ಕೊಪ್ಪಳ 16: ಕೊಪ್ಪಳದ ಕೃಷಿ ಇಲಾಖೆ ಮತ್ತು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಸಹಯೋಗದಲ್ಲಿ ಇರಕಲ್ಲಗಡ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯ ತಾಳಕನಕಾಪುರ ಗ್ರಾಮದಲ್ಲಿ ಮುಂಗಾರು ಬೀಜ ಆಂದೋಲನ ಮತ್ತು ಸುರಕ್ಷಿತ ಕೀಟನಾಶಕ ಬಳಕೆ ಕುರಿತು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತು.
ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಙಾನಿ ಪಿ. ಆರ್. ಬದರಿಪ್ರಸಾದ್ ರವರು ಮಂಜುನಾಥ ಸಂಗಟಿ ಯವರ ಹೊಲದಲ್ಲಿ ತರಬೇತಿ ಹಮ್ಮಿಕೊಂಡಿದ್ದು, ರೈತರಿಗೆ ಬೀಜೋಪಚಾರದ ಮಹತ್ವ ಹಾಗು ಕೃಷಿ ವಿಶ್ವವಿದ್ಯಾಲಯದಿಂದ ಬಿಡುಗಡೆಯಾಗಿರುವ ವಿವಿದ ಬೆಳೆಗಳ ನೂತನ ತಳಿಗಳ ವಿವರವನ್ನು ನೀಡಿದರು. ನಂತರ ರೈತರಿಗೆ ಸುರಕ್ಷಿತ ಪೀಡೆನಾಶಕ ಬಳಕೆ ಹಾಗು ವೈಯುಕ್ತಿಕ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಹಾಗೂ ಮುಂಗಾರು ಬೀಜಗಳ ಬೀಜೋಪಚಾರ ಮಾಡುವ ವಿಧಾನವನ್ನು ಪದ್ದತಿ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ತೋರಿಸಲಾಯಿತು. ಕೃಷಿ ಅಧಿಕಾರಿ ಮಹೇಶ್ ರೈತರಿಗೆ ಇಲಾಖಾ ಕಾರ್ಯಕ್ರಮಗಳ ಮಾಹಿತಿ ಹಾಗು ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ಅಧಿಕಾರಿ ಸಿದ್ರಾಮರೆಡ್ಡಿ ಹಾಗೂ ಅನುವುಗಾರ ಶರಣಪ್ಪ, ಜಾಫರ್, ಚನ್ನಪ್ಪ, ಅಂಬಣ್ಣ ಮತ್ತು ಪ್ರಗತಿಪರ ರೈತರು ಪಾಲ್ಗೊಂಡಿದ್ದರು.