ಕುಷ್ಟಗಿವರೆಗೆ ಪ್ರಯೋಗಾರ್ಥ ರೈಲು ಸಂಚಾರ: ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಕ್ಯಾವಟರ್ ಸಂತಸ
ಕೊಪ್ಪಳ 01: ಬಹು ನೀರೀಕ್ಷಿತ ಗದಗ- ವಾಡಿ ರೈಲ್ವೆ ಯೋಜನೆಯ ಕಾಮಗಾರಿ ಕುಷ್ಟಗಿ ಭಾಗದವರೆಗೆ ಪೂರ್ಣಗೊಂಡಿದ್ದು, ಪ್ರಯೋಗಾರ್ಥ ರೈಲು ಸಂಚಾರ ಯಶಸ್ವಿಯಾಗಿರುವುದು ಸಂತಸ ತಂದಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ವೈದ್ಯ ಬಸವರಾಜ ಕ್ಯಾವಟರ್ ಸಂತಸ ವ್ಯಕ್ತಪಡಿಸಿದರು. ಬೆಂಗಳೂರಿನ ಸಚಿವರ ನಿವಾಸದಲ್ಲಿ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಅವರನ್ನು ಶನಿವಾರ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ ಕ್ಯಾವಟರ್ ಅವರು, ಕೇಂದ್ರ ಸರಕಾರದ ಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮಾರ್ಚ 28ರಂದು ಗದಗ-ವಾಡಿ ಹೊಸ ರೈಲ್ವೆ ಮಾರ್ಗ ವ್ಯಾಪ್ತಿಯಲ್ಲಿ ನಿಂಗಲಬಂಡಿ- ಕುಷ್ಟಗಿವರೆಗೆ ಸಿಆರ್ ಎಸ್ ತಂಡದಿಂದ ರೈಲ್ವೆ ಮಾರ್ಗದ ತಾಂತ್ರಿಕ ತಪಾಸಣೆ, ಪ್ರಯೋಗಾರ್ಥ ರೈಲು ಸಂಚಾರ ಅತ್ಯಂತ ಯಶಸ್ವಿಯಾಗಿ ನಡೆದಿದೆ.ಇದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ ಹಾಗೂ ತಮ್ಮ ಸಹಕಾರದ ಪ್ರತಿಫಲವಾಗಿದೆ. ಹೀಗಾಗಿ ಕೇಂದ್ರ ಸರಕಾರ ಹಾಗೂ ರೈಲ್ವೆ ಇಲಾಖೆಯ ಬದ್ದತೆಗೆ ಅಭಿನಂದಿಸುತ್ತೇನೆ ಎಂದು ಸಚಿವ ಸೋಮಣ್ಣನವರ ಎದುರು ಬಸವರಾಜ ಕ್ಯಾವಟರ್ ಅವರು ಪ್ರಸ್ಥಾಪಿಸಿದ್ದಾರೆ. ಸ್ವಾತಂತ್ರ್ಯ ನಂತರ ಕುಷ್ಟಗಿಗೆ ಬಂದ ಮೊದಲ ರೈಲು ಇದಾಗಿದ್ದು, ಈ ಭಾಗದ ಜನತೆಯ ಹಲವು ದಶಕಗಳ ಕನಸು ಕೊನೆಗೂ ಸಾಕಾರಗೊಂಡಿದೆ.ಆರಂಭಿಕವಾಗಿ ಕುಷ್ಟಗಿ- ಹುಬ್ಬಳ್ಳಿ, ಕುಷ್ಟಗಿ-ಯಶವಂತಪುರ ಮಾರ್ಗವಾಗಿ ರೈಲು ಸಂಚಾರ ಕಲ್ಪಿಸಬೇಕೆನ್ನುವುದು ಜನತೆ ಪ್ರಮುಖ ಬೇಡಿಕೆಯಾಗಿದೆ. ಈ ರೈಲು ಸಂಚಾರದಿಂದ ಸಾರ್ವಜನಿಕರಿಗೆ ಹಾಗೂ ಸರಕು ಸಾಗಾಣಿಕೆಗೆ ಅನಕೂಲವಾಗುವ ಜತೆಗೆ ಭವಿಷ್ಯದಲ್ಲಿ ಆದಾಯ ದ್ವಿಗುಣವಾಗುವ ಭರವಸೆ ಮೂಡಿಸಿದೆ.ಈ ಭಾಗದ ಬಹುದಿನಗಳ ಕನಸು ಗದಗ-ವಾಡಿ ರೈಲ್ವೆ ಯೋಜನೆಯ ತಳಕಲ್ ನಿಂದ ಕುಷ್ಟಗಿವರೆಗೆ ಈ ರೈಲು ಮಾರ್ಗ ವಾಡಿವರೆಗೂ ಪೂರ್ಣಗೊಂಡರೆ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಸಂಪರ್ಕ ಸಾಧ್ಯವಾಗಲಿದೆ. ಜನರ ಆಶೋತ್ತರಗಳಿಗೆ ಸ್ಪಂಧಿಸಿದ ನಮ್ಮ ಕೇಂದ್ರ ಸರಕಾರ ಹಾಗೂ ನೈಋತ್ಯ ರೈಲ್ವೆ ಇಲಾಖೆಗೆ ಮತ್ತೊಮ್ಮೆ ಅಭಿನಂದಿಸಿ, ಧನ್ಯವಾದ ಹೇಳುವೆ ಎಂದು ಸಚಿವರಿಗೆ ತಿಳಿಸಿದ್ದಾರೆ.ಈ ವೇಳೆ ಮುಖಂಡ ನೀಲಕಂಠಯ್ಯ ಹಿರೇಮಠ ಇದ್ದರು.