ್ಳುವ ಒಂದು ದೃಷ್ಟಿಕೋನ. ಈ ದೃಷ್ಟಿಕೋನಕ್ಕೆ ಸೃಜನಶೀಲತೆಯ ಸ್ಪರ್ಶ ನೀಡಿದರೆ ಎಂತಹ ಅದ್ಭುತಗಳು ಸೃಷ್ಟಿಯಾಗಬಲ್ಲವು ಎಂಬುದಕ್ಕೆ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ನಡೆದ ವಿಜ್ಞಾನ ಮಾದರಿ ಪ್ರದರ್ಶನವೇ ಸಾಕ್ಷಿ.  ರಾಷ್ಟ್ರೀಯ ವಿಜ್ಞಾನ ದಿನಾಚರಣೆಹಿ2026 ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಕೇವಲ ವಿದ್ಯಾರ್ಥಿಗಳಾಗಿ ಉಳಿಯದೆ ನಾಳೆಯ ವಿಜ್ಞಾನಿಗಳಾಗಿ ಕಣ್ಣೆದುರು ನಿಂತಿದ್ದರು. ವಿಶ್ವವಿದ್ಯಾನಿಲಯದ ಸೈನ್ಸ್‌ ಬ್ಲಾಕ್ ನಲ್ಲಿ ಹಮ್ಮಿಕೊಂಡಿದ್ದ ಈ ಪ್ರದರ್ಶನದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ವಿಭಿನ್ನ ಮಾದರಿಗಳನ್ನು ತಯಾರಿಸಿದ್ದರು. ವಿದ್ಯಾರ್ಥಿನಿಯರು ಕಳೆದ ಕೆಲವು ದಿನಗಳಿಂದ ಶ್ರದ್ಧೆ ಮತ್ತು ಶ್ರಮವಹಿಸಿ ಸಿದ್ಧಪಡಿಸಿದ ವಿಭಿನ್ನ ಮಾದರಿಗಳು ನೋಡುಗರ ಗಮನ ಸೆಳೆದವು.  

ಪ್ರದರ್ಶನದಲ್ಲಿ ಕಂಡುಬಂದ ಪ್ರಮುಖ ಮಾದರಿಗಳೆಂದರೆ ಡಿಎನ್‌ಎ ವಕಿಂರ್ಗ್ ಮಾಡೆಲ್, ರಿಪ್ರೊಡಕ್ಷನ್ ಸಿಸ್ಟಮ್, ಬ್ಯಾಕ್ಟೀರಿಯಲ್ ಟ್ರಾನ್ಸಾಡಕ್ಷನ್, ಪ್ಲಾಂಟ್ ಸೆಲ್ ಡೈಜೆಸ್ಟಿವ್ ಸಿಸ್ಟಮ್, ಅನಿಮಲ್ ಸೆಲ್ ಮಾಡೆಲ್, ಫ್ರೂಟ್ಸ್‌ ಅಂಡ್ ಸೀಡ್ಸ್‌ ಡೈವರ್ಸಿಟಿ, ಆಬ್ಜೆಕ್ಟ್‌ ಸೆನ್ಸಿಂಗ್ ರೋಬೋಟ್, ಕಾರ್ಬನ್ ಪ್ಯೂರಿಪಿಕೇಶನ್ ಇನ್ ಇಂಡಸ್ಟ್ರೀಸ್, ವಾಟರ್ ಪ್ಯೂರಿಫಿಕೇಶನ್ ಎಮರ್ಜೆನ್ಸಿ ಸೆಕ್ಯೂರಿಟಿ, ಸಾಲಿಡ್ ವೆಸ್ಟ್‌ ಮ್ಯಾನೇಜ್ಮೆಂಟ್, ಆರ್ಟಿಫಿಶಿಯಲ್ ಪಾಂಡ್ ಎಕೋ ಸಿಸ್ಟಮ್, ಇಂಟಿಗ್ರೇಟೆಡ್ ಫಾಮಿಂರ್ಗ್, ಐಸೋಲೇಟಿಂಗ್ ಮೆಡಿಕಲ್ ಕಾಂಪೌಂಡ್ಸ್‌ ಫ್ರಮ್ ಪ್ಲಾಂಟ್ಸ್‌, ಗ್ರೀನ್ ರೋಬೋಟ್ ಹಾಗೂ ರೇನ್ ವಾಟರ್ ಹಾರ್ವೆಸ್ಟಿಂಗ್ ಸೇರಿದಂತೆ ಹಲವಾರು ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶನಕ್ಕೆ ಇಟ್ಟಿದ್ದರು. 

ಪಠ್ಯಪುಸ್ತಕದ ಪುಟಗಳಲ್ಲಿದ್ದ ಜೀವಕೋಶದ ರಚನೆಗೆ ಡಿಎನ್‌ಎ ಮಾಡೆಲ್ ಮೂಲಕ ಜೀವ ತುಂಬಿದ್ದರು. ಕೈಗಾರಿಕಾ ಕ್ಷೇತ್ರದಲ್ಲಿ ಕ್ರಾಂತಿ ಮಾಡಬಲ್ಲ ಕ್ರೇನ್ ರೋಬೋಟ್ ಹಾಗೂ ಅಡೆತಡೆಗಳನ್ನು ತಾನೇ ಗುರುತಿಸುವ ಆಬ್ಜೆಕ್ಟ್‌ ಸೆನ್ಸಿಂಗ್ ರೋಬೋಟ್ ಗಳನ್ನು ತಯಾರಿಸಿ, ತಂತ್ರಜ್ಞಾನ ಎಂಬುದು ಕೇವಲ ಪುರುಷರ ಸ್ವತ್ತಲ್ಲ ಎಂಬುದನ್ನು ಸಾಬೀತುಪಡಿಸಿದರು. ಕೇವಲ ಪ್ರದರ್ಶನವಷ್ಟೇ ಅಲ್ಲದೆ, ಪ್ರತಿಯೊಬ್ಬ ವೀಕ್ಷಕನಿಗೂ ಆ ಮಾದರಿಗಳ ಹಿಂದಿರುವ ವಿಜ್ಞಾನವನ್ನು ಅತ್ಯಂತ ಸರಳವಾಗಿ ಮತ್ತು ಸ್ಪಷ್ಟವಾಗಿ ವಿವರಿಸುತ್ತಿದ್ದ ರೀತಿ, ಅವರಲ್ಲಿನ ವಿಷಯದ ಆಳವಾದ ಜ್ಞಾನ ಮತ್ತು ಸಂವಹನ ಕಲೆಗೆ ಸಾಕ್ಷಿಯಾಗಿತ್ತು. ಪರಿಸರ ಕಾಳಜಿಯ ಮಳೆ ನೀರು ಕೊಯ್ಲು ಮತ್ತು ತ್ಯಾಜ್ಯ ನಿರ್ವಹಣೆಯಂತಹ ಮಾದರಿಗಳ ಮೂಲಕ ಅವರು ಸಮಾಜಕ್ಕೆ ವಿಜ್ಞಾನದ ದಾರಿಯನ್ನು ತೋರಿಸಿಕೊಟ್ಟರು.

ಪ್ರದರ್ಶನದ ಕೊನೆಯಲ್ಲಿ ವಿದ್ಯಾರ್ಥಿನಿಯರ ಮುಖದಲ್ಲಿ ಕಾಣುತ್ತಿದ್ದ ಆ ಯಶಸ್ಸಿನ ನಗು ಕೇವಲ ಒಂದು ಪ್ರಶಸ್ತಿಗಾಗಿ ಇರಲಿಲ್ಲ. ಬದಲಾಗಿ, ನಾವು ಏನನ್ನಾದರೂ ಸಾಧಿಸಬಲ್ಲೆವ ಎಂಬ ಆತ್ಮವಿಶ್ವಾಸದ ಪ್ರತೀಕವಾಗಿತ್ತು. ವಿಜಯಪುರದ ಈ ಮಣ್ಣಿನ ಮಕ್ಕಳು ಇಂದು ತಯಾರಿಸಿದ ಸಣ್ಣ ರೋಬೋಟ್ ಅಥವಾ ಪರಿಸರ ಮಾದರಿಗಳು ಮುಂದೊಂದು ದಿನ ದೇಶದ ದೊಡ್ಡ ವಿಜ್ಞಾನ ಸಂಶೋಧನೆಗಳಿಗೆ ಅಡಿಪಾಯವಾಗುವುದರಲ್ಲಿ ಸಂಶಯವಿಲ್ಲ. 

ವಿಜ್ಞಾನ ಎಂಬುದು ಕೇವಲ ವಿಷಯವಲ್ಲ, ಅದೊಂದು ಜೀವನ ದೃಷ್ಟಿ. ಈ ಪ್ರದರ್ಶನವು ಪ್ರತಿಯೊಬ್ಬ ವಿದ್ಯಾರ್ಥಿನಿಯಲ್ಲಿಯೂ ಒಬ್ಬ ಮಹಾನ್ ವಿಜ್ಞಾನಿಯನ್ನು ಜಾಗೃತಗೊಳಿಸುವಲ್ಲಿ ಯಶಸ್ವಿಯಾಯಿತು. ಪ್ರದರ್ಶನ ವೀಕ್ಷಿಸಿದ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಸಿಂಡಿಕೇಟ್ ಸದಸ್ಯೆ ಡಾಮಲ್ಲಮ್ಮ ಯಾಳವಾರ, ಕುಲಸಚಿವ ಶಂಕರಗೌಡ ಸೋಮನಾಳ ಅವರು ಯಶಸ್ವಿ ವಿಜ್ಞಾನ ಪ್ರದರ್ಶನದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳ ಕಾರ್ಯವೈಖರಿ ಪ್ರಶಂಸಿಸಿದರು.