ಖಿಳೇಗಾಂವ ಬಸವೇಶ್ವರ ಯಾತ ನೀರಾವರಿ ಯೋಜನೆಗೆ ಪ್ರಾಯೋಗಿಕ ಚಾಲನೆ

Trial run for Khilegaon Basaveshwar Yata Irrigation Project

ಖಿಳೇಗಾಂವ ಬಸವೇಶ್ವರ ಯಾತ ನೀರಾವರಿ ಯೋಜನೆಗೆ ಪ್ರಾಯೋಗಿಕ ಚಾಲನೆ 

ಕಾಗವಾಡ 26: ಶಾಸಕ ರಾಜು ಕಾಗೆ ಅವರ ಸತತ ಪ್ರಯತ್ನದ ಫಲವಾಗಿ ಇಂದು ಖಿಖೇಗಾಂವ ಬಸವೇಶ್ವರ ಯಾತ ನೀರಾವರಿ ಯೋಜನೆಯ ಮೊದಲ ಹಂತದ ಪ್ರಾಯೋಗಿಕ ಪರೀಕ್ಷೆ ಸಫಲಗೊಂಡಿದ್ದು, ಇದರಿಂದ ಕ್ಷೇತ್ರದ ಉತ್ತರ ಭಾಗದ ಮದಭಾವಿ ಮತ್ತು ಅರಳಿಹಟ್ಟಿ ಗ್ರಾಮಗಳ ವರೆಗಿನ ಕಾಲುವೆಗಳಿಗೆ ನೀರು ಹರಿಯಲಿದೆಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ.  ಅವರು ರವಿವಾರ ದಿ. 26 ರಂದು ತಾಲೂಕಿನ ಐನಾಪುರದಲ್ಲಿ ಬಸವೇಶ್ವರ ಯಾತ ನೀರಾವರಿ ಯೋಜನೆಯ ಮೊದಲ ಹಂತದ ಪ್ರಾಯೋಗಿಕ ಕಾಲುವೆಗೆ ನೀರು ಹರಿಸುವ ಕಾರ್ಯಕ್ಕೆ ಬಟನ್ ಒತ್ತಿ, ಪಂಪಸೆಟ್‌ಗೆ ಚಾಲನೆ ನೀಡಿ, ಮಾತನಾಡುತ್ತಿದ್ದರು. ಈ ಯೋಜನೆ ಕೆಲ ವರ್ಷಗಳ ಹಿಂದೆಯೇ ಪೂರ್ಣಗೊಳ್ಳಬೇಕಿತ್ತು ಆದರೆ ಹಣಕಾಸು, ತಾಂತ್ರಿಕ ಅಡತಡೆಗಳ ಪರಿಣಾಮ ನಿಗದಿತ ಸಮಯದಲ್ಲಿ ಯೋಜನೆ ಪೂರ್ಣಗೊಳ್ಳಲಿಲ್ಲ.  ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಯೋಜನೆಗೆ ಹಣ ಬಿಡುಗಡೆ ಮಾಡಿರುವ ಪರಿಣಾಮ ಈ ಯೋಜನೆ ಮೊದಲ ಹಂತದಲ್ಲಿ ಪೂರ್ಣಗೊಂಡಿದ್ದು, ಈ ಭಾಗದ ರೈತರ ಬಹುದಿನಗಳ ಕನಸಿ ಈಡೇರದಂತಾಗಿದೆ ಎಂದರು. ರಾಜು ಕಾಗೆ ಮಾತನಾಡಿ, ಕ್ಷೇತ್ರದ ಉತ್ತರ ಭಾಗದ ರೈತರ ಬರಡು ಭೂಮಿಗೆ ನೀರು ಹರಿಸುವ ಬಸವೇಶ್ವರ ಏತ ನೀರಾವರಿ ಯೋಜನೆ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, 1363 ಕೋಟಿ ಅನುದಾನದ ಈ ಯೋಜನೆ 2017 ರಲ್ಲಿ ಪ್ರಾರಂಭಗೊಂಡು, 36 ತಿಂಗಳಲ್ಲಿಯೇ ಪೂರ್ಣಗೊಳ್ಳಬೇಕಿತ್ತು. ಆದರೇ ಅನಿವಾರ್ಯ ಕಾರಣಗಳಿಂದ ವಿಳಂಬವಾಗಿದ್ದು, ಇಂದು ಪ್ರಾಯೋಗಿಕವಾಗಿ ಇದಕ್ಕೆ ಚಾಲನೆ ನೀಡಲಾಗಿದೆ. ಈ ಯೋಜನೆಯಿಂದ ಒಟ್ಟು 27 ಸಾವಿರ ಎಕರೆ ಭೂಮಿ ನೀರಾವರಿ ಒಳಪಡಲಿದೆ. ಸದ್ಯ ಎರಡು ಪಂಪ್‌ಸೆಟ್‌ಗಳಿಗೆ ಮಾತ್ರ ಚಾಲನೆ ನೀಡಲಾಗಿದ್ದು, ಇದರಿಂದ ಮದಭಾವಿ ಹಾಗೂ ಅರಳಿಹಟ್ಟಿ ಗ್ರಾಮದ ಸುಮಾರು 9000 ಎಕರೆ ಪ್ರದೇಶ ನೀರಾವರಿಗೆ ಒಳಪಡಲಿದೆ. 2017 ರಲ್ಲಿ ಸಿಎಂ ಸಿದ್ದರಾಮ್ಯನವರೇ ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ, ಈಗ ಮತ್ತೆ ಅವರೇ ಮುಖ್ಯ ಮಂತ್ರಿಯಾಗಿರುವಾಗಲೇ ಈ ಯೋಜನೆ ಪ್ರಾರಂಭಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದರು. ಈ ವೇಳೆ ಮುಖಂಡರಾದ ಅರುಣ ಗಾಣಿಗೇರ, ಸುರೇಶ ಅಡಿಶೇರಿ, ಸುರೇಶ ಗಾಣಿಗೇರ, ನೀರಾವರಿ ಇಲಾಖೆ ಎಸ್‌ಇ ನಾಗರಾಜ ಬಿ.ಎ., ಇಇ ಪ್ರವೀಣ ಹುಣಸಿಕಟ್ಟಿ, ಎಇಇ ಪ್ರಶಾಂತ ಪೋತದಾರ, ಬಸವರಾಜ ಗಲಗಲಿ, ವಿನಾಯಕ ಬಾಗಡಿ, ದತ್ತಾ ವಾಸ್ಟರ್, ಪ್ರಕಾಶ ಗಾಣಿಗೇರ, ನಾಗೇಶ ಕರಿ, ಶೇಖರ ಮಾನೆ, ರೇವಣ್ಣ ಬರೋಡೆ, ಜಾಪರ್ ಅರ್ತಾಳೆ, ಕಿರಣ ಕಾತ್ರಾಳೆ, ನಾಗೇಶ ಯಲ್ಲಟ್ಟಿ, ಸೇರಿದಂತೆ ಅನೇಕರು ಇದ್ದರು.