ಕೇಂದ್ರ ಸಚಿವ ಅಮಿತ್ ಶಾ ಅವಮಾನಕರ ಹೇಳಿಕೆ: ಎಚ್.ಎಫ್. ಐ. ಖಂಡನೆ ಪ್ರತಿಭಟನೆ
ರಾಣೇಬೆನ್ನೂರು 22: ಕಳೆದ ಡಿಸೆಂಬರ್ 17ರಂದು ರಾಜ್ಯಸಭೆ ರಾಜ್ಯಸಭೆಯ ಭಾಷಣವೊಂದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರು ಅಂಬೇಡ್ಕರ್ ಬಗ್ಗೆ ಅವಮಾನಕರ ಹೇಳಿಕೆ ನೀಡಿರುವುದನ್ನು ಖಂಡಿಸಿದ ಡಾ. ಬಿ.ಆರ್. ಅಂಬೇಡ್ಕರ್ ಸೇವಾ ಸಂಸ್ಥೆ , ಭಾರತ ವಿದ್ಯಾರ್ಥಿ ಪೆಡರೇಷನ್ (ಎಸ್. ಎಫ್. ಐ),ಭೀಮ್ ಆರ್ಮಿ, ಛಲವಾದಿ ಮಹಾಸಭಾ ಹಾಗೂ ವಿವಿಧ ದಲಿತಪರ ಹಾಗೂ ಪ್ರಗತಿಪರ ಒಕ್ಕೂಟದಿಂದ ನಗರದಲ್ಲಿ ಪ್ರತಿಭಟನೆ ನಡೆಸಿದರು. ಹೇಳಿಕೆಯನ್ನು ಖಂಡಿಸಿರುವ ಸಂಘಟನೆಗಳು ರಾಣೆಬೆನ್ನೂರು ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ತಮ್ಮ ಮನವಿಯನ್ನು ಸಲ್ಲಿಸಿ ರಾಜೀನಾಮೆಗೆ ಒತ್ತಾಯಿಸಿದರು. ಮನವಿ ಸಲ್ಲಿಕೆ ಮುಂಚೂಣಿಯಲ್ಲಿದ್ದ ಯುವ ಮುಖಂಡ ಬೀರ್ಪ ಲಮಾಣಿಅವರು, ಅಂಬೇಡ್ಕರ್ ಅವರ ಹೆಸರನ್ನು ಪದೇ ಪದೇ ಬಳಸುವುದು ಕೆಲವರಿಗೆ ಶೋಕಿಯಾಗಿಬಿಟ್ಟಿದೆ. ಅಂಬೇಡ್ಕರ್ ಅವರ ಹೆಸರನ್ನು ಬಳಸಿದಷ್ಟು ಏನಾದರೂ ದೇವರ ಹೆಸರನ್ನು ಬಳಸಿದ್ದರೆ ಇಷ್ಟು ಹೊತ್ತಿಗೆ ಏಳು ಜನ್ಮದವರೆಗೆ ಸ್ವರ್ಗ ಸಿಗುತ್ತಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ರವರು ರಾಜ್ಯ ಸಭೆಯಲ್ಲಿ ಹೇಳಿದ್ದು ಅವರ ಈ ಹೇಳಿಕೆ ಅಂಬೇಡ್ಕರ್ ಹಾಗೂ ದಲಿತರ ಬಗ್ಗೆ ಇರುವ ವಿರೋಧಿ ಧೋರಣೆ ಯಾವ ರೀತಿ ಇದೆ ಎನ್ನುವುದು ತೋರಿಸಿಕೊಡುತ್ತಿದೆ. ಭಾರತ ದೇಶಕ್ಕೆ ಇಂದು ಜಗತ್ತಿನಾದ್ಯಾಂತ ಕೊಂಡಾಡುವಂತಹ ಬೃಹತ್ ಸಂವಿಧಾನ, ಸುಭದ್ರ ಪ್ರಜಾಪ್ರಭುತ್ವ ಕೊಟ್ಟಿರುವಂತಹ ಸಂವಿಧಾನ ಶಿಲ್ಪಿಗೆ, ಮೇರು ಪ್ರತಿಭೆಗೆ ನೀಡಿರುವ ಅವಮಾನಕರ ಹೇಳಿಕೆ ಖಂಡನಿಯವಾಗಿದೆ. ಎಂದರು.ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾದ ದಲಿತ ಶೋಷಿತ ಮಹಿಳೆಯರನ್ನು, ಹಿಂದುಳಿದ ಅಲ್ಪಸಂಖ್ಯಾತ ಸಮುದಾಯಗಳನ್ನು ಗುಲಾಮಗಿರಿಯಿಂದ ಸಂವಿಧಾನದ ಮೂಲಕ ಮುಕ್ತಿ ಮಾಡಿದ್ದು ಡಾ. ಬಾಬಾಸಾಹೇಬ್ ಅಂಬೇಡ್ಕರವರೇ ಹೊರತು ಯಾವ ಧರ್ಮ, ಮತ್ತು ದೇವರುಗಳಲ್ಲ ಎಂದು ಕಿಡಿ ಕಾರಿದರು.ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ ನಾವೆಲ್ಲಾ ಇಂದು ಉತ್ತಮ ಜೀವನ ನಡೆಸೋಕೆ ಹಾಗೂ ಅಮಿತ್ ಶಾ ಮೋದಿಯಂತಹ ನಾಯಕರು ಇಂದು ಅಧಿಕಾರವನ್ನು ನಡೆಸುತ್ತಿರುವುದು ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಎನ್ನುವದು ಕೇಂದ್ರ ಸಚಿವ ಅಮಿತ್ ಷಾ ಮರೆತಂತಿದೆ. ಕೂಡಲೇ ಮನವಿಯನ್ನು ಪುರಸ್ಕರಿಸಿ, ಪರೀಶೀಲಿಸಿ ಹೇಳಿಕೆ ನೀಡಿ ಅವಮಾನಿಸಿರುವ ಅಮಿತ್ ಶಾ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ಕೇಂದ್ರ ಸಚಿವ ಸಂಪುಟದಿಂದ ಮಜಾ ಗೊಳಿಸಬೇಕು ಎಂದು ಆಗ್ರಹಿಸಿದರು. ಛಲವಾದಿ ಮಹಾಸಭಾದ ತಾಲ್ಲೂಕ ಅಧ್ಯಕ್ಷ ಬಸವರಾಜ್ ಸಾವಕ್ಕನವರ, ಮಾತನಾಡಿ, ಕೇಂದ್ರ ಸರ್ಕಾರದ ಇಂತಹ ದಲಿತ ವಿರೋಧಿ ಹೇಳಿಕೆಗಳು ದಲಿತರನ್ನು ಹಾಗೂ ಅಂಬೇಡ್ಕರ್ ರವರನ್ನು ಗುರಿಯಾಗಿಸಿಕೊಂಡು ಅವಮಾನ ಮಾಡುವ ಉದ್ದೇಶದಿಂದಲೇ ಉದ್ದೇಶ ಪೂರ್ವಕವಾಗಿ ಮಾತನಾಡಿದಂತಿದೆ. ಎಂದರು.ಅಂಬೇಡ್ಕರ್ ಸೇವಾ ಸಂಸ್ಥೆ ಸಂಸ್ಥಾಪಕ ಶ್ರೀಧರ್ ಸಿ, ಅಂಬೇಡ್ಕರ್ ಹೆಸರನ್ನು ಬಿಟ್ಟು ದೇವರ ಜಪ ಮಾಡಿ ಸ್ವರ್ಗ ಸಿಗುತ್ತೆ ಎಂದು ಹೇಳುವ ಮೌಢ್ಯದ ಹೇಳಿಕೆ ನಿಜವಾಗಲೂ ಅಂಬೇಡ್ಕರ್ ಆಶಯಗಳನ್ನು, ಅವರ ಚಿಂತನೆಗಳನ್ನು ಈ ದೇಶದಿಂದ ಕಣ್ಮರೆಗೊಳಿಸಿ, ಸಂವಿಧಾನವನ್ನು ಬದಲಾವಣೆ ಮಾಡುವ ಮುನ್ಸೂಚನೆಯಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಕೇವಲ ಹೆಸರಲ್ಲ; ಅವರು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸಾಂವಿಧಾನಿಕ ಮೌಲ್ಯಗಳ ಐಕಾನ್ ಆಗಿದ್ದಾರೆ. ಆಧುನಿಕ ಭಾರತವನ್ನು ನಿರ್ಮಿಸಲು ಅವರು ನೀಡಿದ ಕೊಡುಗೆಗಳು ಅಪಾರ, ತಮ್ಮ ಇಡೀ ಜೀವನವನ್ನೇ ಶೋಷಿತರಿಗಾಗಿ ಈ ದೇಶಕ್ಕಾಗಿ ತ್ಯಾಗ ಮಾಡಿದ ಅವರಿಗೆ ಮಾಡುವ ಯಾವುದೇ ಅಗೌರವವು ಭಾರತೀಯರು ಸಹಿಸಲು ಸಾಧ್ಯವಿಲ್ಲ ಎಂದರು.ಈ ಸಂದರ್ಭದಲ್ಲಿ ಛಲವಾದಿ ಮುಖಂಡ ಆಂಜನೇಯ ಚಲವಾದಿ, ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಮಲ್ಲೇಶ್ ನಿಂಗಮ್ಮನವರ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರಾದ ಪರಶುರಾಮ ಕುರುವತ್ತಿ, ಎಸ್. ಎಪ್. ಐ. ಮುಖಂಡರಾದ ಗುಡ್ಡಪ್ಪ ಮಡಿವಾಳರ, ನವೀನ್ ಲಮಾಣಿ, ಮಹೇಶ್, ಅಂಬೇಡ್ಕರ್ ಸೇವಾ ಸಂಸ್ಥೆ ಪದಾಧಿಕಾರಿಗಳಾದ ಮಾಲತೇಶ್ ಸಾವಕ್ಕನವರ, ಗುಡ್ಡೇಶ್ ಮದ್ಲೇರ , ಸಚಿನ್, ಸಂತೋಷ್ ಸಾ ಸಾವಕ್ಕನವರ, ಕಾರ್ಮಿಕ ಮುಖಂಡ ಅರುಣ್ ಚಲವಾದಿ ಸೇರಿದಂತೆ ಅಂಬೇಡ್ಕರ್ ಅಭಿಮಾನಿಗಳು ಹಾಗೂ ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.