ಒಂದು ದೇಶ, ಒಂದು ಚುನಾವಣೆ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ
ನವದೆಹಲಿ 12: ಒಂದು ದೇಶ ಒಂದು ಚುನಾವಣೆ ಮಸೂದೆಗೆ ಕೇಂದ್ರ ಸಚಿವ ಸಂಪುಟವು ಗುರುವಾರ ಒಪ್ಪಿಗೆ ಸೂಚಿಸಿದೆ.
ಇದೇ ಚಳಿಗಾಲದ ಅಧಿವೇಶನದಲ್ಲಿ ಒಂದು ದೇಶ, ಒಂದು ಚುನಾವಣೆ ಮಸೂದೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಂಡಿಸಲು ಸಿದ್ಧತೆ ನಡೆಸಿದೆ ಎಂದು ಡಿ. 9ರಂದು ವರದಿಯಾಗಿತ್ತು. ಒಂದು ದೇಶ, ಒಂದು ಚುನಾವಣೆ’ ವ್ಯವಸ್ಥೆಯ ಬಗ್ಗೆ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಸಮಿತಿ ಸರ್ಕಾರಕ್ಕೆ ಶಿಫಾರಸುಗಳನ್ನು ಸಲ್ಲಿಸಿತ್ತು. ಇದನ್ನು ಕೇಂದ್ರ ಸರ್ಕಾರ ಅಂಗೀಕರಿಸಿತ್ತು.
ಮೊದಲ ಹಂತವಾಗಿ, ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ. ಮುಂದಿನ ಹಂತದಲ್ಲಿ, ನಗರ ಪಾಲಿಕೆಗಳು ಹಾಗೂ ಪಂಚಾಯಿತಿಗಳಿಗೆ 100 ದಿನಗಳ ಒಳಗಾಗಿ ಚುನಾವಣೆ ನಡೆಸಬೇಕು ಎಂದು ಅದು ಹೇಳಿದೆ. ಇಡೀ ಪರಿಕಲ್ಪನೆಯ ಅನುಷ್ಠಾನಕ್ಕೆ ಪ್ರಕ್ರಿಯೆಗಳನ್ನು ಹಾಗೂ ಮಾರ್ಗವನ್ನು ಸಮಿತಿಯು ತೋರಿಸಿಕೊಟ್ಟಿದೆ. ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲು ಸಂವಿಧಾನಕ್ಕೆ ಕನಿಷ್ಠ 18 ತಿದ್ದುಪಡಿಗಳನ್ನು ತರಬೇಕು ಎಂದು ಅದು ಹೇಳಿದೆ.